ದೆಹಲಿ: ಲಖಿಂಪುರ ಖೇರಿ ಹಿಂಸಾಚಾರ(Lakhimpur Kheri Violence) ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಆಶೀಶ್ ಮಿಶ್ರಾ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿಯವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಇಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ರೈತ ಸಂಘಟನೆ ರಾಷ್ಟ್ರಾದ್ಯಂತ ರೈಲು ತಡೆ (Rail Roko)ಆಂದೋಲನಕ್ಕೆ ಕರೆ ನೀಡಿದೆ. ಈ ಬಗ್ಗೆ ಎಸ್ಕೆಎಂ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶಾದ್ಯಂತ ರೈತ ಸಂಘಟನೆಗಳು ಬೆಳಗ್ಗೆ 10ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಅಂದರೆ ಸುಮಾರು 6ತಾಸು ರೈಲು ತಡೆ ನಡೆಸಬೇಕು. ಆದರೆ ಪ್ರತಿಭಟನೆ ಶಾಂತಿಯುತವಾಗಿ ನಡೆಯಬೇಕು. ರೈಲ್ವೆ ಇಲಾಖೆಯ ಆಸ್ತಿಗೆ ಯಾವುದೇ ಹಾನಿಯಾಗಬಾರದು ಎಂದು ತಿಳಿಸಿದೆ.
ಅಜಯ್ ಮಿಶ್ರಾ ಕೇಂದ್ರ ಗೃಹ ಇಲಾಖೆಯಲ್ಲಿ ಇದ್ದಾರೆ. ಅವರನ್ನು ಅಲ್ಲಿಂದ ವಜಾಗೊಳಿಸಿದಂತೂ ನಮಗೆ ನ್ಯಾಯ ಸಿಗುವುದಿಲ್ಲ. ಅವರು ತಮ್ಮ ದ್ವೇಷ, ಶತ್ರುತ್ವ, ಕೋಮು ಸೌಹಾರ್ದತೆ ಕದಡುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಹಿಂದೂ-ಸಿಖ್ರ ನಡುವೆ ದ್ವೇಷ ಹುಟ್ಟುಹಾಕುವಂತೆ ಮಾತನಾಡಿದ್ದಾರೆ. ಹಾಗೇ, ಪ್ರತಿಭಟನಾನಿರತ ಗುಂಪಿಗೆ ಡಿಕ್ಕಿ ಹೊಡೆಯಲು ಅವರ ವಾಹನ ಬಳಕೆಯಾಗಿದೆ ಮತ್ತು ಅವರ ಪುತ್ರ ರೈತನೊಬ್ಬನಿಗೆ ಗುಂಡುಹಾರಿಸಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ಅಜಯ್ ಮಿಶ್ರಾ ತೇನಿ ಈಗಲೂ ಕೂಡ ತನ್ನ ಪುತ್ರ ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿರಲಿಲ್ಲ ಎಂದೇ ಪ್ರತಿಪಾದಿಸುತ್ತಿದ್ದಾರೆ. ಇನ್ನು ಈ ಮಧ್ಯೆ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕೂಡ ಲಖಿಂಪುರ ಖೇರಿ ಹಿಂಸಾಚಾರ ತನಿಖೆ ಬಗ್ಗೆ ಕೆಲವು ಅಸಮಾಧಾನ ಹೊರಹಾಕಿದ್ದಾರೆ. ಅಜಯ್ ಮಿಶ್ರಾ ತೇನಿಯನ್ನು ಸ್ಥಾನದಿಂದ ತೆಗೆದುಹಾಕದ ವಿನಃ ನ್ಯಾಯಸಮ್ಮತ ತನಿಖೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅಜಯ್ ಮಿಶ್ರಾ ವಜಾಕ್ಕೆ ಕಾಂಗ್ರೆಸ್ ಕೂಡ ಒತ್ತಾಯ ಮಾಡುತ್ತಿದೆ.
ಇದನ್ನೂ ಓದಿ: ನಟಿ ಸವಿ ಮಾದಪ್ಪ ಸಾವಿನ ಸತ್ಯ ಬಯಲು; ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ
Published On - 8:46 am, Mon, 18 October 21