ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಏನಾಗುತ್ತದೆ? ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ?

ಸೋನಂ ವಾಂಗ್‌ಚುಕ್ ಅವರ ಅಮರಣಾಂತ ಉಪವಾಸ ಸತ್ಯಾಗ್ರಹವು 20ನೇ ದಿನಕ್ಕೆ ಕಾಲಿಟ್ಟಿರುವುದರಿಂದ ಇಂದು ದೇಶಾದ್ಯಂತ ಭಾರಿ ಸುದ್ದಿಯಾಗಿದೆ. ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸುತ್ತಿದ್ದು, ಅಂಗಾಂಗ ವೈಫಲ್ಯದ ಭೀತಿ ಎದುರಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಉಪವಾಸ ಸತ್ಯಾಗ್ರಹದಿಂದಾಗಿ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಗಂಭೀರ ಹಂತಕ್ಕೆ ತಲುಪಿದೆ. ಅವರ ಅಂಗಾಂಗಗಳ ಶಕ್ತಿ ಕ್ಷೀಣಿಸಲು ಪ್ರಾರಂಭಿಸಿದೆ. ಉಪವಾಸ ಸತ್ಯಾಗ್ರಹದಿಂದಾಗಿ ಅವರು 9 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ. ಆದರೂ ಅವರು ತಮ್ಮ ಸತ್ಯಾಗ್ರಹವನ್ನು ಕೊನೆಗೊಳಿಸಲು ಸಿದ್ಧರಿಲ್ಲ.

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಏನಾಗುತ್ತದೆ? ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ?
Sonam Wangchuk
Image Credit source: PTI

Updated on: Jul 17, 2026 | 7:42 PM

ನವದೆಹಲಿ, ಜುಲೈ 17: ಇಂದಿಗೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಉಪವಾಸ ಸತ್ಯಾಗ್ರಹದ 20ನೇ ದಿನಕ್ಕೆ ಕಾಲಿಟ್ಟಿದೆ. ಅವರ ತೂಕ ವೇಗವಾಗಿ ಕಡಿಮೆಯಾಗುತ್ತಿದೆ. ಇಲ್ಲಿಯವರೆಗೆ 9 ಕೆಜಿ ತೂಕ ಕಳೆದುಕೊಂಡಿರುವ ಅವರ ಆರೋಗ್ಯವು ಕ್ಷೀಣಿಸುತ್ತಿದೆ. ದೀರ್ಘಕಾಲದ ಉಪವಾಸ ಸತ್ಯಾಗ್ರಹವು ಈಗಾಗಲೇ ಅವರ ಅಂಗಗಳ ಮೇಲೆ ಪರಿಣಾಮ ಬೀರಿದೆ. ಅವರ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಹೈಕೋರ್ಟ್ ಕೂಡ ಹೇಳಿದೆ. ಆದರೂ ಸತ್ಯಾಗ್ರಹವನ್ನು ಮುಂದುವರಿಸುವ ಬಗ್ಗೆ ದೃಢನಿಶ್ಚಯ ಹೊಂದಿರುವ ಸೋನಮ್ ವಾಂಗ್‌ಚುಕ್ ಅವರ ಜೀವವನ್ನು ಉಳಿಸಲು ಸರ್ಕಾರಕ್ಕೆ ಯಾವ ಆಯ್ಕೆಗಳಿವೆ?

