
ಮುಂಬೈ, ಜನವರಿ 31: ವಿಮಾನಾಪಘಾತದಲ್ಲಿ ದುರ್ಮರಣ ಅಪ್ಪಿದ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ತಮ್ಮ ಪತಿಯ ಸ್ಥಾನವನ್ನು ಅವರು ತುಂಬಿದ್ದಾರೆ. ಮಹಾರಾಷ್ಟ್ರದ ರಾಜಕೀಯದಲ್ಲಿ ಸುನೇತ್ರಾ ಪವಾರ್ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಲೀ, ಉಪಮುಖ್ಯಮಂತ್ರಿಯಾಗಲೀ ಆಗಿದ್ದಿಲ್ಲ. ಸುನೇತ್ರಾ ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ ಎನ್ನುವ ದಾಖಲೆಯನ್ನಂತೂ ಮಾಡಿದ್ದಾರೆ.
ತಮ್ಮ ಪತಿಯ ನೆರಳಿನಲ್ಲೇ ಬಹುತೇಕ ಜೀವನ ಸವೆಸಿದ ಸುನೇತ್ರಾ ಪವಾರ್ 61ನೇ ವಯಸ್ಸಿನಲ್ಲಿ ಸಕ್ರಿಯ ರಾಜಕಾರಣ ಪ್ರವೇಶ ಮಾಡಿದ್ದರು. ಪ್ರಬಲ ರಾಜಕೀಯ ವ್ಯಕ್ತಿಗಳಿರುವ ಕುಟುಂಬದಲ್ಲೇ ಹುಟ್ಟಿ ಬೆಳೆದರೂ ಕುಟುಂಬ ಪಾಲನೆಯಲ್ಲೇ ಹೆಚ್ಚಿನ ಸಮಯ ಕಳೆದಿದ್ದರು. ಅವರ ಸಹೋದರ ಪದಂಸಿಂಗ್ ಬಾಜಿರಾವ್ ಪಾಟೀಲ್ ಅವರು ಮಾಜಿ ಸಚಿವರು, ಹಾಗೂ ಎನ್ಸಿಪಿ ಪಕ್ಷದ ಆರಂಭಿಕರಲ್ಲಿ ಒಬ್ಬರು. ಶರದ್ ಪವಾರ್ ಅವರ ಆಪ್ತರೂ ಹೌದು.
ಇದನ್ನೂ ಓದಿ: “ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?
ಪ್ರಬಲ ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೂ ಸುನೇತ್ರಾ ಸಕ್ರಿಯ ರಾಜಕಾರಣಕ್ಕೆ ಬರಲು 61ನೇ ವಯಸ್ಸು ದಾಟಬೇಕಾಯಿತು. ತಮ್ಮ ಪತಿ ಪ್ರತಿನಿಧಿಸುತ್ತಿದ್ದ ಬಾರಾಮತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವುದರಲ್ಲೇ ಸುನೇತ್ರಾ ತೃಪ್ತಿಪಡುತ್ತಿದ್ದರು.
ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬಂದಿದ್ದರಾದರೂ ಅವರ ನಿರ್ಧಾರ ಒಲ್ಲದ ಮನಸ್ಸಿನದ್ದಾಗಿತ್ತು. ಆ ಕ್ಷೇತ್ರದಲ್ಲಿ ಶರದ್ ಪವಾರ್ ಮಗಳಾದ ಸುಪ್ರಿಯಾ ಸುಲೆ ಎದುರು ಸ್ಪರ್ಧಿಸಿ ಸೋತರು. ನಂತರ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಿಲ್ಲಿಸಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿಕೊಡಲಾಯಿತು. ಈ ಮೂಲಕ ಸುನೇತ್ರಾ ಪವಾರ್ ಅವರು ಸಂಸದರಾದರು.
ಇದನ್ನೂ ಓದಿ: ಎನ್ಸಿಪಿ ಮತ್ತೆ ವಿಲೀನವಾಗುತ್ತಾ? ಅಜಿತ್ ಪವಾರ್ ಕೊನೆಯ ಆಸೆಯ ಬಗ್ಗೆ ಶುರುವಾಯ್ತು ಚರ್ಚೆ
ಸುನೇತ್ರಾ ಪವಾರ್ ಅವರನ್ನು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಛಗನ್ ಭುಜಬಲ್, ಪ್ರಫುಲ್ ಪಟೇಲ್ ಮೊದಲಾದ ಅನುಭವಿ ರಾಜಕಾರಣಿಗಳಿರುವ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯೂ ಅವರ ಹೆಗಲಿಗಿದೆ. ಸಕ್ರಿಯ ಆಡಳಿತದಲ್ಲಿ ಅನುಭವ ಇಲ್ಲದಿದ್ದರೂ ಅದನ್ನು ನಿಭಾಯಿಸುವ ಅನಿವಾರ್ಯತೆ ಅವರಿಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Sat, 31 January 26