AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?

ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ಎನ್‌ಸಿಪಿ ಬಣಗಳ ವಿಲೀನ ಅಂತಿಮ ಹಂತದಲ್ಲಿದ್ದು, ಶರದ್ ಪವಾರ್, ಸುನೇತ್ರಾ ಪವಾರ್, ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ನಾಯಕತ್ವ ರೇಸ್‌ನಲ್ಲಿದ್ದಾರೆ. ಈ ಬೆಳವಣಿಗೆ ಮಹಾಯುತಿ ಮೈತ್ರಿಕೂಟದ ಭವಿಷ್ಯ ಮತ್ತು ಮುಂಬರುವ ಚುನಾವಣೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ.

ಮಹಾ ರಾಜಕೀಯದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?
ಸಾಂದರ್ಭಿಕ ಚಿತ್ರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on:Jan 31, 2026 | 10:39 AM

Share

ಮಹಾರಾಷ್ಟ್ರ, ಜ.31: ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗಳು ನಡೆದಿದೆ. ಎನ್‌ಸಿಪಿ (NCP) ಎರಡೂ ಬಣಗಳ ವಿಲೀನ ಮತ್ತು ಹೊಸ ನಾಯಕತ್ವದ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಅಜಿತ್ ಪವಾರ್ ಮತ್ತು ಶರದ್ ಪವಾರ್ ನೇತೃತ್ವದ ಎರಡು ಬಣಗಳ ವಿಲೀನ ಪ್ರಕ್ರಿಯೆಯು ಅಜಿತ್ ಪವಾರ್ ಬದುಕಿದ್ದಾಗಲೇ ಅಂತಿಮ ಹಂತಕ್ಕೆ ತಲುಪಿತ್ತು. ಫೆಬ್ರವರಿ 8 ಅಥವಾ ಫೆಬ್ರವರಿ ಮಧ್ಯಭಾಗದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಫೆಬ್ರವರಿ 7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಬಹುದು ಎನ್ನಲಾಗಿದೆ. ಎನ್‌ಸಿಪಿ ಪಕ್ಷವನ್ನು ಮುನ್ನಡೆಸಲು ಅಥವಾ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳಲು ನಾಲ್ಕು ಹೆಸರುಗಳು ಮುಂಚೂಣಿಯಲ್ಲಿವೆ.

ಶರದ್ ಪವಾರ್ ಅವರು ಪಕ್ಷದ ಸ್ಥಾಪಕ ಮತ್ತು ಸರ್ವಸಮ್ಮತ ನಾಯಕ. ವಿಲೀನದ ನಂತರ ಇಡೀ ಪಕ್ಷವನ್ನು ಮತ್ತೆ ತಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಸುನೇತ್ರಾ ಪವಾರ್ ಅಜಿತ್ ಪವಾರ್ ಅವರ ಪತ್ನಿ ಮತ್ತು ರಾಜ್ಯಸಭಾ ಸಂಸದೆ. ಅಜಿತ್ ಪವಾರ್ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸಲು ಮತ್ತು ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿ ಇವರನ್ನು ನೇಮಿಸುವ ಬಗ್ಗೆ ಪಕ್ಷದೊಳಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಸುಪ್ರಿಯಾ ಸುಳೆ ಕೂಡ ಈ ಮುಂಚೂಣಿಯಲ್ಲಿ ಇದ್ದರೆ, ಶರದ್ ಪವಾರ್ ಅವರ ಪುತ್ರಿ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಮುಖವಾಗಿ ಗುರುತಿಸಿಕೊಂಡಿರುವ ಇವರು ವಿಲೀನದ ನಂತರ ಪ್ರಮುಖ ಸಾಂಸ್ಥಿಕ ಜವಾಬ್ದಾರಿ ವಹಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಪ್ರಫುಲ್ ಪಟೇಲ್ ಎನ್‌ಸಿಪಿಯ ಹಿರಿಯ ನಾಯಕ, ಒಂದು ವೇಳೆ ಕುಟುಂಬದ ಸದಸ್ಯರ ನೇಮಕದಲ್ಲಿ ತಾಂತ್ರಿಕ ತೊಂದರೆಗಳಾದಲ್ಲಿ, ಅನುಭವದ ಆಧಾರದ ಮೇಲೆ ಪ್ರಫುಲ್ ಪಟೇಲ್ ಅವರಿಗೆ ಪಕ್ಷದ ಅಧ್ಯಕ್ಷ ಪಟ್ಟ ಒಲಿಯುವ ಸಾಧ್ಯತೆಯಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರಿಗೆ ‘ಹುಟ್ಟುಹಬ್ಬದ ಉಡುಗೊರೆ’ಯಾಗಿ ಪಕ್ಷವನ್ನು ಮತ್ತೆ ಒಂದು ಮಾಡಲು ಬಯಸಿದ್ದರು ಎಂದು ವರದಿಯಾಗಿದೆ. ಈಗ ಅವರ ಸಾವಿನ ನಂತರ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಭಾವನಾತ್ಮಕವಾಗಿ ಒಂದಾಗುತ್ತಿದ್ದಾರೆ.

ಮಹಾರಾಷ್ಟ್ರದ ‘ಮಹಾಯುತಿ’ (ಬಿಜೆಪಿ-ಶಿವಸೇನೆ) ಮೈತ್ರಿಕೂಟದ ಭವಿಷ್ಯ ಏನು?

