ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಫೋನ್ ಕದ್ದಾಲಿಕೆ, ಉದ್ಯಮಿಗಳ ಬ್ಲ್ಯಾಕ್‌ಮೇಲ್; ಬಿಆರ್‌ಎಸ್ ಮೇಲೆ ಮತ್ತಷ್ಟು ಆರೋಪ

|

Updated on: Mar 26, 2024 | 2:15 PM

ವರದಿಗಳ ಪ್ರಕಾರ, ಆಗಿನ ಬಿರ್​​ಎಸ್ ಸರ್ಕಾರದ ಅಡಿಯಲ್ಲಿ ರಾಜ್ಯ ಗುಪ್ತಚರ ಬ್ಯೂರೋದ ತಾಂತ್ರಿಕ ಸಲಹೆಗಾರ ರವಿ ಪಾಲ್, ರೆಡ್ಡಿ ಅವರ ಸಂಭಾಷಣೆಗಳನ್ನು ಕೇಳಲು ಫೋನ್ ಟ್ಯಾಪಿಂಗ್ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಮತ್ತು  ರೆಡ್ಡಿ ಅವರ ನಿವಾಸದ ಬಳಿ ಸ್ಥಾಪಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಫೋನ್ ಕದ್ದಾಲಿಕೆ, ಉದ್ಯಮಿಗಳ ಬ್ಲ್ಯಾಕ್‌ಮೇಲ್; ಬಿಆರ್‌ಎಸ್ ಮೇಲೆ ಮತ್ತಷ್ಟು ಆರೋಪ
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್:  ತೆಲಂಗಾಣ (Telangana) ಪೊಲೀಸ್ ಅಧಿಕಾರಿಗಳು ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy)ಸೇರಿದಂತೆ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ (Phone Tapping) ಮಾಡಿದ್ದಾರೆ ಎಂಬ ಆರೋಪಗಳು ಮುನ್ನೆಲೆಗೆ ಬರುತ್ತಿದ್ದಂತೆ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಗೆ (BRS) ದೊಡ್ಡ ಪ್ರಶ್ನೆಗಳು ಎದುರಾಗಿವೆ. ಬಿಆರ್‌ಎಸ್ ಪಕ್ಷದ ನಿಧಿಗೆ ಬೃಹತ್ ಮೊತ್ತದ ಕೊಡುಗೆ ನೀಡುವಂತೆ ಉದ್ಯಮಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಸಹ ಕಣ್ಗಾವಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಆರೋಪಗಳಿಗೆ ಬಿಆರ್‌ಎಸ್ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಸಂಬಂಧ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಇದೀಗ ಅಮೆರಿಕದಲ್ಲಿರುವ ರಾಜ್ಯ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಟಿ ಪ್ರಭಾಕರ ರಾವ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭುಜಂಗ ರಾವ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿರುಪತಣ್ಣ ಇಬ್ಬರು ಹಿರಿಯ ಅಧಿಕಾರಿಗಳು ಅಕ್ರಮ ಕಣ್ಗಾವಲು ಮತ್ತು ಸಾಕ್ಷ್ಯ ನಾಶವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಆಗಿನ ಬಿರ್​​ಎಸ್ ಸರ್ಕಾರದ ಅಡಿಯಲ್ಲಿ ರಾಜ್ಯ ಗುಪ್ತಚರ ಬ್ಯೂರೋದ ತಾಂತ್ರಿಕ ಸಲಹೆಗಾರ ರವಿ ಪಾಲ್, ರೆಡ್ಡಿ ಅವರ ಸಂಭಾಷಣೆಗಳನ್ನು ಕೇಳಲು ಫೋನ್ ಟ್ಯಾಪಿಂಗ್ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಮತ್ತು  ರೆಡ್ಡಿ ಅವರ ನಿವಾಸದ ಬಳಿ ಸ್ಥಾಪಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಾಫ್ಟ್‌ವೇರ್ ಕಂಪನಿಯನ್ನು ಬಳಸಿಕೊಂಡು ಇಸ್ರೇಲ್‌ನಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಂತಹ ಆಮದುಗಳಿಗೆ ಕೇಂದ್ರದಿಂದ ಯಾವುದೇ ಅನುಮತಿಯನ್ನು ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ. ಈ ಸೆಟಪ್‌ನೊಂದಿಗೆ, 300 ಮೀಟರ್ ವ್ಯಾಪ್ತಿಯಲ್ಲಿ ಮಾತನಾಡುವ ಯಾವುದನ್ನಾದರೂ ಕೇಳಬಹುದು ಎಂದು ವರದಿಗಳು ಹೇಳುತ್ತವೆ.

ರವಿ ಪಾಲ್, ರೆಡ್ಡಿ ನಿವಾಸದ ಬಳಿ ಕಚೇರಿಯನ್ನು ಸ್ಥಾಪಿಸಿ ಸಾಧನವನ್ನು ಅಳವಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆತನನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.

