ಸ್ಮೃತಿ ಇರಾನಿ ಇನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆಯೂ ಹೌದು, ಸಿಂಧಿಯಾಗೆ ಉಕ್ಕಿನ ಖಾತೆ ಹೆಚ್ಚುವರಿ ಖಾತೆ
ಇರಾನಿ ಅವರು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಕೇಂದ್ರ ಸಚಿವರಾಗಿರುವ ಅವರ ಹಾಲಿ ಉಸ್ತುವಾರಿ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥರಾಗಿರುತ್ತಾರೆ.
ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ (Mukhtar Abbas Naqvi) ಅವರು ರಾಜೀನಾಮೆ ನೀಡಿದ ನಂತರ ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವರಾಗಿ ಸ್ಮೃತಿ ಇರಾನಿ ಅವರನ್ನು (Smriti Irani) ಬುಧವಾರ ನೇಮಿಸಲಾಗಿದೆ. ಇರಾನಿ ಅವರು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಕೇಂದ್ರ ಸಚಿವರಾಗಿ ಅಸ್ತಿತ್ವದಲ್ಲಿರುವ ಜವಾಬ್ದಾರಿಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ.
ಕೇಂದ್ರ ಉಕ್ಕು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಜನತಾ ದಳ (ಸಂಯುಕ್ತ) ನಾಯಕ ರಾಮಚಂದ್ರ ಪ್ರಕಾಶ್ ಸಿಂಗ್ ಕೂಡ ರಾಜೀನಾಮೆ ನೀಡಿದ್ದಾರೆ. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರಿಗೆ ಈಗಿರುವ ಖಾತೆಗೆ ಹೆಚ್ಚುವರಿಯಾಗಿ ಉಕ್ಕು ಸಚಿವಾಲಯದ ಉಸ್ತುವಾರಿಯನ್ನು ವಹಿಸಲಾಗಿದೆ.
ರಾಜ್ಯಸಭೆಯ ಅವಧಿ ಮುಗಿಯುವ ಒಂದು ದಿನ ಮುಂಚಿತವಾಗಿ ಇಬ್ಬರೂ ಸಚಿವರೂ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಹಲವಾರು ಬಿಜೆಪಿ ನಾಯಕರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ, ಪಕ್ಷವು ನಖ್ವಿಗೆ ರಾಜ್ಯಸಭಾ ಟಿಕೆಟ್ ನೀಡಲಿಲ್ಲ.
ಬಿಹಾರದ ಮಿತ್ರ ಪಕ್ಷವಾದ ಜೆಡಿಯುನಿಂದ ಬಂದಿರುವ ಆರ್‌ಸಿಪಿ ಸಿಂಗ್, ಒಂದು ವರ್ಷದ ಹಿಂದೆ ಜುಲೈ 7, 2021 ರಂದು ಮೋದಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇತ್ತೀಚೆಗೆ ತ್ರಿಪುರಾ ವಿಧಾನಸಭೆಗೆ ಆಯ್ಕೆಯಾಗಿದ್ದ ಮಾಣಿಕ್ ಸಹಾ ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ರಾಜ್ಯಸಭಾ ಸ್ಥಾನ ತೆರವಾಗಿತ್ತು.