Terrorists Attack: ಜಮ್ಮು ಕಾಶ್ಮೀರದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ; ವಿಡಿಯೋದಿಂದ ಬಯಲು
Jammu Kashmir Terror Attack: ಕಾಶ್ಮೀರದ ಉಗ್ರನಿಗೆ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ತರಬೇತಿ ನೀಡುತ್ತಿರುವ ವಿಡಿಯೋವೊಂದು ಬಯಲಾಗಿದೆ.
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ಉಗ್ರರ ಅಟ್ಟಹಾಸ (Terrorist Encounter) ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರ ಗಡಿಯ (Kashmir Terror Attack) ಪೂಂಚ್ ಸೇರಿದಂತೆ ಹಲವೆಡೆ ಸೇನಾ ಪಡೆ ಎನ್‌ಕೌಂಟರ್ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯಲ್ಲಿ ಇದುವರೆಗೂ 15ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಹಲವು ಭಾರತೀಯ ಸೈನಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದು ವಿಡಿಯೋದಿಂದ ಬಯಲಾಗಿದೆ.
ಕಾಶ್ಮೀರದ ಉಗ್ರನಿಗೆ ಪಾಕಿಸ್ತಾನದ ಉಗ್ರ ತರಬೇತಿ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಜಮ್ಮು ಕಾಶ್ಮೀರದ ಪೊಲೀಸರು ಕಾಶ್ಮೀರದ ಶಂಕಿತ ಉಗ್ರನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ನಂತರ ಈ ವಿಡಿಯೋ ಹೊರಬಿದ್ದಿದೆ. ಬಂಧಿಸಲ್ಪಟ್ಟ ಆರೋಪಿಯ ಬಳಿ ಈ ವಿಡಿಯೋ ಪತ್ತೆಯಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಆರಿಫ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಹೊಸ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೇಗೆ ಲೋಡ್ ಮಾಡುವುದು ಮತ್ತು ಅದರಿಂದ ಗುಂಡು ಹಾರಿಸುವುದು ಹೇಗೆ ಎಂಬುದರ ಕುರಿತು ಪಾಕಿಸ್ತಾನದ ಉಗ್ರ ಆತನಿಗೆ ತರಬೇತಿ ನೀಡಿದ್ದ ಎಂಬುದು ಬಯಲಾಗಿದೆ ಎಂದು ಸಿಎನ್ಎನ್-ನ್ಯೂಸ್18 ವರದಿ ಮಾಡಿದೆ.
ಪಾಕಿಸ್ತಾನದ ಆ ತರಬೇತುದಾರ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯವನು ಎಂದು ಹೇಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಕ್ಟೋಬರ್ 23ರಿಂದ 25ರ ನಡುವೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚಾಗಿರುವ ಭಯೋತ್ಪಾದನಾ ಕೃತ್ಯಗಳು ಪೊಲೀಸರಿಗೆ ಇನ್ನಷ್ಟು ನಿದ್ರೆಗೆಡಿಸಿವೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡ ಭಾರೀ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಈ ಕಾರಣದಿಂದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ಪಡೆಗಳು ಐಇಡಿಗಳನ್ನು ವಶಪಡಿಸಿಕೊಂಡಿವೆ. ಸೇನೆಯ ಗಸ್ತು ತಂಡವು ರತಂಗೀರ್ ಪರ್ವತದ ಸಾವಲ್‌ಕೋಟ್‌ನ ಅರಣ್ಯ ಪ್ರದೇಶದಲ್ಲಿ ಮರದ ರೆಂಬೆಯಲ್ಲಿ ಅಳವಡಿಸಲಾಗಿದ್ದ ಐಇಡಿಯನ್ನು ಪತ್ತೆ ಮಾಡಿದೆ. ನಂತರ ಅದನ್ನು ನಾಶಪಡಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಕಳೆದ ವಾರ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ 9 ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದರೂ ಕೂಡ ಶೋಧ ಕಾರ್ಯಾಚರಣೆ ಶುಕ್ರವಾರ 12ನೇ ದಿನಕ್ಕೆ ಕಾಲಿಟ್ಟಿದೆ. ಜಮ್ಮು ಕಾಶ್ಮೀರದಲ್ಲಿ ಟಾರ್ಗೆಟ್ ಹತ್ಯೆಗಳು ಹೆಚ್ಚಾಗಿರುವುದರಿಂದ ಮತ್ತು ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವಿನ ಎನ್‌ಕೌಂಟರ್ ಹೆಚ್ಚಾಗಿರುವುದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸೇನಾ ಪಡೆಗಳನ್ನು ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಪೂಂಚ್ನಲ್ಲಿ 12ನೇ ದಿನಕ್ಕೆ ಕಾಲಿಟ್ಟ ಉಗ್ರರ ವಿರುದ್ಧದ ಕಾರ್ಯಾಚರಣೆ; ಸೇನೆಯಿಂದ ಗುಂಡಿನ ದಾಳಿ
Terrorists Encounter: ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಿದ ಸೈನಿಕರು; ರಾಜೌರಿಯಲ್ಲಿ 6 ಎಲ್ಇಟಿ ಉಗ್ರರ ಹತ್ಯೆ
Published On - 2:42 pm, Fri, 22 October 21