ತೆಲುಗು ಟಿವಿ ಚಾನೆಲ್ ಐ ನ್ಯೂಸ್ ನಡೆಸುತ್ತಿರುವ ಶರ್ವಣ್ ರಾವ್ ಮತ್ತು ಸಿಟಿ ಟಾಸ್ಕ್ ಫೋರ್ಸ್ ನ ಪೊಲೀಸ್ ಅಧಿಕಾರಿ ರಾಧಾ ಕಿಶನ್ ರಾವ್ ಅವರಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಕಣ್ಗಾವಲು ವಿರೋಧ ಪಕ್ಷದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ರಿಯಲ್ ಎಸ್ಟೇಟ್ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳು ಸೇರಿದಂತೆ ಪ್ರಮುಖ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಮೇಲೂ ನಿಗಾ ಇರಿಸಲಾಗಿತ್ತು. ಏತನ್ಮಧ್ಯೆ, ಫೋನ್ ಸಂಭಾಷಣೆಗಳ ಕದ್ದಾಲಿಕೆಯು ಸೆಲೆಬ್ರಿಟಿ ದಂಪತಿಗಳ ವಿಚ್ಛೇದನಕ್ಕೆ ಕಾರಣವಾಯಿತು ಎಂದು ವರದಿಗಳು ಹೇಳುತ್ತವೆ.

ಉದ್ಯಮಿ ಮತ್ತು ಬಿಜೆಪಿ ಮುಖಂಡ ಸರಣ್ ಚೌಧರಿ ಅವರು ಕಳೆದ ವರ್ಷ ಹಿರಿಯ ಪೊಲೀಸ್ ಅಧಿಕಾರಿಗಳು ತನ್ನನ್ನು ಅಪಹರಿಸಿ ಮಾಜಿ ಸಚಿವ ಹಾಗೂ ಬಿಆರ್‌ಎಸ್‌ ಮುಖಂಡ ಎರ್ರಬೆಳ್ಳಿ ದಯಾಕರ್‌ ರಾವ್‌ ಅವರ ಸಂಬಂಧಿಯೊಬ್ಬರಿಗೆ ಜಮೀನಿಗೆ ಸಹಿ ಹಾಕುವಂತೆ ಒತ್ತಾಯಿಸಿದರು ಎಂದು ಮುಖ್ಯಮಂತ್ರಿ ರೆಡ್ಡಿ ಅವರಿಗೆ ದೂರು ನೀಡಿದ್ದರು. ರಾಧಾ ಕಿಶನ್ ರಾವ್ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಎಸಿಪಿ ಉಮಾಮಹೇಶ್ವರ ರಾವ್ ಅವರು ಆಗಸ್ಟ್ 21 ರಂದು ಕಚೇರಿಗೆ ತೆರಳುತ್ತಿದ್ದಾಗ ತನ್ನನ್ನು ಅಪಹರಿಸಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ. ತನ್ನನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡು ಸಚಿವರ ಹತ್ತಿರದ ಸಂಬಂಧಿ ವಿಜಯ್ ಹೆಸರಿಗೆ ತಮ್ಮ ಆಸ್ತಿ ನೋಂದಣಿ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರನ್ನು ಹೋಗಲು ಬಿಡುವ ಮೊದಲು ₹ 50 ಲಕ್ಷ ನೀಡುವಂತೆ ಒತ್ತಾಯಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ತೆಲಂಗಾಣ ಫೋನ್ ಕದ್ದಾಲಿಕೆ ಪ್ರಕರಣ: ರಾಜ್ಯ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಆರೋಪಿ ನಂ 1

ಘಟನೆಯ ನಂತರ ತಾನು ಹೈಕೋರ್ಟ್‌ಗೆ ಮೊರೆ ಹೋಗಿದ್ದೆ. ಆದರೆ ಉಮಾ ಮಹೇಶ್ವರ್ ರಾವ್ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಅರ್ಜಿಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ಎಂದು ಉದ್ಯಮಿ ಹೇಳಿದ್ದಾರೆ. ಈ ಆರೋಪವನ್ನು ಮಾಜಿ ಸಚಿವರು ನಿರಾಕರಿಸಿದ್ದಾರೆ. ತನಗೆ ಸರಣ್ ಚೌಧರಿ ಪರಿಚಯವಿಲ್ಲ. ಅವರ ಹೆಸರನ್ನು ವಿವಾದಕ್ಕೆ ಏಕೆ ಎಳೆಯಲಾಗುತ್ತಿದೆ ಎಂದು ತಿಳಿದಿಲ್ಲ ಎಂದು ರಾವ್ ಹೇಳಿದರು. ರಾಜಕೀಯ ಷಡ್ಯಂತ್ರದ ಭಾಗವಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ.. ಪಕ್ಷವನ್ನು ಬದಲಾಯಿಸುವಂತೆ ನನ್ನ ಮೇಲೆ ಒತ್ತಡವಿದೆ, ಆದರೆ ನಾನು ಅದನ್ನು ವಿರೋಧಿಸುತ್ತಿದ್ದೇನೆ ಎಂದು ರಾವ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