ಗುರುವಾರ ದೆಹಲಿ ಹೈಕೋರ್ಟ್ ವಾಂಗ್‌ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಪ್ರತಿಯೊಬ್ಬ ನಾಗರಿಕನ ಜೀವವು ಅಮೂಲ್ಯವಾದುದು, ಅದನ್ನು ರಕ್ಷಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ಸರ್ಕಾರಿ ವೈದ್ಯರು ದೈನಂದಿನ ತಪಾಸಣೆ ಮತ್ತು ನಿರಂತರ ಕ್ಲಿನಿಕಲ್ ಮೇಲ್ವಿಚಾರಣೆ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

19 ದಿನಗಳಲ್ಲಿ 9 ಕೆಜಿ ತೂಕ ಇಳಿಕೆ:

ನ್ಯಾಯಾಲಯದ ನಿರ್ದೇಶನದ ಮಧ್ಯೆ, ಸೋನಮ್ ವಾಂಗ್​ಚುಕ್ ಅವರ ದೀರ್ಘಕಾಲದ ಉಪವಾಸ ಸತ್ಯಾಗ್ರಹದಿಂದಾಗಿ ಅವರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ರೀತಿ ಉಪವಾಸ ಇರುವುದರಿಂದಾಗಿ ಅವರ ಅಂಗಾಂಗಗಳು ವಿಫಲಗೊಳ್ಳಲು ಪ್ರಾರಂಭಿಸಬಹುದು ಎಂದು ಎಚ್ಚರಿಸಿದ್ದಾರೆ. ಕಳೆದ 19 ದಿನಗಳಲ್ಲಿ ಅವರು 9 ಕೆಜಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡಿದ್ದಾರೆ. ಆದರೆ ವಾಂಗ್ಚುಕ್ ತಮ್ಮ ಸತ್ಯಾಗ್ರಹ ನಿಲ್ಲಿಸಲು ಇನ್ನೂ ಸಿದ್ಧರಿಲ್ಲ.

ಇದನ್ನೂ ಓದಿ: ಉಪವಾಸ ನಿರತ ಹೋರಾಟಗಾರ ಸೋನಮ್ ವಾಂಗ್ಚುಕ್​ಗೆ ಬಲವಂತವಾಗಿ ದ್ರವಾಹಾರ ನೀಡಿ; ಹೈಕೋರ್ಟ್‌ಗೆ ತುರ್ತು ಅರ್ಜಿ

ಇದಕ್ಕೂ ಮೊದಲು, ಬುಧವಾರ ತಡರಾತ್ರಿ ಸೋನಮ್ ವಾಂಗ್ಚುಕ್ ಒಂದು ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದರು, ಅದರಲ್ಲಿ ರಾಜಕೀಯ ಪಕ್ಷದ ಮುಖಂಡರು ಮತ್ತು ಬೆಂಬಲಿಗರು ಮನವಿ ಮಾಡಿದರೂ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲು ನಿರಾಕರಿಸಿದ್ದರು. ಸರ್ಕಾರದಿಂದ ಪ್ರತಿಕ್ರಿಯೆ ಸಿಗದೆ ಮುಷ್ಕರವನ್ನು ಕೊನೆಗೊಳಿಸುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದ್ದರು. ಜುಲೈ 20ರಂದು ನಡೆಯಲಿರುವ ಕಾಕ್ರೋಚ್ ಜನತಾ ಪಕ್ಷದ ಪ್ರಸ್ತಾವಿತ ಸಂಸತ್ ಮಾರ್ಚ್‌ನಲ್ಲಿ ಎಲ್ಲರೂ ಸೇರುವಂತೆ ಅವರು ಮನವಿ ಮಾಡಿದ್ದರು.

ಸರ್ಕಾರದ ಮುಂದಿರುವ ಆಯ್ಕೆಯೇನು?:

