ಕೇಂಬ್ರಿಡ್ಜ್‌ನ ಪುಟ್ಟ ರೆಸ್ಟೋರೆಂಟ್‌ನಲ್ಲಿ ಶುರುವಾದ ಪ್ರೇಮಕಥೆ: ‘ಎಕ್ಸ್’ ಪೋಸ್ಟ್‌ನಲ್ಲಿ ರಾಜೀವ್ ಗಾಂಧಿ ನೆನೆದ ಸೋನಿಯಾ

ಸೋನಿಯಾ ಗಾಂಧಿ 'ಎಕ್ಸ್'ಗೆ ಪದಾರ್ಪಣೆ ಮಾಡಿ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮಕಥೆಯನ್ನು ಮೆಲುಕು ಹಾಕಿದರು. ಕೇಂಬ್ರಿಡ್ಜ್‌ನ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ಪ್ರಾರಂಭವಾದ ಅವರ ಪ್ರೇಮ ಪ್ರಯಾಣದ ಬಗ್ಗೆ ಭಾವನಾತ್ಮಕ ವೀಡಿಯೊ ಹಂಚಿಕೊಂಡರು. ನವೆಂಬರ್ 10 ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್' ಮೂಲಕ ಈ ಸುಂದರ ನೆನಪುಗಳನ್ನು ಇನ್ನಷ್ಟು ವಿಸ್ತಾರವಾಗಿ ಜಗತ್ತಿಗೆ ಅನಾವರಣಗೊಳಿಸುವುದಾಗಿ ತಿಳಿಸಿದರು.

ಕೇಂಬ್ರಿಡ್ಜ್‌ನ ಪುಟ್ಟ ರೆಸ್ಟೋರೆಂಟ್‌ನಲ್ಲಿ ಶುರುವಾದ ಪ್ರೇಮಕಥೆ: ಎಕ್ಸ್ ಪೋಸ್ಟ್‌ನಲ್ಲಿ ರಾಜೀವ್ ಗಾಂಧಿ ನೆನೆದ ಸೋನಿಯಾ
ಸೋನಿಯಾ ಗಾಂಧಿ
Image Credit source: PTI

Updated on: Oct 24, 2026 | 3:42 PM

ನವದೆಹಲಿ, ಅಕ್ಟೋಬರ್ 24: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ  ಸಾಮಾಜಿಕ ಜಾಲತಾಣ ‘ಎಕ್ಸ್’ ವೇದಿಕೆಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ನವೆಂಬರ್ 10 ರಂದು ಬಿಡುಗಡೆಯಾಗಲಿರುವ ತಮ್ಮ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್’ ಬಿಡುಗಡೆಗೂ ಮುನ್ನ, ತಮ್ಮ ಮೊದಲ ಪೋಸ್ಟ್‌ನಲ್ಲೇ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮ ಪ್ರಯಾಣದ ಅಪರೂಪದ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ಹಳೆಯ ಕಪ್ಪು-ಬಿಳುಪು ಛಾಯಾಚಿತ್ರಗಳನ್ನು ವೀಕ್ಷಿಸುತ್ತಾ, ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸುವ ಭಾವನಾತ್ಮಕ ವೀಡಿಯೊ ತುಣುಕನ್ನು ಹಂಚಿಕೊಂಡಿರುವ ಅವರು, ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ತಮ್ಮ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ.

ಮೊದಲ ಭೇಟಿ ಹೇಗಿತ್ತು? ಸೋನಿಯಾ ಮಾತುಗಳಲ್ಲಿ
ಆಹಾರದ ಹುಡುಕಾಟ ತಂದಿತ್ತ ಭೇಟಿ: “ಆ ಕಾಲದಲ್ಲಿ ಇಂಗ್ಲೆಂಡ್‌ನಲ್ಲಿ ಆಹಾರವು ತುಂಬಾ ಕಳಪೆಯಾಗಿತ್ತು, ಇಂದಿನಂತೆ ಹಲವು ರೆಸ್ಟೋರೆಂಟ್‌ಗಳು ಇರಲಿಲ್ಲ. ನನಗೆ ಸರಿಹೊಂದುವ ಊಟ ಹುಡುಕುತ್ತಾ ಕೇಂಬ್ರಿಡ್ಜ್‌ನಲ್ಲಿ ಗ್ರೀಕ್ ಹೋಟೆಲ್ ಕಂಡುಕೊಂಡೆ. ಅಲ್ಲಿಗೆ ಯುರೋಪಿಯನ್ ಹಾಗೂ ಭಾರತೀಯ ವಿದ್ಯಾರ್ಥಿಗಳು ಹೆಚ್ಚಾಗಿ ಊಟಕ್ಕೆ ಬರುತ್ತಿದ್ದರು. ಅದೇ ಸ್ಥಳದಲ್ಲಿ ನಾನು ಮೊದಲ ಬಾರಿಗೆ ರಾಜೀವ್ ಅವರನ್ನು ಭೇಟಿಯಾದೆ” ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.

