AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದರೂ ಲೈಂಗಿಕ ಸಂಬಂಧ ಬೆಳೆಸಿದ್ದು ಅಪರಾಧ; ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ

ತನ್ನನ್ನು ಮದುವೆಯಾಗುತ್ತೇನೆ ಎಂದು ಆಮಿಷವೊಡ್ಡಿ ತನ್ನ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಎಂದು ಆರೋಪಿಸಿದ್ದ ಮಹಿಳೆ ತನ್ನ ಪ್ರಿಯಕರನಿಗೆ ನೀಡಲಾಗಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು. ಆಕೆಯನ್ನೂ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್ ವಿವಾಹಿತ ಮಹಿಳೆಯಾದ ನೀವು ಬೇರೊಬ್ಬರ ಜೊತೆ ಲೈಂಗಿಕ ಸಂಬಂಧ ಹೊಂದುವ ಮೂಲಕ ಅಪರಾಧ ಮಾಡಿದ್ದೀರಿ ಎಂದು ಛೀಮಾರಿ ಹಾಕಿದೆ. ನೀವು ಕೂಡ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ದೂರದಾರಳಾದ ಮಹಿಳೆಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮದುವೆಯಾದರೂ ಲೈಂಗಿಕ ಸಂಬಂಧ ಬೆಳೆಸಿದ್ದು ಅಪರಾಧ; ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ
Court
ಸುಷ್ಮಾ ಚಕ್ರೆ
|

Updated on: Jul 17, 2025 | 4:46 PM

Share

ನವದೆಹಲಿ, ಜುಲೈ 17: ಇತ್ತೀಚೆಗೆ ವಿವಾಹೇತರ ಸಂಬಂಧದ ಕಾರಣಕ್ಕೆ ಮಹಿಳೆಯರು ತಮ್ಮ ಗಂಡನನ್ನು ಕೊಲೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವು ಸಮಾಜದ ಸ್ಥಿತಿಯ ಬಗ್ಗೆ ಆತಂಕ ಮೂಡಿಸಿವೆ. ಇದರ ಬೆನ್ನಲ್ಲೇ ವಿವಾಹಿತ ಮಹಿಳೆಯೊಬ್ಬರು ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ನನ್ನದೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದರು. ಆತನಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕೆಂದು ಆ ಮಹಿಳೆ ಸುಪ್ರೀಂ ಕೋರ್ಟ್​ನಲ್ಲಿ (Supreme Court) ಅರ್ಜಿ ಸಲ್ಲಿಸಿದ್ದರು. ಆದರೆ, ಈ ವಿಚಾರಣೆ ವೇಳೆ ಆ ಮಹಿಳೆಯನ್ನು ಕೂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆಯಾಗಿದ್ದರೂ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವ ಮೂಲಕ ನೀವು ಕೂಡ ತಪ್ಪು ಮಾಡಿದ್ದೀರಿ. ಇದಕ್ಕಾಗಿ ನಿಮ್ಮ ವಿರುದ್ಧವೂ ನ್ಯಾಯಾಲಯವು ಕಾನೂನು ಕ್ರಮ ಜರುಗಿಸಬಹುದು ಎಂದು ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ.

ನನ್ನನ್ನು ಮದುವೆಯಾಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ವ್ಯಕ್ತಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ ಮಹಿಳೆ ತನ್ನ ಪ್ರಿಯಕರನಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿದ್ದರು. ಈ ವೇಳೆ ಆಕೆಯನ್ನು ಕೂಡ ಪ್ರಶ್ನಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್​. ಕೋಟೀಶ್ವರ್ ಸಿಂಗ್ ಅವರ ನ್ಯಾಯಪೀಠ, “ನೀವು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆ. ನೀವು ಪ್ರಬುದ್ಧವಾಗಿ ಯೋಚನೆ ಮಾಡುವ ಸಾಮರ್ಥ್ಯವಿರುವ ಮಹಿಳೆ. ನೀವು ಮದುವೆಯಾದರೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀರಿ. ಮದುವೆಯಾಗಿ ಗಂಡನ ಜೊತೆಗಿರುವಾಗ ಬೇರೊಬ್ಬನ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ನೀವು ಕೂಡ ಅಪರಾಧ ಮಾಡಿದ್ದೀರಿ. ಇದಕ್ಕಾಗಿ ನೀವು ಕೂಡ ವಿಚಾರಣೆಗೆ ಗುರಿಯಾಗಬಹುದು” ಎಂದು ಮಹಿಳೆಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಆಯುಧದ ಮೇಲಿನ ರಕ್ತದ ಜೊತೆ ಕೊಲೆಯಾದ ವ್ಯಕ್ತಿಯ ರಕ್ತ ಹೊಂದಿಕೆಯಾದರೆ ಶಿಕ್ಷೆ ನೀಡಲಾಗದು; ಸುಪ್ರೀಂ ಕೋರ್ಟ್ ತೀರ್ಪು

