T20 World Cup: ಟೀಮ್​ ಇಂಡಿಯಾಗೆ ಶುಭ ಕೋರಿದ ರಾಹುಲ್​ ಗಾಂಧಿ

|

Updated on: Jun 30, 2024 | 8:29 AM

ಭಾರತ ಕ್ರಿಕೆಟ್​ ತಂಡವು 17 ವರ್ಷದ ಬಳಿಕ ಮತ್ತೊಮ್ಮೆ ಟಿ20 ವಿಶ್ವಕಪ್​ಗೆ ಮುತ್ತಿಕ್ಕಿದೆ. ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 7 ರನ್​ಗಳಿಂದ ಮಣಿಸಿತು. ವಿಶ್ವಕಪ್​ ಗೆಲುವಿಗೆ ಜನಪ್ರತಿನಿಧಿಗಳು, ಸಿನಿಮಾ ತಾರೆಯರು ಸೇರಿದಂತೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ ಅವರು ಟ್ವೀಟ್​ ಮಾಡುವ ಮೂಲಕ ಟೀಮ್​ ಇಂಡಿಯಾಗೆ ಶುಭಾಶಯ ಹೇಳಿದ್ದಾರೆ.

T20 World Cup: ಟೀಮ್​ ಇಂಡಿಯಾಗೆ ಶುಭ ಕೋರಿದ ರಾಹುಲ್​ ಗಾಂಧಿ
ಟೀಮ್​ ಇಂಡಿಯಾ, ರಾಹುಲ್​ ಗಾಂಧಿ
Follow us on

ಭಾರತ ಕ್ರಿಕೆಟ್​ ತಂಡವು 17 ವರ್ಷದ ಬಳಿಕ ಮತ್ತೊಮ್ಮೆ ಟಿ20 ವಿಶ್ವಕಪ್ (T20 World Cup) ಗೆದ್ದಿದೆ. ಬಾರ್ಬಡೋಸ್​ನಲ್ಲಿ ನಡೆದ ಟಿ20 ವಿಶ್ವಕಪ್​​​ನ ಫೈನಲ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ ತಂಡವನ್ನು 7 ರನ್​ಗಳಿಂದ ಸೋಲಿಸುವ ಮೂಲಕ ಟೀಮ್​ ಇಂಡಿಯಾ (Team India) ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಟೀಮ್​ ಇಂಡಿಯಾ ಗೆಲವಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಸಾರ್ವಜನಿಕರು, ಜನಪ್ರತಿನಿಧಿಗಳು, ಸಿನಿಮಾ ತಾರೆಯರು ಸೇರಿದಂತೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ (Rahul Gandi) ಅವರು ಟ್ವೀಟ್​ ಮಾಡುವ ಮೂಲಕ ಟೀಮ್​ ಇಂಡಿಯಾಗೆ ಶುಭಾಶಯ ಹೇಳಿದ್ದಾರೆ.

“ವಿಶ್ವಕಪ್​ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ ಮತ್ತು ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು! ಸೂರ್ಯಕುಮಾರ್​ ಯಾದವ್​ ಎಂತಹ ಅದ್ಭುತ ಕ್ಯಾಚ್ ಹಿಡಿದಿರಿ! ಈ ಗೆಲುವು ರೋಹಿತ್ ಶರ್ಮಾ ಅವರ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಟೀಮ್ ಇಂಡಿಯಾ ರಾಹುಲ್ ದ್ರಾವಿಡ್​​​ ಅವರ ಮಾರ್ಗದರ್ಶನವನ್ನು ಕಳೆದುಕೊಳ್ಳಲಿದೆ. ಟೀಮ್​ ಇಂಡಿಯಾ ನಮ್ಮ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದೆ.” ಎಂದು ಸಂಸದ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತದ ಪರ ವಿರಾಟ್ ಕೊಹ್ಲಿ (76) ಆಕರ್ಷಕದ ಅರ್ಧಶತಕ ಬಾರಿಸಿದರೆ, ಅಕ್ಷರ್ ಪಟೇಲ್ 47 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 176 ರನ್ ಕಲೆಹಾಕಿತು.

ಇದನ್ನೂ ಓದಿ: ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು: ವಿಶ್ವಕಪ್ ಗೆದ್ದ ಬೆನ್ನಲ್ಲೇ ಧೋನಿಯ ಅಚ್ಚರಿಯ ಪೋಸ್ಟ್

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ದಿಟ್ಟ ಹೋರಾಟವನ್ನೇ ನಡೆಸಿದ್ದರು. ಅದರಲ್ಲೂ 15 ಓವರ್​ ತನಕ ಪಂದ್ಯವು ಸೌತ್ ಆಫ್ರಿಕಾ ಪರವಿತ್ತು. ಆದರೆ ಅಂತಿಮ ಹಂತದಲ್ಲಿ ಜಸ್​ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಪರಿಣಾಮ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್​ ಕಲೆಹಾಕಿತು. ಈ ಮೂಲಕ ಭಾರತ ತಂಡವು 7 ರನ್​ಗಳ ರೋಚಕ ಜಯ ಸಾಧಿಸಿದೆ.ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದರು.

Published On - 8:22 am, Sun, 30 June 24