ಎನ್‌ಸಿಪಿ (NCP) ವಿಲೀನ ಪ್ರಕ್ರಿಯೆಯು ಮಹಾರಾಷ್ಟ್ರದ ‘ಮಹಾಯುತಿ’ (ಬಿಜೆಪಿ-ಶಿವಸೇನೆ-ಎನ್‌ಸಿಪಿ) ಮೈತ್ರಿಕೂಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಬದಲಾವಣೆಯು ಮೈತ್ರಿಕೂಟದ ಸಮತೋಲನವನ್ನು ಬುಡಮೇಲು ಮಾಡಬಹುದು. ಮಹಾಯುತಿ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಒಂದು ರೀತಿಯ ‘ಸಮತೋಲನ’ ಕಾಯ್ದುಕೊಳ್ಳುವ ಶಕ್ತಿಯಾಗಿದ್ದರು. ಅಜಿತ್ ಪವಾರ್ ಅವರ ಅಚಲ ಬೆಂಬಲವು ಶಿಂಧೆ ಅವರ ‘ಹಠಮಾರಿ’ ನಿಲುವುಗಳನ್ನು ನಿಯಂತ್ರಿಸಲು ದೇವೇಂದ್ರ ಫಡ್ನವೀಸ್‌ಗೆ ಸಹಾಯ ಮಾಡುತ್ತಿತ್ತು. ಈಗ ಅಜಿತ್ ಪವಾರ್ ಇಲ್ಲದಿರುವುದರಿಂದ, ಶಿಂಧೆ ಅವರು ಮೈತ್ರಿಕೂಟದಲ್ಲಿ ಹೆಚ್ಚು ಪ್ರಬಲವಾಗಿ ಹೊರಹೊಮ್ಮುವ ಸಾಧ್ಯತೆಯಿದೆ, ಇದು ಬಿಜೆಪಿಗೆ ಸವಾಲಾಗಬಹುದು. ಎರಡೂ ಎನ್‌ಸಿಪಿ ಬಣಗಳು ವಿಲೀನವಾದ ನಂತರ, ಆ ಒಕ್ಕೂಟವು ಮಹಾಯುತಿಯಲ್ಲಿ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದು ಶರದ್ ಪವಾರ್ ಅವರ ಕೈಯಲ್ಲಿರುತ್ತದೆ.

ಇದನ್ನೂ ಓದಿ: ಎನ್​ಸಿಪಿ ಮತ್ತೆ ವಿಲೀನವಾಗುತ್ತಾ? ಅಜಿತ್ ಪವಾರ್ ಕೊನೆಯ ಆಸೆಯ ಬಗ್ಗೆ ಶುರುವಾಯ್ತು ಚರ್ಚೆ

ಒಂದು ವೇಳೆ ವಿಲೀನಗೊಂಡ ಎನ್‌ಸಿಪಿ ಮಹಾಯುತಿಯಲ್ಲೇ ಉಳಿದರೆ, ಶರದ್ ಪವಾರ್ ಅವರ ಮಾರ್ಗದರ್ಶನದಲ್ಲಿ ಇದು ಬಿಜೆಪಿಗೆ ದೊಡ್ಡ ಬಲ ನೀಡಬಹುದು. ವಿಲೀನಗೊಂಡ ಎನ್‌ಸಿಪಿ ಮೈತ್ರಿಕೂಟದಿಂದ ಹೊರಬಂದು ಪ್ರತಿಪಕ್ಷಗಳ (MVA) ಜೊತೆ ಸೇರಿದರೆ, ಮಹಾಯುತಿ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆಯಾಗದಿದ್ದರೂ (ಬಿಜೆಪಿ+ಶಿವಸೇನೆಗೆ ಬಹುಮತವಿದೆ), ಮುಂಬರುವ ಚುನಾವಣೆಗಳಲ್ಲಿ ದೊಡ್ಡ ಹೊಡೆತ ಬೀಳಬಹುದು ಎಂದು ಅನೇಕ ರಾಜಕೀಯ ತಜ್ಞರು ಹೇಳಿದ್ದಾರೆ. ಶರದ್ ಪವಾರ್ ಅವರು ಮರಳಿ ಎನ್‌ಸಿಪಿಯ ಸಂಪೂರ್ಣ ಅಧಿಕಾರ ಪಡೆದರೆ, ಅದು ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ (ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಶಿವಸೇನೆ) ಬೂಸ್ಟ್ ನೀಡಲಿದೆ. ಮರಾಠಾ ಮತದಾರರ ಮೇಲೆ ಪವಾರ್ ಹೊಂದಿರುವ ಹಿಡಿತವು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಾಯುತಿಗೆ ಮುಳುವಾಗಬಹುದು. ಸದ್ಯದ ವರದಿಗಳ ಪ್ರಕಾರ, ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಸಹಮತ ವ್ಯಕ್ತಪಡಿಸಿದೆ. ಇದು ಅಜಿತ್ ಪವಾರ್ ಬಣದ ಶಾಸಕರನ್ನು ಒಟ್ಟಾಗಿ ಇರಿಸಲು ಮತ್ತು ಶರದ್ ಪವಾರ್ ಬಣದೊಂದಿಗೆ ವಿಲೀನವಾದರೂ ಮಹಾಯುತಿ ಸರ್ಕಾರದ ಜೊತೆಗಿನ ಸಂಬಂಧ ಕಡಿದುಕೊಳ್ಳದಂತೆ ನೋಡಿಕೊಳ್ಳಲು ಬಿಜೆಪಿ ಮಾಡುತ್ತಿರುವ ರಾಜತಾಂತ್ರಿಕ ನಡೆ ಎನ್ನಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Sat, 31 January 26