AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್​ನಿಂದ ತಡೆ; ನಾಲ್ವರು ತಜ್ಞರನ್ನೊಳಗೊಂಡ ಸಮಿತಿ ರಚನೆ

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನಿಜವಾಗಿಯೂ ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬ ಆಸೆಯಿದ್ದರೆ, ಅವರು ಈ ತಜ್ಞ ಸಮಿತಿಯ ಎದುರು ಬರಬೇಕು. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಎಂದೂ ತಿಳಿಸಿದ್ದಾರೆ.

3 ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್​ನಿಂದ ತಡೆ; ನಾಲ್ವರು ತಜ್ಞರನ್ನೊಳಗೊಂಡ ಸಮಿತಿ ರಚನೆ
ಸುಪ್ರೀಂ ಕೋರ್ಟ್​
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jan 12, 2021 | 2:39 PM

Share

ದೆಹಲಿ: ಮೂರು ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕವಾಗಿ ತಡೆ ನೀಡಿ ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಹಾಗೇ, ಕೇಂದ್ರ ಸರ್ಕಾರ ಮತ್ತು ರೈತ ಒಕ್ಕೂಟಗಳ ನಡುವಿನ ಮಾತುಕತೆಗಾಗಿ, ರೈತರ ಸಮಸ್ಯೆಗಳನ್ನು ಕೇಳುವ ಸಲುವಾಗಿ ನಾಲ್ವರು ತಜ್ಞರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದೆ.

ಸೆಪ್ಟೆಂಬರ್​ನಲ್ಲಿ ಜಾರಿಯಾದ ಕೃಷಿ ಕಾಯ್ದೆಗಳನ್ನು ಪಂಜಾಬ್​, ಹರ್ಯಾಣ, ಉತ್ತರಾಖಂಡ ಮತ್ತಿತರ ಭಾಗದ ರೈತರು ತೀವ್ರವಾಗಿ ವಿರೋಧಿಸುತ್ತಿದ್ದು, ಕಳೆದ 48ದಿನಗಳಿಂದಲೂ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಸದ್ಯ ಕೇಂದ್ರ ಮತ್ತು ರೈತರ ನಡುವಿನ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ, ನ್ಯಾಯಮೂರ್ತಿ ಎಸ್​.ಎ.ಬೋಪಣ್ಣ ಮತ್ತು ವಿ.ರಾಮಸುಬ್ರಹ್ಮಣ್ಯಂ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು. ಇಷ್ಟು ದಿನಗಳಾದರೂ ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆ ಫಲಕೊಟ್ಟಿಲ್ಲ. ಎರಡೂ ಕಡೆಯಿಂದಲೂ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಹೆಚ್ಚಿನ ಪ್ರಯತ್ನ ಕಾಣುತ್ತಿಲ್ಲ. ಇದರಿಂದ ನಮಗೆ ತುಂಬ ನಿರಾಶೆಯುಂಟಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಬೊಬ್ಡೆ ಹೇಳಿದ್ದರು.

ಇಂದು, ಮುಂದಿನ ಆದೇಶದವರೆಗೆ ಕಾಯ್ದೆಗಳನ್ನು ಅನುಷ್ಠಾನ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ತಜ್ಞರ ಸಮಿತಿ ರಚನೆ ಮಾಡಿದೆ. ಅಷ್ಟೇ ಅಲ್ಲ, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನಿಜವಾಗಿಯೂ ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬ ಆಸೆಯಿದ್ದರೆ, ಅವರು ಈ ತಜ್ಞ ಸಮಿತಿಯ ಎದುರು ಬರಬೇಕು. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಎಂದೂ ತಿಳಿಸಿದ್ದಾರೆ. ಇದೀಗ ಕಾಯ್ದೆ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ಉಂಟಾಗುವ ಮೂಲಕ ರೈತರ 48 ದಿನಗಳ ಹೋರಾಟಕ್ಕೆ ಜಯ ಸಿಕ್ಕಂತೆ ಆಗಿದೆ.

ಯಾರೆಲ್ಲ ಇದ್ದಾರೆ ತಜ್ಞರ ಸಮಿತಿಯಲ್ಲಿ? ಇನ್ನು ರೈತರ ಸಮಸ್ಯೆಗಳನ್ನು ಆಲಿಸಿ, ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಫಲಪ್ರದ ಮಾತುಕತೆಗಾಗಿ ಸುಪ್ರೀಂಕೋರ್ಟ್​ ರಚಿಸಿರುವ ಸಮಿತಿಯಲ್ಲಿ ಭಾರತೀಯ ಕಿಸಾನ್​ ಯೂನಿಯನ್​ನ ಭೂಪೇಂದರ್ ಸಿಂಗ್​ ಮನ್​, ಶೇತ್ಕರಿ ಸಂಘಟನೆಯ ಅನಿಲ್ ಘಾನ್​ವಾಟ್​, ಡಾ. ಪ್ರಮೋದ್​ ಕುಮಾರ್​ ಜೋಶಿ ಮತ್ತು ಕೃಷಿ ಆರ್ಥಿಕ ತಜ್ಞ ಅಶೋಕ್ ಗುಲಾಟಿ ಇದ್ದಾರೆ.

ದೇಶಕ್ಕೆ ಮುಜುಗರ ಉಂಟುಮಾಡುವ ಟ್ರ್ಯಾಕ್ಟರ್ ಮೆರವಣಿಗೆಗೆ ಅವಕಾಶ ನೀಡಬೇಡಿ: ಸುಪ್ರೀಂಗೆ ದೆಹಲಿ ಪೊಲೀಸರ ಮನವಿ