ಲಾಲು ಯಾದವ್​​ಗೆ ಭಾರೀ ಹಿನ್ನಡೆ; ಉದ್ಯೋಗಕ್ಕಾಗಿ ಭೂಮಿ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ತಮ್ಮ ವಿರುದ್ಧದ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಲಾಲು ಯಾದವ್ ಅವರು ಮೇ 29ರ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆಗೆ ತಡೆ ನೀಡಲು ಸುಪ್ರೀಂ ನಿರಾಕರಿಸಿದೆ.

ಲಾಲು ಯಾದವ್​​ಗೆ ಭಾರೀ ಹಿನ್ನಡೆ; ಉದ್ಯೋಗಕ್ಕಾಗಿ ಭೂಮಿ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತ
Lalu Yadav

Updated on: Jul 18, 2025 | 4:13 PM

ನವದೆಹಲಿ, ಜುಲೈ 18: ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ಕೋರಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ (Lalu Prasad Yadav) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಇಂದು (ಜುಲೈ 18) ನಿರಾಕರಿಸಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ವಿರುದ್ಧದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್ (Supreme Court) ದೆಹಲಿ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.

ತಮ್ಮ ವಿರುದ್ಧದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ತಮ್ಮ ಮನವಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್‌ಗಳ ಹಿಂದಿನ ಆದೇಶವನ್ನು ಪ್ರಶ್ನಿಸಿ ಲಾಲು ಯಾದವ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಗತ್ಯ ಅನುಮತಿಯಿಲ್ಲದೆ ತಮ್ಮ ವಿರುದ್ಧ ಕೇಸ್ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ; ಲಾಲು ಯಾದವ್, ಇಬ್ಬರು ಮಕ್ಕಳಿಗೆ ಸಮನ್ಸ್ ಜಾರಿ

ಆದರೆ, ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಈ ವಿಷಯವು ಸುಪ್ರೀಂ ಕೋರ್ಟ್ ಹಸ್ತಕ್ಷೇಪವನ್ನು ಸಮರ್ಥಿಸುವುದಿಲ್ಲ. ದೆಹಲಿ ಹೈಕೋರ್ಟ್‌ನಿಂದ ಇದನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದೆ. ಹೈಕೋರ್ಟ್ ಈ ಹಿಂದೆ ವಿಚಾರಣಾ ನ್ಯಾಯಾಲಯದ ಮುಂದೆ ಲಾಲು ಯಾದವ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ ವಿಚಾರಣೆಯನ್ನು ಸ್ಥಗಿತಗೊಳಿಸಲು ನಿರಾಕರಿಸಿತ್ತು.

ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಮತ್ತು ದೆಹಲಿ ನ್ಯಾಯಾಲಯದಲ್ಲಿ ಬಾಕಿ ಇರುವ ವಿಚಾರಣೆಯನ್ನು ತಡೆಹಿಡಿಯಲು ಲಾಲು ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವುದನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಹೀಗಾಗಿ, ಮಧ್ಯಪ್ರವೇಶಿಸಲು ನಿರಾಕರಿಸಿದೆ. ಲಾಲು ಯಾದವ್ ಅವರ ಮನವಿಯ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಅದು ಹೈಕೋರ್ಟ್‌ಗೆ ವಿನಂತಿಸಿದೆ.

ಇದನ್ನೂ ಓದಿ: ಬಿಹಾರದ ಇತಿಹಾಸದಲ್ಲಿ ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಸಿಬಿಐ ಎಫ್‌ಐಆರ್ ರದ್ದುಗೊಳಿಸುವಂತೆ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ತ್ವರಿತಗೊಳಿಸುವಂತೆ ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ದೆಹಲಿ ಹೈಕೋರ್ಟ್​ಗೆ ಸೂಚಿಸಿದೆ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಲಾಲು ಯಾದವ್ ಅವರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:08 pm, Fri, 18 July 25