ಸಂಬಳ ಪಡೆಯುವ ವರ್ಗಕ್ಕೆ ಇದೊಂದು ಅಶುಭ ಸುದ್ದಿ. ಬರುವ ಏಪ್ರಿಲ್ನಿಂದ ಅನ್ವಯ ಆಗುವ ಹೊಸದಾಗ ವೇಜ್ ಕೋಡ್(ವೇತನ ಸಂಹಿತೆ) ಮತ್ತು ನಿನ್ನೆಯ ಬಜೆಟ್ನಲ್ಲಿ ಹೇಳಲಾದ ಕೆಲವು ಹೊಸ ನಿಯಮಗಳಿಂದಾಗಿ ಇನ್ನು ಮುಂದೆ ಟೇಕ್ ಹೋಂ ಸ್ಯಾಲರಿ (ಕೈಯಿಗೆ ಸಿಗುವ ಸಂಬಳ)ಗೆ ಕಡಿತ ಬೀಳಲಿದೆ. ಅಷ್ಟೇ ಅಲ್ಲ, ನಿವೃತ್ತಿ ನಂತರ ನಿಮ್ಮ ಕೈ ಸೇರುವ ನಿಮ್ಮದೇ ಉಳಿತಾಯಕ್ಕೂ ಸ್ವಲ್ಪ ಮಟ್ಟಿಗೆ ಕತ್ತರಿ ಬೀಳಲಿದೆ.
ಮಧ್ಯಮವರ್ಗದವರ ಪಾಲಿಗೆ ನಿವೃತ್ತಿ ನಂತರದ ಬಹುಮುಖ್ಯ ಸೇವಿಂಗ್ಸ್ ಎಂದರೆ ಭವಿಷ್ಯ ನಿಧಿ (ಪಿಎಫ್). ಸಂಬಳ ಪಡೆಯುವಾಗ ಪ್ರತಿ ತಿಂಗಳೂ ಇಂತಿಷ್ಟು ಎಂದು ಪಿಎಫ್ಗಾಗಿ ಕಟ್ ಆಗುವುದು ಸಾಮಾನ್ಯ. ಆದರೆ ನಿನ್ನೆಯ ಬಜೆಟ್ನಲ್ಲಿ PF ಗೆ ಸಂಬಂಧಪಟ್ಟ ಒಂದು ಬಹುಮುಖ್ಯ ಬದಲಾವಣೆಯನ್ನು ಮಾಡಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿ ಯಾರು ಭವಿಷ್ಯ ನಿಧಿಗೆ 2.50 ಲಕ್ಷ ರೂ.ಮತ್ತು ಅದಕ್ಕಿಂತಲೂ ಜಾಸ್ತಿ ಹಣ ಪಾವತಿಸುತ್ತಾರೋ.. ಅವರು ತೆರಿಗೆ ಕಟ್ಟಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ತಿಳಿಸಿದ್ದಾರೆ. ