ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ನಿಲ್ಲಿಸಲು ಸುಪ್ರೀಂಕೋರ್ಟ್ ನಕಾರ, ನಾಳೆಯಿಂದ ವಿಡಿಯೊ ಚಿತ್ರೀಕರಣ ಸರ್ವೆ

ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ನಿಲ್ಲಿಸಲು ಸುಪ್ರೀಂಕೋರ್ಟ್ ನಕಾರ, ನಾಳೆಯಿಂದ ವಿಡಿಯೊ ಚಿತ್ರೀಕರಣ ಸರ್ವೆ
ಸುಪ್ರೀಂಕೋರ್ಟ್

ಐತಿಹಾಸಿಕ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ವಕೀಲ ಕಮಿಷನರ್‌ಗೆ ಸಹಾಯ ಮಾಡಲು ಜಿಲ್ಲಾ ನ್ಯಾಯಾಲಯವು ಇನ್ನೂ ಇಬ್ಬರು ವಕೀಲರನ್ನು ನೇಮಿಸಿದೆ. ಈ ಕಾರ್ಯ ವಿಫಲಗೊಳಿಸಲು ಯತ್ನಿಸಿದರೆ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ

TV9kannada Web Team

| Edited By: Rashmi Kallakatta

May 13, 2022 | 6:56 PM

ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ವಾರಣಾಸಿಯ ಜ್ಞಾನವಾಪಿ ಮಸೀದಿಯ (Gyanvapi Mosque) ಸಮೀಕ್ಷೆಯನ್ನು ತಕ್ಷಣವೇ ನಿಲ್ಲಿಸಲು ಸುಪ್ರೀಂಕೋರ್ಟ್ (Supreme Court) ಶುಕ್ರವಾರ ನಿರಾಕರಿಸಿದ್ದು, ಈ ವಿಷಯವನ್ನು ಸೂಕ್ತ ಸಮಯದಲ್ಲಿ ಪರಿಗಣಿಸಬೇಕು ಎಂದು ಹೇಳಿದೆ. ಜ್ಞಾನವಾಪಿ ಆವರಣದ ಸಮೀಕ್ಷೆಯ ವಿರುದ್ಧ ಮುಸ್ಲಿಂಪರರು ನೀಡಿದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ವಾರಣಾಸಿಯಲ್ಲಿ (Varanasi) ನಡೆಯುತ್ತಿರುವ ಸರ್ವೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ ಎಂದು ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಮುಸ್ಲಿಂ ಪರ ವಾದ ಮಂಡಿಸಿದ ಹಿರಿಯ ವಕೀಲ ಹುಜೆಫಾ ಅಹ್ಮದಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು. ನೋಡೋಣ ಎಂದು ಸಿಜೆಐ ಹೇಳಿದ್ದಾರೆ. ವಾರಣಾಸಿ ಆಸ್ತಿಗೆ ಸಂಬಂಧಿಸಿದಂತೆ ಸಮೀಕ್ಷೆಗೆ ನಿರ್ದೇಶನ ನೀಡಲಾಗಿದೆ. ಇದು ಆರಾಧನಾ ಸ್ಥಳಗಳ ಕಾಯ್ದೆಯಡಿ ಇದೆ ಇದೀಗ ಕೋರ್ಟ್‌ ಕಮಿಷನರ್‌ಗೆ ಸರ್ವೆ ನಡೆಸುವಂತೆ ಆದೇಶ ನೀಡಿದೆ. ಇದು ಅನಾದಿ ಕಾಲದಿಂದಲೂ ಮಸೀದಿಯಾಗಿತ್ತು ಎಂದು ಅಹ್ಮದಿ ಹೇಳಿದರು.  ಈ ಜ್ಞಾನವಾಪಿ ಅನಾದಿ ಕಾಲದಿಂದಲೂ ಮಸೀದಿಯಾಗಿದೆ ಮತ್ತು ಇದನ್ನು ಆರಾಧನಾ ಸ್ಥಳಗಳ ಕಾಯ್ದೆಯು ಸ್ಪಷ್ಟವಾಗಿ ತಡೆಯುತ್ತದೆ ಎಂದು ಅಹ್ಮದಿ ಹೇಳಿದರು. ಸಮೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದ್ದು, ಸದ್ಯಕ್ಕೆ ಯಥಾಸ್ಥಿತಿಗೆ ಆದೇಶ ಹೊರಡಿಸಬೇಕು ಎಂದರು. ಇದಕ್ಕೆ ಸಿಜೆಐ, “ನನಗೇನೂ ಗೊತ್ತಿಲ್ಲ. ಅಂತಹ ಆದೇಶವನ್ನು ನಾನು ಹೇಗೆ ನೀಡಲಿ? ನೋಡೋಣ ಎಂದಿದ್ದಾರೆ.