ಸೋನಮ್ ವಾಂಗ್ಚುಕ್ ತಮ್ಮ ನಿಲುವಿನಲ್ಲಿ ಅಚಲವಾಗಿದ್ದು, ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ. ಪ್ರತಿಪಕ್ಷಗಳು ವಾಂಗ್ಚುಕ್ ಅವರ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ. ನ್ಯಾಯಾಲಯವು ಅವರ ಜೀವವನ್ನು ಉಳಿಸಲು ಆದೇಶಿಸಿದೆ. ಆದ್ದರಿಂದ ವಾಂಗ್ಚುಕ್ ಅವರನ್ನು ಜೀವಂತವಾಗಿಡಲು ಸರ್ಕಾರಕ್ಕೆ ಯಾವ ಆಯ್ಕೆಗಳಿವೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮಣಿಪುರದ ಉಕ್ಕಿನ ಮಹಿಳೆ ಎಂದು ಕರೆಯಲ್ಪಡುವ ಇರೋಮ್ ಶರ್ಮಿಳಾ ಸಾಮಾಜಿಕ ಕಾರ್ಯಕರ್ತೆಯೂ ಹೌದು. ಅವರು 2000ರ ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ AFSPA (ಅಧಿಕೃತ ಪೊಲೀಸ್ ಪಡೆ) ರದ್ದುಗೊಳಿಸುವಂತೆ ಒತ್ತಾಯಿಸಿ ಚಳುವಳಿಯನ್ನು ಪ್ರಾರಂಭಿಸಿದ್ದರು. 2000ರ ನವೆಂಬರ್ 2ರಂದು ಮಣಿಪುರದ ಇಂಫಾಲ್ ಕಣಿವೆಯ ಮಾಲೋಮ್ ಪ್ರದೇಶದಲ್ಲಿ, ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ 10 ನಾಗರಿಕರನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದರು. ಈ ಹತ್ಯಾಕಾಂಡದ 3 ದಿನಗಳ ನಂತರ, ನವೆಂಬರ್ 5ರಂದು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು AFSPA ರದ್ದುಗೊಳಿಸುವಂತೆ ಒತ್ತಾಯಿಸಿ, ಶರ್ಮಿಳಾ ಹತ್ಯೆ ನಡೆದ ಸ್ಥಳದ ಬಳಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಇದನ್ನೂ ಓದಿ: ನಾವು ಲಡಾಖ್ ಜನರು ಜಮ್ಮು ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗ ಉತ್ತಮವಾಗಿದ್ದೆವು: ಸೋನಮ್ ವಾಂಗ್ಚುಕ್

ಪೊಲೀಸರು ಇದನ್ನು ಆತ್ಮಹತ್ಯೆ ಯತ್ನ ಎಂದು ಹೇಳಿದ್ದರು. ಇದನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಯಿತು. ಶರ್ಮಿಳಾ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಯಿತು. ಜೈಲಿನಲ್ಲಿದ್ದಾಗ ಅವರಿಗೆ ಬಲವಂತವಾಗಿ ಬಾಯಿಯ ಮೂಲಕ ಆಹಾರವನ್ನು ನೀಡಬೇಕಾಗಿತ್ತು. ಆದರೆ ಅವರು ವೈದ್ಯರನ್ನು ಮೂಗಿನ ಮೂಲಕ ಟ್ಯೂಬ್ ಬಳಸುವಂತೆ ಮನವೊಲಿಸಿದರು.

