AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬದ ದಿನವೇ ಇಡಿಯಿಂದ ಭೂಪೇಶ್ ಬಘೇಲ್ ಮಗನ ಬಂಧನ; ‘ಗಿಫ್ಟ್​​’ಗೆ ಮೋದಿಗೆ ಮಾಜಿ ಸಿಎಂ ಧನ್ಯವಾದ!

ಮದ್ಯ ಹಗರಣದಲ್ಲಿ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಇಡಿ ಇಂದು ಬಂಧಿಸಿದೆ. ಇಂದೇ ಚೈತನ್ಯ ಬಘೇಲ್ ಅವರ ಹುಟ್ಟುಹಬ್ಬ. ಅವರ ಬರ್ತಡೇ ದಿನವೇ ಇಡಿ ಅವರನ್ನು ವಶಕ್ಕೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ, ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇಡಿ ಅಧಿಕಾರಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಭೂಪೇಶ್ ಬಘೇಲ್ ಈ 'ಬರ್ತಡೇ ಉಡುಗೊರೆ'ಗೆ ಧನ್ಯವಾದ ಎಂದಿದ್ದಾರೆ.

ಹುಟ್ಟುಹಬ್ಬದ ದಿನವೇ ಇಡಿಯಿಂದ ಭೂಪೇಶ್ ಬಘೇಲ್ ಮಗನ ಬಂಧನ; 'ಗಿಫ್ಟ್​​'ಗೆ ಮೋದಿಗೆ ಮಾಜಿ ಸಿಎಂ ಧನ್ಯವಾದ!
Bhupesh Baghel And His Son
ಸುಷ್ಮಾ ಚಕ್ರೆ
|

Updated on: Jul 18, 2025 | 5:25 PM

Share

ನವದೆಹಲಿ, ಜುಲೈ 18: 2,100 ಕೋಟಿ ರೂ. ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಇಂದು (ಶುಕ್ರವಾರ) ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಬಂಧಿಸಿದೆ. ಹೊಸ ದಾಖಲೆಗಳ ಆಧಾರದ ಮೇಲೆ ಹೊಸ ದಾಳಿಗಳನ್ನು ನಡೆಸಿದ ನಂತರ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಸೆಕ್ಷನ್ 19ರ ಅಡಿಯಲ್ಲಿ ಚೈತನ್ಯ (Chaitanya Baghel) ಅವರನ್ನು ಭಿಲಾಯಿಯಲ್ಲಿರುವ ಕುಟುಂಬದ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ. ಈ ಬಂಧನ ವಿಧಾನಸಭೆಯಲ್ಲಿ ಗೊಂದಲಕ್ಕೆ ಕಾರಣವಾಯಿತು. ಕಾಂಗ್ರೆಸ್‌ನ ಪ್ರತಿಭಟನೆಯಿಂದಾಗಿ ಕಲಾಪವನ್ನು ಮುಂದೂಡಬೇಕಾಯಿತು.

ಈ ಹಿಂದೆ ಇಡಿ ಚೈತನ್ಯ ಬಘೇಲ್ ಅವರನ್ನು ರಾಜ್ಯ ಸರ್ಕಾರಕ್ಕೆ 2,160 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವನ್ನುಂಟು ಮಾಡಿದ ಆರ್ಥಿಕ ಅಪರಾಧದ ಆದಾಯವನ್ನು ಸ್ವೀಕರಿಸಿದವರು ಎಂದು ಹೆಸರಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮಾಜಿ ವಾಣಿಜ್ಯ ಮತ್ತು ವಾಣಿಜ್ಯ ತೆರಿಗೆ ಸಚಿವ ಕವಾಸಿ ಲಖ್ಮಾ ಅವರನ್ನು ಜನವರಿಯಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಸೇರಿ 6 ಮಂದಿ ವಿರುದ್ಧ ಚಾರ್ಜ್​ಶೀಟ್