ಮುಸ್ಲಿಂ ಕಡೆಯವರು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ಮತ್ತು ಅದರ ಸೆಕ್ಷನ್ 4 ಅನ್ನು ಉಲ್ಲೇಖಿಸುತ್ತಿದ್ದಾರೆ, ಇದು ಯಾವುದೇ ಮೊಕದ್ದಮೆಯನ್ನು ಸಲ್ಲಿಸುವುದನ್ನು ಅಥವಾ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಪರಿವರ್ತಿಸಲು ಯಾವುದೇ ಕಾನೂನು ಕ್ರಮವನ್ನು ಪ್ರಾರಂಭಿಸುವುದನ್ನು ನಿರ್ಬಂಧಿಸುತ್ತದೆ. ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಗುರುವಾರ ಇಲ್ಲಿ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ವಿಡಿಯೊಗ್ರಫಿ ಸಮೀಕ್ಷೆಯನ್ನು ನಡೆಸಲು ನೇಮಿಸಿದ್ದ ವಕೀಲ ಕಮಿಷನರ್ ಅನ್ನು ಬದಲಿಸುವ ಮನವಿಯನ್ನು ತಿರಸ್ಕರಿಸಿದ್ದು, ಮೇ 17 ರೊಳಗೆ ಕಾರ್ಯವನ್ನು ಪೂರ್ಣಗೊಳಿಸಲು ಆದೇಶಿಸಿತು.

ಐತಿಹಾಸಿಕ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ವಕೀಲ ಕಮಿಷನರ್‌ಗೆ ಸಹಾಯ ಮಾಡಲು ಜಿಲ್ಲಾ ನ್ಯಾಯಾಲಯವು ಇನ್ನೂ ಇಬ್ಬರು ವಕೀಲರನ್ನು ನೇಮಿಸಿದೆ. ಈ ಕಾರ್ಯ ವಿಫಲಗೊಳಿಸಲು ಯತ್ನಿಸಿದರೆ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ. ಸ್ಥಳೀಯ ನ್ಯಾಯಾಲಯದ ಮೇ 12 ರ ಆದೇಶವು ಮಸೀದಿಯ ಹೊರ ಗೋಡೆಯ ಮೇಲೆ ಇರುವ ಹಿಂದೂ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ಕೋರಿ ಮಹಿಳೆಯರ ಗುಂಪು ಮಾಡಿದ ಮನವಿಯ ಮೇಲೆ ಬಂದಿದೆ.

ಮಸೀದಿಯ ಆಡಳಿತ ಸಮಿತಿಯು ಮಸೀದಿಯೊಳಗೆ ಚಿತ್ರೀಕರಣವನ್ನು ವಿರೋಧಿಸಿದ್ದು ಮಾತ್ರವಲ್ಲದೆ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಕಮಿಷನರ್ ಪಕ್ಷಪಾತದ ಆರೋಪವನ್ನೂ ಮಾಡಿತ್ತು. ವಿರೋಧದ ನಡುವೆಯೇ ಸಮೀಕ್ಷೆ ಕೆಲಕಾಲ ಸ್ಥಗಿತಗೊಂಡಿತ್ತು. ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರ ಪ್ರಕಾರ, ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯವು ಮಸೀದಿ ಸಂಕೀರ್ಣದಲ್ಲಿ ಮುಚ್ಚಿದ ಎರಡು ನೆಲಮಾಳಿಗೆಗಳನ್ನು ಸಮೀಕ್ಷೆಗಾಗಿ ತೆರೆಯುವ ಆಕ್ಷೇಪಣೆಗಳನ್ನು ವಜಾಗೊಳಿಸಿದೆ. ಸಮೀಕ್ಷೆಯಲ್ಲಿ ಯಾರಾದರೂ ಅಡೆತಡೆಗಳನ್ನು ಸೃಷ್ಟಿಸಿದರೆ ಎಫ್‌ಐಆರ್ ದಾಖಲಿಸಲು ಮತ್ತು ಪ್ರಕ್ರಿಯೆ ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್‌ಗೆ ನ್ಯಾಯಾಲಯ ಸೂಚಿಸಿದೆ.

ಜ್ಞಾನವಾಪಿ-ಶೃಂಗಾರ್ ಗೌರಿ ಕಾಂಪ್ಲೆಕ್ಸ್‌ನಲ್ಲಿ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಸಮೀಕ್ಷೆ ನಡೆಸಬಹುದು ಎಂದು ಅದು ಹೇಳಿದೆ. ಮಂಗಳವಾರದೊಳಗೆ ಸಮೀಕ್ಷೆಯ ವರದಿ ಸಲ್ಲಿಸಬೇಕು. ದೆಹಲಿ ನಿವಾಸಿಗಳಾದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರ ಮನವಿಯ ನಂತರ ನ್ಯಾಯಾಧೀಶ ದಿವಾಕರ್ ಅವರು ಏಪ್ರಿಲ್ 18, 2021 ರಂದು ಮಸೀದಿಯ ವಿಡಿಯೊಗ್ರಾಫಿಕ್ ಸಮೀಕ್ಷೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada