Rain Updates: ಉತ್ತರ ಪ್ರದೇಶದಲ್ಲಿ ಮಳೆಯಿಂದ 22 ಜನ ಸಾವು; ಮಹಾರಾಷ್ಟ್ರದ 2 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
Mumbai Rains: ಮುಂಬೈನಲ್ಲಿ ನಿನ್ನೆ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ. ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ಹೀಗಾಗಿ, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮುಂಬೈ: ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಉತ್ತರ ಭಾರತದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ (Uttar Pradesh Rain) ಭಾರೀ ಮಳೆಯು ಹಾನಿಯನ್ನುಂಟುಮಾಡಿದ್ದು, ಶುಕ್ರವಾರ ಉತ್ತರ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ 22 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಉತ್ತರ ಪ್ರದೇಶ ರಾಜ್ಯದ ಪೂರ್ವ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಸಂಸ್ಥೆ (IMD) ಮುನ್ಸೂಚನೆ ನೀಡಿದೆ.
ಲಕ್ನೋದಲ್ಲಿ ನಿರ್ಮಾಣ ಹಂತದ ಗೋಡೆಯೊಂದು ಅವರ ಗುಡಿಸಲುಗಳ ಮೇಲೆ ಕುಸಿದು ಬಿದ್ದ ಪರಿಣಾಮ 9 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಧನಸಹಾಯವನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ಉನ್ನಾವ್ (5), ಫತೇಪುರ್ (3), ಪ್ರಯಾಗ್‌ರಾಜ್ (2), ಸೀತಾಪುರ, ರಾಯ್ಬರೇಲಿ ಮತ್ತು ಝಾನ್ಸಿ (ತಲಾ ಒಬ್ಬರು) 13 ಸಾವುಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 74 ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದೆ. ಬಾರಾಬಂಕಿ (192.7 ಮಿಮೀ), ಲಕ್ನೋ (116.9 ಮಿಮೀ), ಮೌ (110 ಮಿಮೀ), ಬಹ್ರೈಚ್ (108 ಮಿಮೀ), ಡಿಯೋರಿಯಾ (78.5 ಮಿಮೀ) ಬಲರಾಮ್‌ಪುರ (64 ಮಿಮೀ), ಬಲ್ಲಿಯಾ (63.9 ಮಿಮೀ), ಲಖಿಂಪುರ ಖೇರಿ (58.7 ಮಿಮೀ), ಸೇರಿದಂತೆ ಜಿಲ್ಲೆಗಳು. ಝಾನ್ಸಿ (51), ಉನ್ನಾವ್ (14.7 ಮಿ.ಮೀ) ಮತ್ತು ಪ್ರಯಾಗ್‌ರಾಜ್ (8.4 ಮಿ.ಮೀ)ನಲ್ಲಿ ಹೆಚ್ಚಿನ ಪ್ರಮಾಣದ ಮಳೆ ದಾಖಲಾಗಿದೆ.
ಇದನ್ನೂ ಓದಿ: ಲಕ್ನೋದಲ್ಲಿ ಸುರಿದ ಧಾರಾಕಾರ ಮಳೆಗೆ ನಿರ್ಮಾಣ ಹಂತದ ಗೋಡೆ ಕುಸಿತ, 9 ಮಂದಿ ಸಾವು
ಚಾಂದೌಲಿ, ವಾರಾಣಸಿ, ಘಾಜಿಪುರ, ಬಲ್ಲಿಯಾ, ಲಕ್ನೋ, ಅಮೇಥಿ, ರಾಂಪುರ, ಬರೇಲಿ, ಷಹಜಹಾನ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಪ್ರಾದೇಶಿಕ ಹವಾಮಾನ ಇಲಾಖೆಯು ನೀಡಿದೆ. ಹೀಗಾಗಿ, ಹಳದಿ ಅಲರ್ಟ್ ಘೋಷಿಸಲಾಗಿದೆ.
Fairly widespread/ widespread light/moderate rainfall with heavy to very heavy rainfall & thunderstorm/lightning very likely over Uttarakhand & Uttar Pradesh during 15th-17th and over West Madhya Pradesh on 15th September, 2022. pic.twitter.com/UsU0d6Dm3I
— India Meteorological Department (@Indiametdept) September 15, 2022
ಮಹಾರಾಷ್ಟ್ರದ ಪಾಲ್ಘರ್, ಥಾಣೆಗೆ ಆರೆಂಜ್ ಅಲರ್ಟ್: ಮುಂಬೈನಲ್ಲಿ ನಿನ್ನೆ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆ (IMD) ಇನ್ನೆರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ಹೀಗಾಗಿ, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Weather Today: ಉತ್ತರ ಪ್ರದೇಶ, ಉತ್ತರಾಖಂಡ ಸೇರಿ ಈ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ
ಪುಣೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ. ಮುಂದಿನ 2 ದಿನಗಳಲ್ಲಿ ಮಳೆಯ ತೀವ್ರತೆಯು ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಶುಕ್ರವಾರದಿಂದಲೇ ಪೂರ್ವ ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಮಳೆಯ ಚಟುವಟಿಕೆ ಕಡಿಮೆಯಾಗಿದ್ದು, ಮುಂದಿನ 3ರಿಂದ 4 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಇಂದಿನಿಂದ ಶುಷ್ಕ ಹವಾಮಾನದ ಸಾಧ್ಯತೆಯಿದೆ. ರಾಜಸ್ಥಾನದಲ್ಲಿ ಈ ಬಾರಿ ಮಾನ್ಸೂನ್ ಉತ್ತಮವಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ದಾಖಲಾಗಿದೆ.