ನನ್ನನ್ನು ಆ ವ್ಯಕ್ತಿ ಲೈಂಗಿಕ ಕ್ರಿಯೆ ನಡೆಸಲು ವಿವಿಧ ಹೋಟೆಲ್‌ಗಳಿಗೆ ಕರೆಸಿದ್ದ. ಅವನು ನನಗೆ ಮದುವೆಯ ಭರವಸೆ ನೀಡಿದ್ದರಿಂದ ನಾನು ಹೋಗಿದ್ದೆ ಎಂದು ಆ ಮಹಿಳೆ ಸುಪ್ರೀಂ ಕೋರ್ಟ್​ನಲ್ಲಿ ಹೇಳಿದ್ದಾರೆ. ಆಗ ನ್ಯಾಯಮೂರ್ತಿಗಳು “ಅವನು ಕರೆದ ಮಾತ್ರಕ್ಕೆ ನೀವು ಅವನ ಜೊತೆ ಪದೇ ಪದೇ ಹೋಟೆಲ್‌ಗಳಿಗೆ ಏಕೆ ಹೋಗಿದ್ದೀರಿ?” ಎಂದು ಮಹಿಳೆಯನ್ನು ಪ್ರಶ್ನೆ ಮಾಡಿದ್ದಾರೆ. “ವಿವಾಹದ ಹೊರಗೆ ಲೈಂಗಿಕ ಸಂಬಂಧ ಹೊಂದಿರುವ ಮೂಲಕ ನೀವು ಸಹ ಅಪರಾಧ ಮಾಡಿದ್ದೀರಿ ಎಂಬುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

ಆ ಮಹಿಳೆಯ ಪ್ರಿಯಕರ ಅಂಕಿತ್ ಬರ್ನ್ವಾಲ್‌ಗೆ ನಿರೀಕ್ಷಣಾ ಜಾಮೀನು ನೀಡಿದ್ದನ್ನು ಪ್ರಶ್ನಿಸಿದ ಮಹಿಳೆಯ ಮನವಿಯನ್ನು ವಜಾಗೊಳಿಸಿದ್ದು ಸರಿಯಾಗಿದೆ ಎಂದು ಪಾಟ್ನಾ ಹೈಕೋರ್ಟ್ ಹೇಳಿತ್ತು. ಸುಪ್ರೀಂ ಕೋರ್ಟ್ ಕೂಡ ಆ ತೀರ್ಪನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ: ಗಂಡ-ಹೆಂಡತಿ ರಹಸ್ಯವಾಗಿ ಕಾಲ್ ರೆಕಾರ್ಡ್ ಮಾಡುವುದು ತಪ್ಪಾ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಏನಿದು ಪ್ರಕರಣ?:

2016ರಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಪರಿಚಯವಾಗಿದ್ದ ಮಹಿಳೆ ಅಂಕಿತ್ ಜೊತೆ ಅಕ್ರಮ ಸಂಬಂಧದಲ್ಲಿದ್ದರು. ಅಂಕಿತ್ ಅವರ ಒತ್ತಡದ ಮೇರೆಗೆ ಆ ಮಹಿಳೆ ತಮ್ಮ ಪತಿಯಿಂದ ವಿಚ್ಛೇದನವನ್ನು ಕೋರಿದ್ದರು. ಮಾರ್ಚ್ 6ರಂದು ಕುಟುಂಬ ನ್ಯಾಯಾಲಯವು ಅವರಿಬ್ಬರಿಗೂ ವಿಚ್ಛೇದನವನ್ನು ಮಂಜೂರು ಮಾಡಿತು. ವಿಚ್ಛೇದನದ ನಂತರ ಆ ಮಹಿಳೆ ಅಂಕಿತ್ ಅವರನ್ನು ಮದುವೆಯಾಗಲು ಕೇಳಿಕೊಂಡಿದ್ದರು. ಆದರೆ, ಆತ ನಿರಾಕರಿಸಿದ್ದ ಎಂದು ಆರೋಪಿಸಲಾಗಿದೆ.

ಪೊಲೀಸರಿಗೆ ಆಕೆ ನೀಡಿದ ದೂರಿನಲ್ಲಿ ಮದುವೆಯ ಸುಳ್ಳು ಭರವಸೆ ನೀಡಿ ಅಂಕಿತ್ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