ಮೊದಲ ನೋಟದಲ್ಲೇ ಸೆಳೆತ: “ಒಬ್ಬ ಸಾಮಾನ್ಯ ಸ್ನೇಹಿತೆ ನಮ್ಮನ್ನು ಪರಸ್ಪರ ಪರಿಚಯಿಸಿದಳು. ಅವರನ್ನು ನೋಡಿದ ತಕ್ಷಣವೇ ನನಗೆ ಈ ವ್ಯಕ್ತಿ ನನಗೆ ತುಂಬಾ ಇಷ್ಟವಾಗುತ್ತಾರೆ ಎಂಬ ಭಾವನೆ ಮೂಡಿತು. ನಂತರ ಅವರಿಗೂ ನನ್ನ ಮೇಲೆ ಅದೇ ಭಾವನೆ ಮೂಡಿದ್ದು ತಿಳಿಯಿತು.”

ಸೌಮ್ಯ ಸ್ವಭಾವಕ್ಕೆ ಮಾರುಹೋದ ಕ್ಷಣ: “ಅವರು ಅತ್ಯಂತ ಸುಂದರವಾಗಿದ್ದರು . ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿದ್ದ ಸೌಮ್ಯತೆ ನನ್ನ ಮನಸ್ಸನ್ನು ನೇರವಾಗಿ ಮುಟ್ಟಿತು. ನಾನು ಅವರನ್ನು ಭೇಟಿಯಾದ ಆ ಮೊದಲ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.” ಪರಿಚಯದ ನಂತರ ಇಬ್ಬರೂ ಉತ್ತಮ ಸ್ನೇಹಿತರಾಗಿ ಹಲವು ಪಾರ್ಟಿಗಳು, ವಿದ್ಯಾರ್ಥಿ ಕೂಟಗಳು ಹಾಗೂ ಪ್ರೇಮಿಗಳ ದಿನಾಚರಣೆಯ ಕೂಟಗಳಲ್ಲಿ ಜೊತೆಯಾಗಿ ಕಾಲ ಕಳೆದ ದಿನಗಳನ್ನು ಅವರು ಸ್ಮರಿಸಿಕೊಂಡಿದ್ದಾರೆ.

‘ಬಿಲಾಂಗಿಂಗ್’ ಪುಸ್ತಕದ ಮೂಲಕ ಜಗತ್ತಿಗೆ ಅನಾವರಣ
ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಸೋನಿಯಾ ಗಾಂಧಿ, “ಕೇಂಬ್ರಿಡ್ಜ್‌ನ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ನನ್ನ ಪ್ರೇಮಯಾತ್ರೆ ಪ್ರಾರಂಭವಾಯಿತು. ರಾಜೀವ್ ಮತ್ತು ನಾನು ಪ್ರೀತಿ, ನಗು ಮತ್ತು ನೆನಪುಗಳಿಂದ ತುಂಬಿದ ಸುಂದರ ಜಗತ್ತನ್ನು ಸೃಷ್ಟಿಸಿದೆವು. ನವೆಂಬರ್ 10 ರಂದು ನನ್ನ ಆತ್ಮಚರಿತ್ರೆ ‘ಬಿಲಾಂಗಿಂಗ್’ ಮೂಲಕ ಆ ಜಗತ್ತನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸಾಹಸದ ಬಗ್ಗೆ ಮೌನವೇಕೆ?’; ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿಶನ್ ರೆಡ್ಡಿ ವಾಗ್ದಾಳಿ

ಕಾಂಗ್ರೆಸ್ ಮುಖಂಡರ ಮೆಚ್ಚುಗೆ
ಸೋನಿಯಾ ಗಾಂಧಿ ಅವರ ಈ ಪೋಸ್ಟ್‌ಗೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖಂಡ ಪವನ್ ಖೇರಾ ಸೇರಿದಂತೆ ಹಲವರು ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ:

“ಸೋನಿಯಾ ಮತ್ತು ರಾಜೀವ್ ಅವರ ಜೀವನ ಕಥೆಯು ಪ್ರೀತಿ, ತ್ಯಾಗ ಮತ್ತು ಬದ್ಧತೆಯ ಸಂಕೇತ. ಅವರ ಬದುಕು ಒಂದು ಸುಂದರ ಬೇಸಿಗೆಯ ಮಧ್ಯರಾತ್ರಿಯ ಕನಸಿನಂತಿತ್ತು; ವಿಧಿಯ ದುರಂತದ ಕಪ್ಪು ಮೋಡವು ಅದನ್ನು ಛಿದ್ರಗೊಳಿಸುವವರೆಗೂ ಅದು ಅದ್ಭುತ ಪ್ರೇಮಕಾವ್ಯವಾಗಿತ್ತು” ಎಂದು ಬಣ್ಣಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us