Shocking News: ಲಿಫ್ಟ್‌ನಲ್ಲಿ ಸಿಲುಕಿ ಶಾಲಾ ಮಕ್ಕಳ ಎದುರೇ 26 ವರ್ಷದ ಶಿಕ್ಷಕಿ ಸಾವು!
ಜಿನಾಲ್ ಫರ್ನಾಂಡಿಸ್ 6ನೇ ಮಹಡಿಯಲ್ಲಿ ಲಿಫ್ಟ್‌ನೊಳಗೆ ಪ್ರವೇಶಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಮೇಲಕ್ಕೆ ಚಲಿಸಲು ಪ್ರಾರಂಭಿಸಿತು. ಆದರೆ ಅವರ ಒಂದು ಕಾಲು ಲಿಫ್ಟ್‌ನೊಳಗೆ ಮತ್ತು ಅವರ ದೇಹವು ಹೊರಗೆ ಸಿಲುಕಿಕೊಂಡಿತ್ತು.
ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ (Mumbai) 26 ವರ್ಷದ ಶಿಕ್ಷಕಿಯೊಬ್ಬರು ಶಾಲೆಯ ಕಟ್ಟಡದ ಲಿಫ್ಟ್‌ನಲ್ಲಿ (Lift) ಸಿಲುಕಿ, ಗಾಯಗೊಂಡು ಸಾವನ್ನಪ್ಪಿದ್ದಾರೆ. ಮುಂಬೈನ ಮಲಾಡ್ ವೆಸ್ಟ್‌ನ ಎಸ್‌ವಿ ರಸ್ತೆಯಲ್ಲಿರುವ ಚಿಂಚಲಿ ಸಿಗ್ನಲ್ ಬಳಿಯ ಸೇಂಟ್ ಮೇರಿ ಇಂಗ್ಲಿಷ್ ಶಾಲೆಯಲ್ಲಿ ಮಧ್ಯಾಹ್ನ 1ರಿಂದ 2 ಗಂಟೆಯ ನಡುವೆ ಈ ಘಟನೆ ನಡೆದಿದೆ.
ಮೃತ ಶಿಕ್ಷಕಿಯನ್ನು ಜಿನಾಲ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ. ಈ ವರ್ಷ ಜೂನ್‌ನಲ್ಲಿ ಅವರು ಶಾಲೆಗೆ ಸಹಾಯಕ ಶಿಕ್ಷಕಿಯಾಗಿ ಸೇರಿದ್ದರು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಶಾಲೆಯ ಕಟ್ಟಡದ 6ನೇ ಮಹಡಿಯಲ್ಲಿ ಜಿನಾಲ್ ಫರ್ನಾಂಡಿಸ್ ತರಗತಿಯನ್ನು ಮುಗಿಸಿ ಆಫೀಸ್ ರೂಮಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅವರು 6ನೇ ಮಹಡಿಯಲ್ಲಿ ಲಿಫ್ಟ್‌ನೊಳಗೆ ಪ್ರವೇಶಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಮೇಲಕ್ಕೆ ಚಲಿಸಲು ಪ್ರಾರಂಭಿಸಿತು. ಆದರೆ ಅವರ ಒಂದು ಕಾಲು ಲಿಫ್ಟ್‌ನೊಳಗೆ ಮತ್ತು ಅವರ ದೇಹವು ಹೊರಗೆ ಸಿಲುಕಿಕೊಂಡಿತ್ತು. ಇದರಿಂದಾಗಿ ಅವರಿಗೆ ಗಂಭೀರ ಗಾಯಗಳಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Breaking News: ಅಹಮದಾಬಾದ್ನಲ್ಲಿ ಕಟ್ಟಡದ ಲಿಫ್ಟ್ ಕುಸಿದು 7 ಕಾರ್ಮಿಕರು ದುರ್ಮರಣ, ಓರ್ವ ಗಂಭೀರ
ಒಂದು ಕಾಲನ್ನು ಲಿಫ್ಟ್‌ನೊಳಗೆ ಇಡುತ್ತಿದ್ದಂತೆ ಲಿಫ್ಟ್ ಮೇಲೆ ಹೋಗಲು ಆರಂಭಿಸಿದ್ದರಿಂದ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದರು. ಅವರ ಕೂಗು ಕೇಳಿದ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಸಹಾಯ ಮಾಡಲು ಧಾವಿಸಿದರು. ಆದರೆ ಅಷ್ಟರಲ್ಲಿ ಲಿಫ್ಟ್ ಮೇಲೆ ಹೋಗಿತ್ತು. ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜಿನಾಲ್ ಫರ್ನಾಂಡಿಸ್ ಅವರನ್ನು ಹೊರತೆಗೆದರು. ನಂತರ ಆಕೆಯನ್ನು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿ ಅವರು ಮೃತಪಟ್ಟಿದ್ದಾರೆ.
ಈ ಘಟನೆಗೆ ಅಸಹಜ ಸಾವು ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಶಾಲೆಯ ಸಿಬ್ಬಂದಿ, ಆಡಳಿತ ಮಂಡಳಿ, ಲಿಫ್ಟ್ ನಿರ್ವಹಣೆ ನೋಡಿಕೊಳ್ಳುವ ಕಂಪನಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.