ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ನ್ಯಾಯಾಂಗ ಬಂಧನ 14 ದಿನ ವಿಸ್ತರಿಸಿದ ಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Dec 09, 2022 | 1:50 PM

Shraddha murder case ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪೂನಾವಾಲಾನನ್ನು ಹಾಜರು ಪಡಿಸಲಾಗಿತ್ತು. ದೆಹಲಿ ಪೊಲೀಸರು ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ನ್ಯಾಯಾಂಗ ಬಂಧನ 14 ದಿನ ವಿಸ್ತರಿಸಿದ ಕೋರ್ಟ್
ಅಫ್ತಾಬ್ ಪೂನಾವಾಲಾ
Follow us on

ಶ್ರದ್ಧಾ ಹತ್ಯೆ ಪ್ರಕರಣದ (Shraddha murder case) ಆರೋಪಿ ಅಫ್ತಾಬ್ ಪೂನಾವಾಲಾನ (Aaftab Poonawala) ನ್ಯಾಯಾಂಗ ಬಂಧನವನ್ನು ದೆಹಲಿಯ ಸಾಕೇತ್ ನ್ಯಾಯಾಲಯ ಮತ್ತೆ 14 ದಿನಗಳವರೆಗೆ ವಿಸ್ತರಿಸಿದೆ. ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪೂನಾವಾಲಾನನ್ನು ಹಾಜರು ಪಡಿಸಲಾಗಿತ್ತು. ದೆಹಲಿ ಪೊಲೀಸರು ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ವಿಚಾರಣೆಯ ನಂತರ ನ್ಯಾಯಾಲಯವು ಪೂನಾವಾಲಾನ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು. ಇದಕ್ಕೂ ಮುನ್ನ ನ್ಯಾಯಾಲಯವು ಅಫ್ತಾಬ್‌ನನ್ನು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಅದು ಇಂದಿಗೆ ಕೊನೆಗೊಳ್ಳಲಿದೆ. ಮತ್ತೊಂದು ಬೆಳವಣಿಗೆಯಲ್ಲಿ, ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಅವರು ಡಿಸೆಂಬರ್ 9 ರಂದು ಮುಂಬೈನ ಆಜಾದ್ ಮೈದಾನದ ಬಳಿಯ ಮುಂಬೈ ಮರಾಠಿ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

ಅಫ್ತಾಬ್ ಪೂನವಾಲಾ ದೆಹಲಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿರಿಸಿ ನಂತರ ಮೃತ ದೇಹದ ಭಾಗಗಳನ್ನು ರಾಷ್ಟ್ರ ರಾಜಧಾನಿಯಾದ್ಯಂತ ವಿವಿಧ ಸ್ಥಳಗಳಲ್ಲಿ ಎಸೆದಿದ್ದ.
ಅಫ್ತಾಬ್‌ನಲ್ಲಿ ಪಾಲಿಗ್ರಾಫ್ ಮತ್ತು ನಾರ್ಕೋ ಪರೀಕ್ಷೆಗಳನ್ನು ನಡೆಸಲಾಗಿದ್ದು, ಪೊಲೀಸರು ಈಗ ತಮ್ಮ ಪ್ರಕರಣವನ್ನು ಬಲಪಡಿಸಲು ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ಬಹು ಮೂಲಗಳ ಪ್ರಕಾರ, ತನ್ನ ನಾರ್ಕೋ ಪರೀಕ್ಷೆಯ ಸಮಯದಲ್ಲಿ, ಶ್ರದ್ಧಾಳ ದೇಹವನ್ನು ಕತ್ತರಿಸಲು ಅನೇಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾಗಿ ಆಫ್ತಾಬ್ ಬಹಿರಂಗಪಡಿಸಿದ್ದಾನೆ. ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದ ನಂತರ ಸಣ್ಣ ಗರಗಸ ಮತ್ತು ಚೈನೀಸ್ ಮಾಂಸ ಸೀಳುವ ಯಂತ್ರವನ್ನು ಬಳಸಿ ಶ್ರದ್ಧಾಳ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾಗಿ ಹೇಳಿದ್ದ.

ಅಫ್ತಾಬ್‌ನಿಂದ ಪೊಲೀಸರು ಈ ಹಿಂದೆ ವಶಪಡಿಸಿಕೊಂಡ ಆಯುಧವು ಚೈನೀಸ್ ಕ್ಲೀವರ್ ಅಥವಾ ಸಣ್ಣ ಗರಗಸವೇ ಎಂಬುದು ಇನ್ನೂ ಖಚಿತವಾಗಿಲ್ಲ

ದೇವೇಂದ್ರ ಫಡ್ನವಿಸ್​​ರನ್ನು ಭೇಟಿಯಾದ ಶ್ರದ್ಧಾಳ ಅಪ್ಪ

ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಅವರು ಶುಕ್ರವಾರ (ಡಿಸೆಂಬರ್ 9) ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಮುಂಬೈನ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಇದಾದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ ನ್ಯಾಯ ಸಿಗಲಿದೆ ಫಡ್ನವೀಸ್  ಭರವಸೆ ನೀಡಿದರು ಎಂದಿದ್ದಾರೆ. ನನ್ನ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಸಾಯಿ ಪೊಲೀಸರಿಂದಾಗಿ ನಾನು ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ, ಅವರು ನನಗೆ ಸಹಾಯ ಮಾಡಿದ್ದರೆ ನನ್ನ ಮಗಳು ಬದುಕುತ್ತಿದ್ದಳು ಎಂದು ವಿಕಾಸ್ ವಾಕರ್ ಹೇಳಿದ್ದಾರೆ.

“ನಮಗೆ ನ್ಯಾಯ ಸಿಗುತ್ತದೆ ಎಂದು ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ನಮಗೆ ಅದೇ ಭರವಸೆ ನೀಡಿದ್ದಾರೆ” ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Fri, 9 December 22