ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸಿಗಲ್ಲ: ಸಾಮಾಜಿಕ ಹಿಂದುಳಿದಿರುವಿಕೆ ವರ್ಗಾಯಿಸಲಾಗದು ಎಂದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ: ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರಿಗೆ ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿ ಸೌಲಭ್ಯಗಳು ಸಿಗುವುದಿಲ್ಲ. ಸಾಮಾಜಿಕ ಹಿಂದುಳಿದಿರುವಿಕೆ ಹೊಸ ಧರ್ಮಕ್ಕೆ ವರ್ಗಾವಣೆಯಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ತಮಿಳುನಾಡು ಸರ್ಕಾರದ 'ಹಿಂದುಳಿದ ವರ್ಗದ ಮುಸ್ಲಿಂ' ಕೋಟಾವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಪರಿಶಿಷ್ಟ ಜಾತಿಗೆ ಸೇರಿದವರು ಇಸ್ಲಾಂಗೆ ಮತಾಂತರಗೊಂಡರೆ ತಮ್ಮ SC ಸ್ಥಾನಮಾನ ಕಳೆದುಕೊಳ್ಳುತ್ತಾರೆ.

ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸಿಗಲ್ಲ: ಸಾಮಾಜಿಕ ಹಿಂದುಳಿದಿರುವಿಕೆ ವರ್ಗಾಯಿಸಲಾಗದು ಎಂದ ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್​
Image Credit source: PTI

Updated on: Oct 15, 2026 | 12:08 PM

ನವದೆಹಲಿ, ಅಕ್ಟೋಬರ್ 15: ಧಾರ್ಮಿಕ ಮತಾಂತರ ಮತ್ತು ಮೀಸಲಾತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ತನ್ನ ಹಿಂದಿನ ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ಹೊಸ ಧರ್ಮದಲ್ಲಿ ಹಿಂದುಳಿದ ವರ್ಗಗಳ (OBC/BC) ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಮತಾಂತರಗೊಂಡವರಿಗೆ ‘ಹಿಂದುಳಿದ ವರ್ಗದ ಮುಸ್ಲಿಂ’ ಕೋಟಾ ಕಲ್ಪಿಸಲು ಮುಂದಾಗಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.

ಸಾಮಾಜಿಕ ಹಿಂದುಳಿದಿರುವಿಕೆ ವರ್ಗಾವಣೆಯಾಗುವುದಿಲ್ಲ

ಹಿಂದೂ ಸಾಮಾಜಿಕ ವ್ಯವಸ್ಥೆಯಿಂದ ಹಿಂದೂಯೇತರ ಧಾರ್ಮಿಕ ವ್ಯವಸ್ಥೆಗೆ ಪರಿವರ್ತನೆ ಹೊಂದುವ ವ್ಯಕ್ತಿಯು ಸಂವಿಧಾನದ 16(4) ನೇ ವಿಧಿಯ ಅಡಿಯಲ್ಲಿ ವಿಶೇಷ ಉದ್ಯೋಗ ಅಥವಾ ಶಿಕ್ಷಣ ಸೌಲಭ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ಹಿಂದಿನ ಧರ್ಮದಲ್ಲಿ ಆತ ಅನುಭವಿಸಿದ ಸಾಮಾಜಿಕ ಹಿಂದುಳಿದಿರುವಿಕೆಯು ಹೊಸ ಧರ್ಮಕ್ಕೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹಿಂದುಳಿದ ವರ್ಗಗಳು (BC), ಅತ್ಯಂತ ಹಿಂದುಳಿದ ವರ್ಗಗಳು (MBC), ವಿಮುಕ್ತ ಸಮುದಾಯಗಳು (DNC) ಮತ್ತು ಪರಿಶಿಷ್ಟ ಜಾತಿಗಳಿಗೆ (SC) ಸೇರಿದ ವ್ಯಕ್ತಿಗಳು ಇಸ್ಲಾಂಗೆ ಮತಾಂತರಗೊಂಡಾಗ ಅವರಿಗೆ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ನೀಡಿ ಮೀಸಲಾತಿ ನೀಡಲು ತಮಿಳುನಾಡು ಸರ್ಕಾರ ಜಿಒ ಹೊರಡಿಸಿತ್ತು. ಈ ಆದೇಶವು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಎತ್ತಿಹಿಡಿದಿದೆ.

ಮತ್ತಷ್ಟು ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ; ತಡೆ ನೀಡಲು ಸುಪ್ರೀಂಕೋರ್ಟ್ ನಕಾರ; ವಿವರಣೆ ಕೋರಿ ಸರ್ಕಾರಕ್ಕೆ ನೋಟೀಸ್

ಯಾರಿಗೆ ಎಸ್‌ಸಿ ಮಾನ್ಯತೆ?: 1950 ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶದ ಪ್ಯಾರಾಗ್ರಾಫ್ 3 ರ ಅನ್ವಯ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳನ್ನು (ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮ) ಅನುಸರಿಸುವ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ.

ಎಸ್‌ಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ತಕ್ಷಣವೇ ತಮ್ಮ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮೀಸಲಾತಿ ಪ್ರಯೋಜನಗಳನ್ನು ಕಾನೂನುಬದ್ಧವಾಗಿ ಕಳೆದುಕೊಳ್ಳುತ್ತಾರೆ ಎಂದು ಪೀಠ ಸ್ಪಷ್ಟಪಡಿಸಿದೆ. ತಮಿಳುನಾಡಿನಲ್ಲಿ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯೊಬ್ಬರು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ತಮಗೆ ಹಿಂದುಳಿದ ವರ್ಗದ ಮುಸ್ಲಿಂ (BCM) ಕೋಟಾ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗದ ವರದಿ ನಿರೀಕ್ಷೆ: ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಪರಿಶಿಷ್ಟ ಜಾತಿ (SC) ಸ್ಥಾನಮಾನ ನೀಡಬೇಕೇ ಬೇಡವೇ ಎಂಬುದನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ಮಾಜಿ ಸಿಜೆಐ ಕೆ.ಜಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿದೆ. ಈ ವರದಿ ಇನ್ನಷ್ಟೇ ಅಂತಿಮಗೊಳ್ಳಬೇಕಿದ್ದು, ಈ ಮಧ್ಯೆ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ರಾಷ್ಟ್ರಮಟ್ಟದ ಮತಾಂತರ ಹಾಗೂ ಮೀಸಲಾತಿ ಚರ್ಚೆಗಳಲ್ಲಿ ಅತ್ಯಂತ ಮಹತ್ವದ ಕಾನೂನು ನಿದರ್ಶನವಾಗಿ ಹೊರಹೊಮ್ಮಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:07 pm, Thu, 15 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us