2 ವರ್ಷ ಕೆಲಸ ಕೊಟ್ಟು ಜೀವನ ಪೂರ್ತಿ ಪಿಂಚಣಿ ಕೊಡುವ ಒಂದೇ ರಾಜ್ಯ ನಿಮ್ಮದು: ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 14, 2022 | 2:37 PM

ಒಂದೆರೆಡು ವರ್ಷವಷ್ಟೇ ಕೆಲಸ ಮಾಡಿಸಿ, ಜೀವನಪೂರ್ತಿ ಪಿಂಚಣಿ ಕೊಡುವ ಕ್ರಮ ಸರಿಯಲ್ಲ ಎಂದು ಹೇಳಿತು. 

2 ವರ್ಷ ಕೆಲಸ ಕೊಟ್ಟು ಜೀವನ ಪೂರ್ತಿ ಪಿಂಚಣಿ ಕೊಡುವ ಒಂದೇ ರಾಜ್ಯ ನಿಮ್ಮದು: ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ
ಸುಪ್ರೀಂಕೋರ್ಟ್​
Follow us on

ದೆಹಲಿ: ಸೀಮಿತ ಅವಧಿಗೆ ಸಚಿವರು ತಮಗೆ ಬೇಕಾದವರನ್ನು ಸಹಾಯಕರನ್ನಾಗಿ ನೇಮಿಸಿಕೊಂಡು ಅವರಿಗೆ ಜೀವನಪೂರ್ತಿ ಪಿಂಚಣಿ ಕೊಡುವ ವ್ಯವಸ್ಥೆ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಕೇರಳ ರಾಜ್ಯ ಸರ್ಕಾರವನ್ನು ಮೌಖಿಕವಾಗಿ ಟೀಕಿಸಿತು. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ವೇಳೆ ಪ್ರಾಸಂಗಿಕವಾಗಿ ಈ ವಿಷಯ ಪ್ರಸ್ತಾಪಿಸಿದ ಸುಪ್ರೀಂಕೋರ್ಟ್, ಒಂದೆರೆಡು ವರ್ಷವಷ್ಟೇ ಕೆಲಸ ಮಾಡಿಸಿ, ಜೀವನಪೂರ್ತಿ ಪಿಂಚಣಿ ಕೊಡುವ ಕ್ರಮ ಸರಿಯಲ್ಲ ಎಂದು ಹೇಳಿತು. 

ಈ ಕುರಿತು ಇಂಡಿಯನ್ ಎಕ್ಸ್​​ಪ್ರೆಸ್​ನಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ನ್ಯಾಯಮೂರ್ತಿ ಅಬ್ದುಲ್ ನಾಜಿರ್ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ಪ್ರಸ್ತಾಪಿಸಿತು. ‘ಇಂಥ ಇನ್ನೊಂದು ಸರ್ಕಾರ ಭಾರತದಲ್ಲಿ ಇಲ್ಲ. ನಿಮ್ಮ ಸರ್ಕಾರಕ್ಕೆ ನಾವು ಏನು ಹೇಳಿದೆವು ಎನ್ನುವುದನ್ನು ತಿಳಿಸಿ. 2 ವರ್ಷದ ಅವಧಿಗೆ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡು ಜೀವನಪೂರ್ತಿ ಪಿಂಚಣಿ ಕೊಡಬಹುದು ಎಂದಾದರೆ ತೈಲೋತ್ಪನ್ನ ಕಂಪನಿಗಳಿಗೂ ಹಣ ಪಾವತಿಸಬಹುದು’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಕೇರಳದಲ್ಲಿ ಚಾಲ್ತಿಯಲ್ಲಿರುವ ಈ ಕ್ರಮವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್​ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇನ್ನೂ ಬಾಕಿಯಿದೆ.

ಏಪ್ರಿಲ್ 1984ರ ನಂತರ ಸಚಿವರ ಎಲ್ಲ ಸಿಬ್ಬಂದಿಗೂ ಪಿಂಚಣಿ ಸೌಕರ್ಯ ಒದಗಿಸಲು ಕೇರಳ ಸರ್ಕಾರ ತೀರ್ಮಾನಿಸಿತು. ಈ ಬಗ್ಗೆ ಅಲ್ಲಿನ ಸಚಿವ ಸಂಪುಟದಲ್ಲಿ ತೀರ್ಮಾನವನ್ನೂ ತೆಗೆದುಕೊಳ್ಳಲಾಗಿತ್ತು. ಪ್ರತಿ ಸಚಿವರೂ 25 ಸಿಬ್ಬಂದಿ ನೇಮಿಸಿಕೊಳ್ಳಲು ಕೇರಳ ಸರ್ಕಾರ ಅವಕಾಶ ಕೊಟ್ಟಿದೆ. ಮುಖ್ಯ ಸಚೇತಕ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಗೆ 35 ಸಿಬ್ಬಂದಿ ನೇಮಿಸಿಕೊಳ್ಳಲು ಅವಕಾಶ ಕೊಡಲಾಗಿದೆ. ಎರಡೂವರೆ ವರ್ಷ ಸಚಿವರ ಸಹಾಯಕರಾಗಿದ್ದ ಸಿಬ್ಬಂದಿಗೆ ಕನಿಷ್ಠ ₹ 3550ರಿಂದ ಗರಿಷ್ಠ ₹ 83,400 ವರೆಗೆ ಜೀವಮಾನವಿಡಿ ಪಿಂಚಣಿ ಸಿಗಲಿದೆ. ಶೇ 7ರ ತುಟ್ಟಿಭತ್ಯೆ ಮತ್ತು ಸರ್ಕಾರಿ ನೌಕರರಿಗೆ ಸಿಗುವ ಇತರ ಸವಲತ್ತುಗಳು ಸಿಗಲಿವೆ.

ಕೇರಳ ಸರ್ಕಾರದ ಈ ಆದೇಶ ಪ್ರಶ್ನಿಸಿ ಅಲ್ಲಿನ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದೆ. ಇಂಡಿಯನ್​ ಎಕ್ಸ್​ಪ್ರೆಸ್ ದಿನಪತ್ರಿಕೆ ಈ ಸಂಬಂಧ ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್​ ಇಂದು ಅಲ್ಲಿನ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ಮೌಖಿಕವಾಗಿ ತಿಳಿಸಿತು.

ಏನಿದು ಪ್ರಕರಣ?
ಇಂಧನ ಮಾರಾಟ ಕಂಪನಿಗಳು ಸಗಟು ಖರೀದಿದಾರರಿಗೆ ಅಧಿಕ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಕೇರಳ ರಾಜ್ಯ ಸಾರಿಗೆ ನಿಗಮ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ತಪ್ಪಿಸಲು ರಾಷ್ಟ್ರಮಟ್ಟದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ಅಧ್ಯಕ್ಷತೆಯಲ್ಲಿ ಸ್ವತಂತ್ರ ನಿಯಂತ್ರಣ ಸಂಸ್ಥೆಯೊಂದನ್ನು ರೂಪಿಸಬೇಕು ಎಂದು ಮನವಿ ಮಾಡಿತ್ತು.

ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠವು ಕೇರಳ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯಲಿ ಎಂದು ಅಭಿಪ್ರಾಯಪಟ್ಟಿತು. ‘ನೀವು ಅಲ್ಲಿಯೇ ಅರ್ಜಿ ಸಲ್ಲಿಸಿ’ ಎಂದು ಸೂಚಿಸಿತು.

ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಎಜಿ ಪೇರರಿವಾಲನ್‌ಗೆ ಸುಪ್ರೀಂಕೋರ್ಟ್ ಜಾಮೀನು

ಇದನ್ನೂ ಓದಿ: ಕಾಂಗ್ರೆಸ್ ಪಾದಯಾತ್ರೆಗೂ ಮೊದಲು ಯೋಚಿಸ ಬೇಕಿತ್ತು ಇದು ನಾಯಕತ್ವಕ್ಕಾಗಿ ಪೈಪೋಟಿನಾ ಅಥವಾ ಸುಪ್ರೀಂಕೋರ್ಟ್ ವಿರುದ್ಧ ​ಹೋರಾಟವಾ; ಗೋವಿಂದ ಕಾರಜೋಳ