ನಂಬಿ ನಾರಾಯಣನ್​ ಮೇಲೆ ಗೂಢಚರ್ಯೆಯ ತಪ್ಪು ಆರೋಪ: ಸಿಬಿಐಗೆ ತನಿಖೆ ಮುಂದುವರಿಸಲು ಸುಪ್ರೀಂಕೋರ್ಟ್​ ಸೂಚನೆ

|

Updated on: Apr 15, 2021 | 5:29 PM

ತೀವ್ರ ಅವಮಾನ ಅನುಭವಿಸಿದ್ದ ನಂಬಿ ನಾರಾಯಣನ್ ಅವರಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಆದೇಶಿಸಿದ್ದ ಸುಪ್ರೀಂಕೋರ್ಟ್​ ಸೆಪ್ಟೆಂಬರ್ 14, 2018ರಂದು ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಲು ತನಿಖಾ ಸಮಿತಿಯನ್ನು ನೇಮಿಸಿತ್ತು.

ನಂಬಿ ನಾರಾಯಣನ್​ ಮೇಲೆ ಗೂಢಚರ್ಯೆಯ ತಪ್ಪು ಆರೋಪ: ಸಿಬಿಐಗೆ ತನಿಖೆ ಮುಂದುವರಿಸಲು ಸುಪ್ರೀಂಕೋರ್ಟ್​ ಸೂಚನೆ
ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್
Follow us on

ದೆಹಲಿ: ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಮೇಲೆ ತಪ್ಪಾಗಿ ಗೂಢಚರ್ಯೆ ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿಸಬೇಕೆಂದು ಸುಪ್ರೀಂಕೋರ್ಟ್​ ಗುರುವಾರ ಸೂಚಿಸಿದೆ. 1994ರಲ್ಲಿ ನಂಬಿ ನಾರಾಯಣನ್ ಅವರ ಮೇಲೆ ತಪ್ಪಾಗಿ ಆರೋಪ ಹೊರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ರೂಪಿಸಿದ್ದ ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್​ ಸೂಚಿಸಿದೆ.

ಸಮಿತಿ ಸಲ್ಲಿಸಿರುವ ವರದಿಯನ್ನು ಪ್ರಾಥಮಿಕ ತನಿಖಾ ವರದಿ ಎಂದು ಸಿಬಿಐ ಪರಿಗಣಿಸಬಹುದು. ಸಿಬಿಐ ತನ್ನ ವಿಸ್ತೃತ ವರದಿಯನ್ನು ಮೂರು ತಿಂಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ. ನಿವೃತ್ತ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಡಿ.ಕೆ.ಜೈನ್ ನೇತೃತ್ವದ ಮೂವರು ಸದಸ್ಯರ ಸಮಿತಿ ಈ ಸಂಬಂಧ ಸಲ್ಲಿಸಿರುವ ವರದಿಯನ್ನು ಗೌಪ್ಯವಾಗಿಯೇ ಇರಿಸಬೇಕು. ಬಹಿರಂಗಪಡಿಸಬಾರದು ಎಂದು ನ್ಯಾಯಮೂರ್ತಿ ಎ.ಎಂ.ಖಾನ್​ವಿಲ್ಕರ್ ನೇತೃತ್ವದ ನ್ಯಾಯಪೀಠವು ಆದೇಶಿಸಿದೆ.

ವಿಚಾರಣಾ ಸಮಿತಿಯು ನಾರಾಯಣನ್ ಅವರ ಅಭಿಪ್ರಾಯ ಪಡೆದುಕೊಂಡಿದೆ. ಆದರೆ ನನ್ನ ವಾದ ಆಲಿಸಲಿಲ್ಲ ಎಂಬ ನಿವೃತ್ತ ಡಿಜಿಪಿ ಸಿಬಿ ಮ್ಯಾಥ್ಯೂಸ್ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್​ ತಳ್ಳಿಹಾಕಿದೆ. ನಂಬಿ ನಾರಾಯಣನ್ ವಿರುದ್ಧ ತನಿಖೆ ನಡೆಸಿದ್ದ ವಿಶೇಷ ಕಾರ್ಯಪಡೆಯ (ಎಸ್​ಐಟಿ) ನೇತೃತ್ವವನ್ನು ಸಿಬಿ ಮ್ಯಾಥ್ಯೂಸ್​ ವಹಿಸಿದ್ದರು.

ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಕೃಷ್ಣ ಕುಮಾರಿ ಈ ನ್ಯಾಯಪೀಠದಲ್ಲಿದ್ದಾರೆ. ವಿಚಾರಣಾ ಸಮಿತಿಯು ಯಾರು ಸರಿ? ಯಾರು ತಪ್ಪು ಎಂಬ ತೀರ್ಮಾನಗಳಿಗೆ ಬರಬಾರದು. ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಮೇಲ್ನೋಟಕ್ಕೆ ಯಾವುದು ಸರಿ ಎನಿಸುತ್ತೆ ಎಂದು ಹೇಳಬೇಕು. ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಆಗಿರುವ ಲೋಪಗಳನ್ನು ಎತ್ತಿ ತೋರಿಸಬೇಕು ಎಂದರು.

ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಬಗ್ಗೆ ವಿಚಾರಣಾ ಸಮಿತಿ ಸಲ್ಲಿಸಿರುವ ವರದಿಯನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಸರ್ಕಾರವು ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್​ ವಿಚಾರಣೆಗೆ ಕೈಗೆತ್ತಿಕೊಂಡಿದೆ. ನಂಬಿ ನಾರಾಯಣನ್ ಅವರನ್ನು ಸುಪ್ರೀಂಕೋರ್ಟ್​ ದೋಷಮುಕ್ತ ಎಂದು ಘೋಷಿಸಿದ್ದು, ಅವರಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿದೆ.

ಇದು ರಾಷ್ಟ್ರೀಯ ವಿಚಾರವಾಗಿರುವುದರಿಂದ ಸಮಿತಿ ವರದಿಯ ಬಗ್ಗೆ ಶೀಘ್ರ ವಿಚಾರಣೆ ನಡೆಸುವಂತೆ ಮತ್ತು ವರದಿಯನ್ನು ಒಪ್ಪಿಕೊಳ್ಳುವಂತೆ ಸುಪ್ರೀಂಕೋರ್ಟ್​ಗೆ ಏಪ್ರಿಲ್ 5ರಂದು ಕೇಂದ್ರ ಸರ್ಕಾರವು ಮನವಿ ಮಾಡಿತ್ತು. ತೀವ್ರ ಅವಮಾನ ಅನುಭವಿಸಿದ್ದ ನಂಬಿ ನಾರಾಯಣನ್ ಅವರಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಆದೇಶಿಸಿದ್ದ ಸುಪ್ರೀಂಕೋರ್ಟ್​ ಸೆಪ್ಟೆಂಬರ್ 14, 2018ರಂದು ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಲು ತನಿಖಾ ಸಮಿತಿಯನ್ನು ನೇಮಿಸಿತ್ತು. ತಪ್ಪು ಮಾಡಿದ್ದ ಅಧಿಕಾರಿಗಳನ್ನು ಗುರುತಿಸಲು ರೂಪಿಸುವ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ ಒಬ್ಬೊಬ್ಬ ಸದಸ್ಯರು ಇರಬೇಕು ಎಂದು ಸುಪ್ರೀಂಕೋರ್ಟ್​ ತಿಳಿಸಿತ್ತು.

ಇಸ್ರೋದ ಮಾಜಿ ವಿಜ್ಞಾನಿಯ ವಿರುದ್ಧ ತನಿಖೆ ನಡೆದ ರೀತಿಯನ್ನು ವಿಷಾದನೀಯ ಎಂದು ಕಳೆದ ಸೆಪ್ಟೆಂಬರ್ 2018ರಲ್ಲಿ ಹೇಳಿದ್ದ ಸುಪ್ರೀಂಕೋರ್ಟ್​ ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕುಗಳನ್ನೇ ಇದು ಕಿತ್ತುಕೊಂಡಿತ್ತು. ಹಿಂದಿನ ಯಾವುದೇ ಹಿರಿಮೆಯನ್ನು ತನಿಖಾಧಿಕಾರಿಗಳು ಪರಿಗಣನೆಗೆ ತೆಗೆದುಕೊಳ್ಳದೇ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಹೇಳಿತ್ತು. 1994ರಲ್ಲಿ ಮಾಲ್ಡೀವ್ಸ್​ನ ಇಬ್ಬರು ಮಹಿಳೆಯರ ಬಂಧನದ ನಂತರ ಪ್ರಮುಖ ದಿನಪತ್ರಿಕೆಗಳಲ್ಲಿ ದೇಶದ್ರೋಹ ಪ್ರಕರಣ ರಾರಾಜಿಸಿತ್ತು. ಇಬ್ಬರು ವಿಜ್ಞಾನಿಗಳು ಮತ್ತು ಇತರ ನಾಲ್ವರ ಮೇಲೆ ಇಸ್ರೋದ ಅತಿಗೌಪ್ಯ ದಾಖಲೆಗಳನ್ನು ಹಸ್ತಾಂತರಿಸಿದ ಆರೋಪ ಕೇಳಿಬಂದಿತ್ತು.

ಕೇರಳದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದಾಗ ನಂಬಿ ನಾರಾಯಣನ್ ಅವರ ಬಂಧನವಾಗಿತ್ತು. ಮೂವರು ಸದಸ್ಯರಿದ್ದ ತನಿಖಾ ಆಯೋಗವು ಸುಪ್ರೀಂಕೋರ್ಟ್​ಗೆ ಈಚೆಗಷ್ಟೇ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿತ್ತು. ನಾರಾಯಣನ್ ಅವರ ಅಕ್ರಮ ಬಂಧನಕ್ಕೆ ಕೇರಳದ ಹಿರಿಯ ಪೊಲೀಸ್ ಅಧಿಕಾರಿಗಳೇ ಹೊಣೆ ಎಂದು ಸಿಬಿಐ ತನಿಖೆಯ ನಂತರ ಹೇಳಿತ್ತು.

(Supreme Court asks CBI to conduct further probe into role of erring cops in ex-ISRO scientist Nambi Narayan espionage case)

ಇದನ್ನೂ ಓದಿ: Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?

ಇದನ್ನೂ ಓದಿ: ISRO Mission: ಇಸ್ರೊದಿಂದ ಬ್ರೆಜಿಲ್‌ನ ಅಮೆಜಾನಿಯಾ-1 ಉಪಗ್ರಹ ಯಶಸ್ವಿ ಉಡಾವಣೆ