ಉಪವಾಸ ಸತ್ಯಾಗ್ರಹದಿಂದಾಗಿ, ಅವರ ತೂಕ ಕಡಿಮೆಯಾಗುತ್ತಲೇ ಇತ್ತು. ಪ್ರತಿಭಟನೆಯ 17ನೇ ದಿನವಾದ ನವೆಂಬರ್ 21 ರಂದು, ಅವರನ್ನು ಜೀವಂತವಾಗಿಡಲು ಮೂಗಿನ ಕೊಳವೆಯ ಮೂಲಕ (ನಾಸೊಗ್ಯಾಸ್ಟ್ರಿಕ್ ಇಂಟ್ಯೂಬೇಶನ್) ಬಲವಂತವಾಗಿ ಆಹಾರವನ್ನು ನೀಡಲಾಯಿತು. ಅವರು ತಮ್ಮ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹದ ಬಹುಪಾಲು ಸಮಯವನ್ನು ಆಸ್ಪತ್ರೆಯ ಕೋಣೆಯೊಳಗೆ ಕಳೆದರು. ಅವರ ಮೂಗಿಗೆ ಸೇರಿಸಲಾದ ಕೊಳವೆಯ ಮೂಲಕ ದ್ರವ ಪೋಷಕಾಂಶಗಳು ಮತ್ತು ಔಷಧಿಗಳನ್ನು ಬಲವಂತವಾಗಿ ನೀಡಲಾಗುತ್ತಿತ್ತು. ಈ ವಿಧಾನವನ್ನು ಕೆಲವೊಮ್ಮೆ ದಿನಕ್ಕೆ 3 ಬಾರಿ ನಡೆಸಲಾಗುತ್ತಿತ್ತು. ಇದು ಮುಂದಿನ 16 ವರ್ಷಗಳವರೆಗೆ ಮುಂದುವರೆಯಿತು. ಅವರ ಮೂಗು ಮತ್ತು ಹೊಟ್ಟೆಯ ನಡುವೆ ಸಂಪರ್ಕಗೊಂಡಿರುವ 3 ಅಡಿ ಉದ್ದದ ಕೊಳವೆಯ ಮೂಲಕ ಪಂಪ್ ಮಾಡಿದ ಪೋಷಕಾಂಶಗಳು ಮತ್ತು ನೀರಿನ ಮಿಶ್ರಣದಿಂದ ಅವರನ್ನು ಜೀವಂತವಾಗಿರಿಸಲಾಯಿತು.

ಇರೋಮ್ ಶರ್ಮಿಳಾ ನವೆಂಬರ್ 2000ರಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. 16 ವರ್ಷಗಳ ನಂತರ ಆಗಸ್ಟ್ 2016ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಅದನ್ನು ಕೊನೆಗೊಳಿಸಿದರು. ಒಂದುವೇಳೆ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಿಲ್ಲಿಸದಿದ್ದರೆ ಶರ್ಮಿಳಾ ಅವರಿಗೆ ಮಾಡಿದಂತೆ ಬಲವಂತವಾಗಿ ಅವರಿಗೆ ಆಹಾರ ನೀಡಿ ಬದುಕಿಸಿಕೊಳ್ಳುವ ಮಾರ್ಗವನ್ನು ಸರ್ಕಾರ ಅನುಸರಿಸಬೇಕಾಗುತ್ತದೆ.

ಪ್ರಾಣ ಉಳಿಸುವುದು ಬೇರೆ, ಪ್ರತಿಭಟನೆ ಹತ್ತಿಕ್ಕುವುದು ಬೇರೆ:

ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯಗಳು ಉಪವಾಸ ಸತ್ಯಾಗ್ರಹಗಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿವೆ. ಇಂದು ನ್ಯಾಯಾಲಯಗಳ ಗಮನ ಪ್ರತಿಭಟನೆಯನ್ನು ಹತ್ತಿಕ್ಕುವುದರ ಮೇಲಿಲ್ಲ, ಬದಲಿಗೆ ವ್ಯಕ್ತಿಯ ಪ್ರಾಣ ಉಳಿಸುವುದರ ಮೇಲಿದೆ. ದೆಹಲಿ ಹೈಕೋರ್ಟ್ ಮುಂದೆ ಸಲ್ಲಿಕೆಯಾಗಿರುವ ಅರ್ಜಿಯು ವಾಂಗ್‌ಚುಕ್ ಅವರ ಬೇಡಿಕೆಗಳ ಬಗ್ಗೆಯಲ್ಲ, ಬದಲಿಗೆ ಅವರ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಸರ್ಕಾರ ಏನು ಮಾಡಬೇಕು ಎಂಬುದರ ಕುರಿತಾಗಿದೆ. ಸರ್ಕಾರಿ ವೈದ್ಯರು ಪ್ರತಿದಿನ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಭರವಸೆ ನೀಡಿದೆ. ಉಪವಾಸ ಸತ್ಯಾಗ್ರಹವು ಸಾವಿನ ಅಂಚಿಗೆ ತಲುಪಿದಾಗ ಪ್ರಾಣ ಉಳಿಸುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us