ವಿಜಯ್ ಸರ್ಕಾರ ರಚಿಸಲಿ, ಜನಾದೇಶಕ್ಕೆ ಗೌರವ ಕೊಡೋಣ, ರಾಜಕೀಯ ಮುತ್ಸದ್ದಿತನ ಮೆರೆದ ಎಂ.ಕೆ. ಸ್ಟಾಲಿನ್

ತಮಿಳುನಾಡಿನಲ್ಲಿ ಬಹುಮತದ ಕೊರತೆಯಿಂದ ಸರ್ಕಾರ ರಚಿಸಲು ಪರದಾಡುತ್ತಿದ್ದ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಎಂ.ಕೆ. ಸ್ಟಾಲಿನ್ ಬೆಂಬಲ ಸೂಚಿಸಿದ್ದಾರೆ. ಈ ದಿಟ್ಟ ನಿರ್ಧಾರದಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಪ್ಪಿದೆ. ಜನಾದೇಶವನ್ನು ಗೌರವಿಸಿ ವಿಜಯ್ ಸರ್ಕಾರ ರಚಿಸಲಿ ಎಂದಿರುವ ಸ್ಟಾಲಿನ್, ತಮ್ಮ ಜನಪ್ರಿಯ ಯೋಜನೆಗಳನ್ನು ಮುಂದುವರಿಸಲು ಸಲಹೆ ನೀಡಿದ್ದಾರೆ. ಇದು ತಮಿಳುನಾಡು ರಾಜಕೀಯದಲ್ಲಿ ಅವರ ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ.

ವಿಜಯ್ ಸರ್ಕಾರ ರಚಿಸಲಿ, ಜನಾದೇಶಕ್ಕೆ ಗೌರವ ಕೊಡೋಣ, ರಾಜಕೀಯ ಮುತ್ಸದ್ದಿತನ ಮೆರೆದ ಎಂ.ಕೆ. ಸ್ಟಾಲಿನ್
ಎಂಕೆ ಸ್ಟಾಲಿನ್
Image Credit source: The News Minute

Updated on: May 07, 2026 | 10:56 AM

ಚೆನ್ನೈ, ಮೇ 07: ತಮಿಳುನಾಡು ರಾಜಕೀಯದ ದೈತ್ಯ ಶಕ್ತಿ ಎಂ.ಕೆ. ಸ್ಟಾಲಿನ್(MK Stalin) ಅವರು ತೆಗೆದುಕೊಂಡಿರುವ ಒಂದು ದಿಟ್ಟ ನಿರ್ಧಾರ, ರಾಜ್ಯದಲ್ಲಿ ಎದುರಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಕ್ಷಣಾರ್ಧದಲ್ಲಿ ತಿಳಿಗೊಳಿಸಿದೆ. ಬಹುಮತದ ಕೊರತೆಯಿಂದ ಸರ್ಕಾರ ರಚಿಸಲು ಪರದಾಡುತ್ತಿದ್ದ ನಟ ವಿಜಯ್ ಅವರ ‘ತಮಿಳುಗ ವೆಟ್ರಿ ಕಳಗಂ’ (TVK) ಗೆ ಸ್ಟಾಲಿನ್ ಅಭಯ ನೀಡಿದ್ದು, ವಿಜಯ್ ಸರ್ಕಾರ ರಚಿಸಲಿ ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.

ಬಹುಮತಕ್ಕೆ 11 ಸ್ಥಾನಗಳ ಕೊರತೆಯಿದ್ದರೂ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದು ನಮಗೆ ಇಷ್ಟವಿಲ್ಲ. ಜನರ ತೀರ್ಪನ್ನು ಗೌರವಿಸಿ ವಿಜಯ್ ಅವರು ಸರ್ಕಾರ ರಚಿಸಲಿ ಎಂದು ಸ್ಪಷ್ಟಪಡಿಸಿದರು.

ಬುಧವಾರ ರಾತ್ರಿಯವರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ಸ್ಟಾಲಿನ್ ಅವರ ಈ ನಡೆಯು ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಮತ್ತಷ್ಟು ಓದಿ: ರಾಹುಲ್​​ ಮಾತು ಕೇಳದೆ ತಮಿಳುನಾಡಲ್ಲಿ ಕೆಟ್ಟಿತಾ ಕಾಂಗ್ರೆಸ್​​? ಅಸಲಿಗೆ ಆಗಿದ್ದೇನು?

ವಿಜಯ್ ಸರ್ಕಾರಕ್ಕೆ ಸ್ಟಾಲಿನ್ ಕಿವಿಮಾತು
ಅಧಿಕಾರ ಬಿಟ್ಟುಕೊಡಲು ಸಮ್ಮತಿಸಿರುವ ಸ್ಟಾಲಿನ್, ತಮ್ಮ ಆಡಳಿತ ಅವಧಿಯಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನು ಹೊಸ ಸರ್ಕಾರವು ಮುಂದುವರಿಸಬೇಕೆಂದು ಆಶಿಸಿದ್ದಾರೆ: ಶಾಲಾ ಮಕ್ಕಳ ಹಸಿವು ನೀಗಿಸುವ ಈ ಯೋಜನೆ ನಿಲ್ಲಬಾರದು, ಮಹಿಳೆಯರಿಗೆ ನೀಡಲಾಗುತ್ತಿರುವ 1,000 ರೂ. ಮಾಸಿಕ ಆರ್ಥಿಕ ನೆರವಿನ ಯೋಜನೆಯನ್ನು ಉಳಿಸಿಕೊಳ್ಳಬೇಕು.

ವಿಜಯ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ 2,500 ರೂ. ನೀಡುವುದಾಗಿ ಭರವಸೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸ್ಟಾಲಿನ್, ಇಷ್ಟು ದೊಡ್ಡ ಮೊತ್ತವನ್ನು ನೀಡುವುದು ಆರ್ಥಿಕವಾಗಿ ಸವಾಲಿನ ಕೆಲಸ. ಆದರೆ ಕನಿಷ್ಠ ಈಗಿರುವ 1,000 ರೂ. ಯೋಜನೆಯನ್ನಾದರೂ ಹೊಸ ಸರ್ಕಾರ ಮುಂದುವರಿಸಲಿ ಎಂದು ಸಲಹೆ ನೀಡಿದರು.

ಸ್ಟಾಲಿನ್ ಅವರ ಈ ಬಹಿರಂಗ ಬೆಂಬಲದ ನಂತರ, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ವಿಜಯ್ ಅವರ ಸಂಖ್ಯಾಬಲದ ಬಗ್ಗೆ ಇದ್ದ ಆತಂಕ ದೂರವಾದಂತಾಗಿದೆ. ಡಿಎಂಕೆ ಬೆಂಬಲ ಸೂಚಿಸಿರುವುದರಿಂದ, ವಿಜಯ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜಭವನದಿಂದ ಅಧಿಕೃತ ಆಮಂತ್ರಣ ಬರುವ ಸಾಧ್ಯತೆ ದಟ್ಟವಾಗಿದೆ.

ತಮಿಳುನಾಡಿನ ಇತಿಹಾಸದಲ್ಲಿ ಬದ್ಧ ರಾಜಕೀಯ ವೈರಿಗಳ ನಡುವೆ ಇಂತಹದೊಂದು ‘ಸಾಂವಿಧಾನಿಕ ಸೌಹಾರ್ದತೆ’ ಕಂಡುಬಂದಿರುವುದು ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us