ಸಲ್ಮಾನ್ ಖಾನ್​ ಕೇಸ್​ನಿಂದ ದೂರವಿರು; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಪಪ್ಪು ಯಾದವ್​ಗೆ ಜೀವ ಬೆದರಿಕೆ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ತನಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಪೂರ್ನಿಯಾ ಸಂಸದ ಪಪ್ಪು ಯಾದವ್ ಹೇಳಿದ್ದಾರೆ. ಪಪ್ಪು ಯಾದವ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹಲವು ಬಾರಿ ಕರೆಗಳು ಬಂದಿವೆ. ಪಪ್ಪು ಯಾದವ್ ತನಗೆ Z ಕೆಟಗರಿ ಭದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಗೃಹ ಸಚಿವಾಲಯಕ್ಕೆ ಪತ್ರವನ್ನೂ ಬರೆದಿದ್ದಾರೆ.

ಸಲ್ಮಾನ್ ಖಾನ್​ ಕೇಸ್​ನಿಂದ ದೂರವಿರು; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಪಪ್ಪು ಯಾದವ್​ಗೆ ಜೀವ ಬೆದರಿಕೆ
ಪಪ್ಪು ಯಾದವ್
Follow us
|

Updated on: Oct 28, 2024 | 2:54 PM

ಪಾಟ್ನಾ: ಬಿಹಾರದ ಪುರ್ನಿಯಾದ ಸಂಸದ ಪಪ್ಪು ಯಾದವ್ ಅವರಿಗೆ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಕೊಲೆ ಬೆದರಿಕೆ ಬಂದಿದೆ. ಅಪರಿಚಿತ ಕರೆ ಮಾಡಿದ ವ್ಯಕ್ತಿ ತಾನು ಕುಖ್ಯಾತ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದಾನೆ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಸಂಬಂಧಿಸಿದ ಕೇಸ್​ಗಳಿಂದ ದೂರವಿರುವಂತೆ ಪಪ್ಪು ಯಾದವ್‌ಗೆ ಬೆದರಿಕೆ ಹಾಕಿದ್ದಾನೆ.

ಕರೆ ಮಾಡಿದವನು ಪಪ್ಪು ಯಾದವ್ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಸಬರಮತಿ ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಹೇಳಿಕೆಗಳನ್ನು ನೀಡದಂತೆ ಸೂಚಿಸಿದ್ದಾನೆ. ಯುಎಇ ಸಂಖ್ಯೆಯಿಂದ ಕರೆ ಬಂದಿದ್ದು, ಅದರ ರೆಕಾರ್ಡಿಂಗ್ ಅನ್ನು ಬಿಹಾರ ಡಿಜಿಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಸದಸ್ಯರೊಬ್ಬರು ವಹಿಸಿಕೊಂಡ ನಂತರ ಇತ್ತೀಚೆಗೆ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಸಲ್ಮಾನ್ ಖಾನ್ ಅವರೊಂದಿಗಿನ ಸಿದ್ದಿಕ್ ಅವರ ‘ಆಪ್ತ ಸ್ನೇಹ’ವೇ ಅವರ ಕೊಲೆಯ ಹಿಂದಿನ ಕಾರಣ ಎಂದು ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: Fact Check: ಲಾರೆನ್ಸ್ ಬಿಷ್ಣೋಯಿಗೆ ಸಲ್ಮಾನ್ ಖಾನ್ ಬೆದರಿಕೆ ಹಾಕಿರುವುದು ನಿಜವೇ?: ವಿಡಿಯೋದ ಅಸಲಿಯತ್ತು ಇಲ್ಲಿದೆ

ಸಿದ್ದಿಕ್ ಹತ್ಯೆಗೆ ಪ್ರತಿಕ್ರಿಯೆಯಾಗಿ ಪಪ್ಪು ಯಾದವ್ ಬಿಷ್ಣೋಯ್ ಗ್ಯಾಂಗ್​ಗೆ ಬಹಿರಂಗವಾಗಿ ಸವಾಲು ಹಾಕಿದ್ದರು. ನನಗೆ ಅವಕಾಶ ನೀಡಿದರೆ 24 ಗಂಟೆಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಅವರಂತಹ ಕ್ರಿಮಿನಲ್‌ನ ಸಂಪೂರ್ಣ ಜಾಲವನ್ನು ಕೆಡವುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪಪ್ಪು ಯಾದವ್​ಗೆ ಬೆದರಿಕೆ ಹಾಕಲಾಗಿದೆ.

ಬಿಹಾರದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ‘ಕೊಲೆ ಬೆದರಿಕೆ’ ಕುರಿತು ಮಾಹಿತಿ ನೀಡಿದ ನಂತರ, ಪಪ್ಪು ಯಾದವ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ‘ವೈ ಕೆಟಗರಿ’ಯಿಂದ ‘ಝಡ್ ಕೆಟಗರಿ’ಗೆ ತಮ್ಮ ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಲಾರೆನ್ಸ್ ಹೆಸರಿನಲ್ಲಿ ನನಗೆ ಬೆದರಿಕೆ ಹಾಕಲಾಗಿದೆ. ಈ ಕುರಿತು ಬಿಹಾರದ ಡಿಜಿಪಿ ಮತ್ತು ಐಜಿ ಅವರಿಗೆ ದೂರು ನೀಡಲಾಗಿದೆ. ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಹಂಚಿಕೊಂಡಿದ್ದೇನೆ. ನನಗೆ ಯಾವುದೇ ತೊಂದರೆ ಸಂಭವಿಸಬಹುದು ಎಂದು ಪದೇ ಪದೇ ಬೆದರಿಕೆ ಹಾಕುವುದರಿಂದ ನನಗೆ ನೋವಾಗಿದೆ. ನನ್ನ ಭದ್ರತೆಯ ಬಗ್ಗೆ ಸರ್ಕಾರ ಗಂಭೀರವಾಗಿರಬೇಕು ಎಂದು ಪಪ್ಪು ಯಾದವ್ ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಗ್ಯಾಂಗ್​​​ಸ್ಟಾರ್​ ಲಾರೆನ್ಸ್ ಬಿಷ್ಣೋಯ್​​ಗೆ ಬಿಗ್​​​ ರಿಲೀಫ್, ಆ ಒಂದು ಪ್ರಕರಣ ಖುಲಾಸೆ

ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಹಿರಿಯ ನಾಯಕ ಬಾಬಾ ಸಿದ್ದಿಕ್ ಅವರನ್ನು ಅಕ್ಟೋಬರ್ 12ರಂದು ಸಂಜೆ ಮುಂಬೈನ ಬಾಂದ್ರಾ ಪೂರ್ವದಲ್ಲಿ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಲ್ಲಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿದ್ದು, ಮಾಸ್ಟರ್ ಮೈಂಡ್ ಪತ್ತೆಗೆ ತನಿಖೆ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