ವಿವಾದದ ಬಳಿಕ ಅರಾವಳಿ ಬೆಟ್ಟದ ಕುರಿತ ತನ್ನದೇ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಅರಾವಳಿ ಬೆಟ್ಟಗಳ ಕುರಿತಾದ ತನ್ನದೇ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅರಾವಳಿ ಬೆಟ್ಟಗಳ ಕುರಿತು ತನ್ನ ನವೆಂಬರ್ ತಿಂಗಳ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ತಜ್ಞರ ಸಮಿತಿಯು ಈ ಹಿಂದೆ ಸಲ್ಲಿಸಿದ ವರದಿಯನ್ನು ವಿಶ್ಲೇಷಿಸಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದೆ.

ನವದೆಹಲಿ, ಡಿಸೆಂಬರ್ 29: ಅರಾವಳಿ ಬೆಟ್ಟಗಳ ಏಕರೂಪದ ವ್ಯಾಖ್ಯಾನದ ಕುರಿತು ನವೆಂಬರ್ 20ರಂದು ನೀಡಿದ ತನ್ನದೇ ತೀರ್ಪು ಮತ್ತು ತಜ್ಞರ ಸಮಿತಿಯ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತಡೆಹಿಡಿದಿದೆ. ತನ್ನದೇ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಅರಾವಳಿ ಬೆಟ್ಟಗಳು (Aravalli Hills) ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪು ಪ್ರಕಟವಾಗುತ್ತಿದ್ದಂತೆ ಅನಿಯಂತ್ರಿತ ಗಣಿಗಾರಿಕೆ ಮತ್ತು ಪರಿಸರ ಹಾನಿಯ ಬಗ್ಗೆ ಕಳವಳಗಳು ಹೆಚ್ಚಾಗಿತ್ತು. ಈ ತೀರ್ಪಿನ ವಿರುದ್ಧ ತೀವ್ರ ಪ್ರತಿಭಟನೆಗಳು ಕೂಡ ನಡೆದಿತ್ತು.
ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಮತ್ತು ಎ.ಜಿ ಮಸಿಹ್ ಅವರನ್ನು ಒಳಗೊಂಡ ನ್ಯಾಯಪೀಠವು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು 4 ಅರಾವಳಿ ಬೆಟ್ಟಗಳ ರಾಜ್ಯಗಳಾದ ರಾಜಸ್ಥಾನ, ಗುಜರಾತ್, ದೆಹಲಿ ಮತ್ತು ಹರಿಯಾಣಕ್ಕೆ ನೋಟಿಸ್ ನೀಡಿದೆ. ಜನವರಿ 21ರಂದು ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ಅರಾವಳಿ ಪರ್ವತ ಶ್ರೇಣಿಗೆ ಸಂಬಂಧಿಸಿದ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಿದ ಮತ್ತು ಈ ಕುರಿತಾದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಹೊಸ ಸಮಿತಿಯನ್ನು ರಚಿಸಿದ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ನಾನು ಸ್ವಾಗತಿಸುತ್ತೇನೆ. ಅರಾವಳಿ ಶ್ರೇಣಿಯ ರಕ್ಷಣೆ ಮತ್ತು ಮರುಸ್ಥಾಪನೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಕೋರಲಾದ… https://t.co/HfmofsZDRO
— PIB in Karnataka (@PIBBengaluru) December 29, 2025
ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಈ 10 ಹುಲಿ ಮೀಸಲು ತಾಣಗಳಿವು, ಸಫಾರಿ, ಐಷಾರಾಮಿ ರೆಸಾರ್ಟ್‌ಗಳ ಮಾಹಿತಿ ಇಲ್ಲಿದೆ.
ಇಂದು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ತನ್ನ ನವೆಂಬರ್ ತಿಂಗಳ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಈಗ ಉಳಿದಿರುವ 100 ಮೀಟರ್ ಎತ್ತರದ ಮಾನದಂಡವನ್ನು ಕಟ್ಟುನಿಟ್ಟಾಗಿ ಆಧರಿಸಿ ಅರಾವಳಿ ಪ್ರದೇಶಗಳನ್ನು ಗುರುತಿಸಲು ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಿದ ಮ್ಯಾಪಿಂಗ್ ಮತ್ತು ಡಿಲಿಮಿನೇಷನ್ ಪ್ರಕ್ರಿಯೆಯನ್ನು ಮಧ್ಯಂತರ ತಡೆಯಾಜ್ಞೆಯು ತಡೆಹಿಡಿಯುವ ಸಾಧ್ಯತೆಯಿದೆ. ಇದು ಈ ಪ್ರದೇಶದಲ್ಲಿ ಭವಿಷ್ಯದ ಗಣಿಗಾರಿಕೆ ನಿರ್ಧಾರಗಳಿಗೆ ಅಡಿಪಾಯವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.
ಇದನ್ನೂ ಓದಿ: ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡಿತ್ತು. ತಜ್ಞರ ವರದಿಗಳು ಹೊರಬರುವವರೆಗೆ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ನಿಷೇಧಿಸಿತ್ತು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿಯು ಅರಾವಳಿ ಬೆಟ್ಟದ ವ್ಯಾಖ್ಯಾನದ ಕುರಿತು ನೀಡಿದ ಶಿಫಾರಸುಗಳನ್ನು ನ್ಯಾಯಾಲಯವು ಅಂಗೀಕರಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Mon, 29 December 25




