ಮುಂಬೈ: ಮಹಾ ವಿಕಾಸ್ ಅಘಾಡಿ (MVA)ಗೆ ಮತ್ತಷ್ಟು ಮುಜುಗರವನ್ನುಂಟುಮಾಡುವಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಮಹಾರಾಷ್ಟ್ರ ರಾಜ್ಯ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸಾಮೂಹಿಕ ನಾಯಕತ್ವಕ್ಕಾಗಿ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಕೂಡ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯಾಗಿ ತಿರಸ್ಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.
“ನಮ್ಮ ಮೈತ್ರಿಯನ್ನೇ ಮುಂದಿಟ್ಟುಕೊಂಡು ಸಾಮೂಹಿಕ ನಾಯಕತ್ವದಲ್ಲಿ ನಾವು ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ” ಎಂದು ಶರದ್ ಪವಾರ್ ಹೇಳಿದರು.
ಇತ್ತೀಚೆಗಷ್ಟೇ ಸಂಜಯ್ ರಾವತ್ ಅವರು ಮುಖ್ಯಮಂತ್ರಿ ಹುದ್ದೆ ಇಲ್ಲದೆ ಚುನಾವಣೆಗೆ ಹೋಗುವುದು ಅಪಾಯಕಾರಿ ಎಂದು ಹೇಳಿದ್ದರು. “ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಎಂವಿಎ ಅವರನ್ನು ಮುಂದಿಟ್ಟುಕೊಂಡೇ ಲೋಕಸಭೆ ಚುನಾವಣೆಯಲ್ಲಿ ಮತಗಳನ್ನು ಪಡೆದಿದೆ” ಎಂದು ರಾವತ್ ಹೇಳಿದ್ದರು.
ಇದನ್ನೂ ಓದಿ: Maharashtra Polls: ಮಹಾರಾಷ್ಟ್ರ ಚುನಾವಣೆಗೆ ಸಮಾನ ಸೀಟು ಹಂಚಿಕೆ ಸೂತ್ರಕ್ಕೆ ಮಹಾ ವಿಕಾಸ್ ಅಘಾಡಿ ಒಪ್ಪಿಗೆ
ಎನ್‌ಸಿಪಿ (ಶರದ್ ಪವಾರ್) ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸುವುದರಿಂದ ಎಂವಿಎ ಘಟಕಗಳು ದೂರವಿರಬೇಕು. ಅದರ ಬದಲಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದು ಏಕೈಕ ಮಾನದಂಡವಾಗಿರುವುದರಿಂದ ಯಾವುದೇ ಎಂವಿಎ ಮೈತ್ರಿಕೂಟವು ಸ್ಪರ್ಧಿಸುತ್ತಿರುವ ಸ್ಥಾನಗಳ ಸಂಖ್ಯೆಯನ್ನು (ಏಕಪಕ್ಷೀಯವಾಗಿ) ಘೋಷಿಸಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ವಿಭಿನ್ನವಾಗಿರುತ್ತದೆ; ಸೀಟು ಹಂಚಿಕೆ ಬಗ್ಗೆ ದೊಡ್ಡ ಸುಳಿವು ಕೊಟ್ಟ ಶರದ್ ಪವಾರ್
ಈ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ರಾಜ್ಯದ ಒಟ್ಟು 48 ಸ್ಥಾನಗಳ ಪೈಕಿ 21 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಅಂತಿಮವಾಗಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಎನ್‌ಸಿಪಿ (ಎಸ್‌ಪಿ) 10 ಸ್ಥಾನಗಳಲ್ಲಿ ಸ್ಪರ್ಧಿಸಿತು. ಲೋಕಸಭಾ ಚುನಾವಣಾ ಫಲಿತಾಂಶದ ನಂತರ, ಶರದ್ ಪವಾರ್ ನೇತೃತ್ವದ ಪಕ್ಷವು ಸ್ಪರ್ಧಿಸಿದ 10ರಲ್ಲಿ 8 ಸ್ಥಾನಗಳನ್ನು ಗೆದ್ದುಕೊಂಡು ಮೇಲುಗೈ ಸಾಧಿಸಿತು. 2019ರ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕೇವಲ ಒಂದು ಲೋಕಸಭಾ ಸ್ಥಾನವನ್ನು ಗೆದ್ದಿದ್ದ ಕಾಂಗ್ರೆಸ್, ತಾನು ಸ್ಪರ್ಧಿಸಿದ್ದ 17 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಗೆದ್ದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