ನೂತನ ಕೃಷಿ ಕಾನೂನು ಪ್ರಶ್ನಿಸಿರುವ ಅರ್ಜಿ ಜ.11ಕ್ಕೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
ಎಸ್.ಎ ಬೊಬಡೆ ಅವರ ನೇತೃತ್ವದ ನ್ಯಾಯಪೀಠವು ರೈತರ ಪ್ರತಿಭಟನೆಯಿಂದ ಯಾವುದೇ ರೀತಿಯ ಸುಧಾರಣೆ ಆಗಿಲ್ಲ. ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಆರೋಗ್ಯಕರ ಚರ್ಚೆಗಳು ನಡೆದುಬರುತ್ತಿವೆ ಎಂದು ಹೇಳಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ಪ್ರಶ್ನಿಸಿರುವ ಅರ್ಜಿ ಮತ್ತು ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಗಳನ್ನು ಜನವರಿ 11ಕ್ಕೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರ ನೇತೃತ್ವದ ನ್ಯಾಯಪೀಠವು ರೈತರ ಪ್ರತಿಭಟನೆಯಿಂದ ಯಾವುದೇ ರೀತಿಯ ಸುಧಾರಣೆ ಆಗಿಲ್ಲ. ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಆರೋಗ್ಯಕರ ಚರ್ಚೆಗಳು ನಡೆದುಬರುತ್ತಿವೆ ಎಂದು ಹೇಳಿದ್ದಾರೆ.
ನೂತನ ಕೃಷಿ ಕಾನೂನಿಗೆ ಸಂಬಂಧಿಸಿದಂತೆ ರೈತರು ಮತ್ತು ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು ಎಂದು ಅಟರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರ ಮತ್ತು ರೈತರ ನಡುವೆ ಆರೋಗ್ಯಕರ ವಾತಾವರಣದಲ್ಲಿ ಮಾತುಕತೆ ನಡೆಯುತ್ತಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜನವರಿ 8ರಂದು ನಡೆಯುವ ವಿಚಾರಣೆಯಲ್ಲಿ ಇದನ್ನು ಸೇರಿಸಬೇಕಿಲ್ಲ ಎಂದಿದ್ದಾರೆ.
ಕೃಷಿ ಕಾನೂನನ್ನು ಪ್ರಶ್ನಿಸಿ ನ್ಯಾಯವಾದಿ ಎಂ.ಎಲ್. ಶರ್ಮಾ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಕೃಷಿ ಕಾನೂನು ರೂಪಿಸುವಾಗ ಕೇಂದ್ರ ಸರ್ಕಾರ ಸಂವಿಧಾನವನ್ನು ಅನುಸರಿಸಿಲ್ಲ ಎಂದು ಆರೋಪಿಸಿ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದು ಇದಕ್ಕೆ ಪ್ರತಿಕ್ರಿಯಿಸುವಂತೆ ನ್ಯಾಯಪೀಠ ಕೇಂದ್ರಕ್ಕೆ ನೋಟಿಸ್ ನೀಡಿತ್ತು.
ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಲಯವು ಇದೆಲ್ಲ ಕೃಷಿಗೆ ಸಂಬಂಧಿಸಿದ್ದು, ಇತರ ಸಮಸ್ಯೆಗಳೇನು? ಅವುಗಳನ್ನು ಪಟ್ಟಿ ಮಾಡುವುದು ಯಾವಾಗ? ನಾವು ಎಲ್ಲ ವಿಷಯದ ವಿಚಾರಣೆ ಒಟ್ಟಿಗೆ ನಡೆಸಲಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಈ ಹಿಂದೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು
ಡಿಸೆಂಬರ್ 17 ರಂದು ರೈತರ ಪ್ರತಿಭಟನೆಯ ವಿಷಯದ ಕುರಿತು ಮನವಿಗಳನ್ನು ಆಲಿಸಿದ ನ್ಯಾಯಾಲಯ, ಚಳವಳಿಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಅವಕಾಶ ನೀಡಬೇಕು ಮತ್ತು ಪ್ರತಿಭಟಿಸುವ ಮೂಲಭೂತ ಹಕ್ಕಿನಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿತ್ತು.
Delhi Chalo ವಿಶ್ಲೇಷಣೆ | ಇದು ಈ ಕಾಲದ ಚಳವಳಿ; ಬೀದಿಗೂ ಸೈ, ಸೋಷಿಯಲ್ ಮೀಡಿಯಾಗೂ ಜೈ ಎಂದ ಪಂಜಾಬ್ ಯುವಜನರು