Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?

R Madhavan: ‘ರಾಕೆಟ್ರಿ: ದಿ ನಂಬಿ ಎಫೆಕ್ಟ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಮಾಧವನ್​ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್​ ಎನ್ನುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?
ಆರ್​. ಮಾಧವನ್​ - ನಂಬಿ ನಾರಾಯಣ್​
Follow us
ಮದನ್​ ಕುಮಾರ್​
| Updated By: Skanda

Updated on: Apr 03, 2021 | 8:26 AM

ಬಹುಭಾಷಾ ನಟ ಆರ್​. ಮಾಧವನ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇಷ್ಟು ವರ್ಷಗಳ ಅನುಭವವನ್ನು ಇಟ್ಟುಕೊಂಡು ಈಗ ಅವರು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್​’ ಸಿನಿಮಾ ನಿರ್ದೇಶಿಸಿದ್ದಾರೆ. ಈಗ ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಮಾಧವನ್​ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್​ ಎನ್ನುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿರುವ ಅಮಿತಾಬ್​ ಬಚ್ಚನ್​, ಪ್ರಿಯಾಂಕಾ ಚೋಪ್ರಾ, ಹೃತಿಕ್​ ರೋಷನ್​, ಅಭಿಷೇಕ್​ ಬಚ್ಚನ್​ ಮುಂತಾದವರು ಫಿದಾ ಆಗಿದ್ದಾರೆ.

ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಗೆ ಮಾಧವನ್​ ಯಾವುದೋ ಕಾಲ್ಪನಿಕ ಕಥೆಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಒಂದು ನೈಜ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇಸ್ರೋದ ಮಾಜಿ ರಾಕೆಟ್​ ಸೈನ್ಸ್​ ವಿಜ್ಞಾನಿ ನಂಬಿ ನಾರಾಯಣ್​ ಅವರ ಬಯೋಪಿಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಕಮರ್ಷಿಯಲ್​ ಸ್ಯಾಟಲೈಟ್​ ಮಾರುಕಟ್ಟೆಯಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ಪ್ರಯತ್ನಿಸಿದ ವ್ಯಕ್ತಿಯೇ ನಂಬಿ ನಾರಾಯಣ್​. ಆದರೆ ಅಂಥ ವಿಜ್ಞಾನಿ ಜೈಲು ಸೇರಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ!

ನಂಬಿ ನಾರಾಯಣ್​ ಒಬ್ಬ ಅಪ್ರತಿಮ ದೇಶಭಕ್ತರಾಗಿದ್ದರು. ಆದರೆ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು. ಇಸ್ರೋದ ಕೆಲವು ಮಾಹಿತಿಗಳನ್ನು ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪ ನಂಬಿ ನಾರಾಯಣ್​ ಮೇಲೆ ಕೇಳಿಬಂತು.

1994ರಲ್ಲಿ ಕೇರಳ ಪೊಲೀಸರು ವಿದೇಶಿ ಮಹಿಳೆಯೊಬ್ಬರನ್ನು ಬಂಧಿಸಿದರು. ಆಕೆಯ ಮೂಲಕ ಇಸ್ರೋ ವಿಜ್ಞಾನಿಗಳು ಕೆಲವು ಗುಪ್ತ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಯಿತು. ಅದೇ ತನಿಖೆಯ ಮುಂದುವರಿದ ಭಾಗವಾಗಿ ನಂಬಿ ನಾರಾಯಣ್​ ಜೊತೆಗೆ ಇಸ್ರೋದ ಮತ್ತೋರ್ವ ವಿಜ್ಞಾನಿ ಡಿ. ಶಶಿಕುಮಾರನ್​ ಅವರನ್ನು ಬಂಧಿಸಿದರು.

ಈ ಘಟನೆ ನಡೆದ 20 ದಿನಗಳ ಒಳಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. 1996ರಲ್ಲಿ ನ್ಯಾಯಾಲಯಕ್ಕೆ ಸಿಬಿಐ ತನ್ನ ವರದಿ ಒಪ್ಪಿಸಿತು. ನಂಬಿ ನಾರಾಯಣ್​ ಮೇಲೆ ಹೊರಿಸಿದ್ದ ಎಲ್ಲ ಆರೋಪಗಳು ಸುಳ್ಳು ಎಂದು ಈ ವರದಿಯಲ್ಲಿ ತಿಳಿಸಲಾಗಿತ್ತು. ನಂತರ ಆ ಪ್ರಕರಣದ ಮರುತನಿಖೆ ಮಾಡಿಸುವ ಪ್ರಯತ್ನವನ್ನು ಮಾಡಲಾಯಿತಾದರೂ ಅದನ್ನು ಸುಪ್ರೀಂ ಕೋರ್ಟ್​ ನಿರಾಕರಿಸಿತು.

ಒಟ್ಟಾರೆ ಘಟನೆಗಳಿಂದಾಗಿ ನಂಬಿ ನಾರಾಯಣ್​ ಅವರ ಬದುಕಿಗೆ ಬಹುದೊಡ್ಡ ನಷ್ಟವಾಯಿತು. ಈ ಎಲ್ಲ ವಿವರಗಳನ್ನು ಇಟ್ಟುಕೊಂಡು ಮಾಧವನ್​ ಈ ಸಿನಿಮಾ ಮಾಡಿದ್ದಾರೆ. ನಂಬಿ ನಾರಾಯಣ್​ ಅವರ ಪಾತ್ರದಲ್ಲಿ ಸ್ವತಃ ಮಾಧವನ್​ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಹಲವು ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ಮೂಡಿಬರುತ್ತಿದೆ. ಸೂರ್ಯ, ಶಾರುಖ್​ ಖಾನ್​ ಅಥಿತಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮ ಮೇಲೆ ಕ್ರಶ್ ಆಗಿದೆ ಎಂದ ಅಭಿಮಾನಿಗಳಿಗೆ ಮಾಧವನ್‌ ಕೊಟ್ಟ ಉತ್ತರವೇನು ಗೊತ್ತಾ?

(Rocketry The Nambi effect Trailer: Here is the real story of R Madhavan directorial film)