ಯಾರು ಈ ಶರ್ಜೀಲ್ ಇಮಾಮ್? ಜೈಲಿನಲ್ಲಿದ್ದುಕೊಂಡೇ ಸಂವಿಧಾನ, ಅಲ್ಪಸಂಖ್ಯಾತ ರಾಜಕೀಯದ ಕುರಿತು ನೀಡಿರುವ ಹೇಳಿಕೆ ಸಂಚಲನಕ್ಕೆ ಕಾರಣವಾಗಿದ್ದೇಕೆ?

ದೆಹಲಿಯ ತಿಹಾರ್ ಜೈಲಿನಿಂದ ಶರ್ಜೀಲ್ ಇಮಾಮ್ ನೀಡಿದ ಸಂದರ್ಶನ ದೇಶಾದ್ಯಂತ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸಂವಿಧಾನ ಮತ್ತು ಅಲ್ಪಸಂಖ್ಯಾತ ರಾಜಕೀಯ ಕುರಿತು ಇಮಾಮ್ ನೀಡಿದ ಹೇಳಿಕೆಗಳನ್ನು ಶೇಖರ್ ಗುಪ್ತಾ 'ಇಸ್ಲಾಮಿಸ್ಟ್ ಪ್ರಣಾಳಿಕೆ' ಎಂದು ಕರೆದಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಇಮಾಮ್ ಪಾತ್ರ ಹಾಗೂ ಯುಎಪಿಎ ಅಡಿಯಲ್ಲಿ ಅವರ ಬಂಧನ ಈ ಚರ್ಚೆಗೆ ಹಿನ್ನೆಲೆಯಾಗಿದೆ.

ಯಾರು ಈ ಶರ್ಜೀಲ್ ಇಮಾಮ್? ಜೈಲಿನಲ್ಲಿದ್ದುಕೊಂಡೇ ಸಂವಿಧಾನ, ಅಲ್ಪಸಂಖ್ಯಾತ ರಾಜಕೀಯದ ಕುರಿತು ನೀಡಿರುವ ಹೇಳಿಕೆ ಸಂಚಲನಕ್ಕೆ ಕಾರಣವಾಗಿದ್ದೇಕೆ?
ಶರ್ಜೀಲ್
Image Credit source: Scroll.in

Updated on: Oct 21, 2026 | 9:30 AM

ದೆಹಲಿ, ಅಕ್ಟೋಬರ್ 21: ದೆಹಲಿಯ ತಿಹಾರ್ ಜೈಲಿನಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತ ಶರ್ಜೀಲ್ ಇಮಾಮ್, ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ದೇಶಾದ್ಯಂತ ವ್ಯಾಪಕ ರಾಜಕೀಯ ಮತ್ತು ಸೈದ್ಧಾಂತಿಕ ಚರ್ಚೆಗೆ ಕಾರಣವಾಗಿದೆ. ಸಂದರ್ಶನದಲ್ಲಿ ಭಾರತದ ಪ್ರಮುಖ ಸಾಂವಿಧಾನಿಕ ತತ್ವಗಳನ್ನು ಪ್ರಶ್ನಿಸಿರುವ ಇಮಾಮ್, ದೇಶದಲ್ಲಿ ಮುಸ್ಲಿಮರಿಗೆ ರಾಜಕೀಯ ಅಧಿಕಾರ ದಕ್ಕದಂತೆ ಮಾಡುವಲ್ಲಿ ಉದಾರವಾದಿಗಳು ಮತ್ತು ಹಿಂದುತ್ವ ಬೆಂಬಲಿಗರು ಇಬ್ಬರೂ ಒಂದೇ ರೀತಿಯ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹೇಳಿಕೆಯನ್ನು ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಕಟುವಾಗಿ ಟೀಕಿಸಿದ್ದು, ಇದನ್ನು ನೇರವಾಗಿ ‘ಇಸ್ಲಾಮಿಸ್ಟ್ ಪ್ರಣಾಳಿಕೆ’ ಎಂದು ಕರೆದಿದ್ದಾರೆ. ಅಲ್ಲದೆ, ಇಂತಹ ಕಲ್ಪನೆಗಳ ವಿರುದ್ಧ ಧ್ವನಿ ಎತ್ತದ ಉದಾರವಾದಿ ಸಮುದಾಯದ ಮೌನವನ್ನು ಅವರು ಪ್ರಶ್ನಿಸಿದ್ದಾರೆ. ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಪ್ರತಿಕ್ರಿಯಿಸಿ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಕರೆಂದು ಹೇಳಿಕೊಳ್ಳುವವರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಮರ್ಶಕರು ಈ ಹೇಳಿಕೆಯನ್ನು ದೇಶ ವಿಭಜನೆಯ ಕಾಲದ ಪ್ರತ್ಯೇಕತಾವಾದಿ ಧೋರಣೆಗೆ ಹೋಲಿಸುತ್ತಿದ್ದರೆ, ಅವರ ಬೆಂಬಲಿಗರು ಮಾತ್ರ ಯಾವುದೇ ವಿಚಾರಣೆ ಪೂರ್ಣಗೊಳ್ಳದೆ ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರಿಸಿದ್ದರ ಹತಾಶೆ ಈ ಮಾತುಗಳಲ್ಲಿ ವ್ಯಕ್ತವಾಗಿದೆ ಎಂದು ವಾದಿಸುತ್ತಿದ್ದಾರೆ.

ಮತ್ತಷ್ಟು ಓದಿ:

ಹಿಂದುತ್ವದ ಬಗ್ಗೆ ಅವಹೇಳನಾಕಾರಿ ಪೋಸ್ಟ್‌ ಪ್ರಕರಣ: ನಟ ಚೇತನ್ ಅಹಿಂಸಾ​​ಗೆ ಜಾಮೀನು

 

ಶರ್ಜೀಲ್ ಇಮಾಮ್ ಯಾರು? ಜೈಲಿನಲ್ಲಿರಲು ಕಾರಣವೇನು?

ಬಿಹಾರ ಮೂಲದ ಶರ್ಜೀಲ್ ಇಮಾಮ್, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಸಂಶೋಧನಾ ವಿದ್ಯಾರ್ಥಿಯಾಗಿದ್ದ. ಐಐಟಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಈತ, 2019-2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರುದ್ಧ ನಡೆದ ಶಾಹೀನ್ ಬಾಗ್ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

2020ರ ಜನವರಿಯಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಮಾತನಾಡುತ್ತಾ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳಿಂದ ಕಡಿದುಹಾಕುವ ಕರೆ ನೀಡಿದ್ದ ಎಂಬ ಆರೋಪ ಇವರ ಮೇಲಿದೆ. ಈ ಭಾಷಣದ ಹಿನ್ನೆಲೆಯಲ್ಲಿ ದೇಶದ್ರೋಹ, ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಹಾಗೂ 2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಸಂಚಿನ ಆರೋಪದಡಿ ದೆಹಲಿ ಪೊಲೀಸರು ಇವರನ್ನು ಬಂಧಿಸಿದ್ದು, ಅಂದಿನಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us