ಇಂದು ಚೈತನ್ಯ ಬಘೇಲ್ ಅವರ ಮನೆಯಲ್ಲಿ ನಡೆದ ಶೋಧದ ಸಮಯದಲ್ಲಿ ಚೈತನ್ಯ ಬಘೇಲ್ ಅಸಹಕಾರ ತೋರಿದ್ದಾರೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ. ಇದರಿಂದ ಅವರನ್ನು ತಕ್ಷಣ ಬಂಧಿಸಲಾಯಿತು. ಭಿಲಾಯಿ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿಯ ಭಾರೀ ನಿಯೋಜನೆ ಕಂಡುಬಂದಿದ್ದು, ಅಲ್ಲಿ ಪಕ್ಷದ ಕಾರ್ಯಕರ್ತರು ಕೂಡ ಸೇರಿದ್ದರು. ಚೈತನ್ಯ ಅವರ ಜನ್ಮದಿನವಾದ ಇಂದೇ ಬಂಧನವಾಗಿದೆ. ಈ ವಿಷಯವನ್ನು ಮಾಜಿ ಸಿಎಂ ಭೂಪೇಶ್ ಬಘೇಲ್ ಎತ್ತಿ ತೋರಿಸಿದ್ದು, ಕೇಂದ್ರ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಚೈತನ್ಯ ಬಘೇಲ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಛತ್ತೀಸ್​ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್, ನನ್ನ ಮಗನ ಹುಟ್ಟುಹಬ್ಬಕ್ಕೆ ಇಂಥದ್ದೊಂದು ‘ಗಿಫ್ಟ್​​’ ಕೊಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ‘ಧನ್ಯವಾದ’ ಎಂದು ವ್ಯಂಗ್ಯವಾಡಿದ್ದಾರೆ. “ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಈ ರೀತಿಯ ಹುಟ್ಟುಹಬ್ಬದ ಉಡುಗೊರೆಗಳನ್ನು ಜಗತ್ತಿನ ಯಾವುದೇ ಪ್ರಜಾಪ್ರಭುತ್ವದಲ್ಲಿ ಯಾರೂ ನೀಡಲು ಸಾಧ್ಯವಿಲ್ಲ. ನನ್ನ ಹುಟ್ಟುಹಬ್ಬದಂದು ಆ ಇಬ್ಬರೂ ನಾಯಕರು ನನ್ನ ಸಲಹೆಗಾರ ಮತ್ತು ಇಬ್ಬರು ವಿಶೇಷ ಕರ್ತವ್ಯ ಅಧಿಕಾರಿಗಳ ಮನೆಗಳಿಗೆ ಇಡಿ ಅಧಿಕಾರಿಗಳನ್ನು ಕಳುಹಿಸಿದರು. ಈಗ ನನ್ನ ಮಗ ಚೈತನ್ಯನ ಹುಟ್ಟುಹಬ್ಬದಂದು ಜಾರಿ ನಿರ್ದೇಶನಾಲಯ ತಂಡವು ನನ್ನ ಮನೆ ಮೇಲೆ ದಾಳಿ ಮಾಡುತ್ತಿದೆ. ಈ ಉಡುಗೊರೆಗಳಿಗೆ ಧನ್ಯವಾದಗಳು. ನಾನು ಅವರನ್ನು ಜೀವಮಾನವಿಡೀ ನೆನಪಿಸಿಕೊಳ್ಳುತ್ತೇನೆ” ಎಂದು ಭೂಪೇಶ್ ಬಘೇಲ್ ಟೀಕಿಸಿದ್ದಾರೆ.

ಇದನ್ನೂ ಓದಿ: ಮದ್ಯ ಹಗರಣ: ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ

ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಇಂದು ಛತ್ತೀಸ್‌ಗಢ ವಿಧಾನಸಭಾ ಕಲಾಪವನ್ನು ಬಹಿಷ್ಕರಿಸಿತು. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿ ಕಿರುಕುಳ ನೀಡಲು ಕೇಂದ್ರ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಈ ಬಂಧನವನ್ನು ರಾಜಕೀಯ ದ್ವೇಷದ ಸ್ಪಷ್ಟ ಪ್ರಕರಣ ಎಂದು ಟೀಕಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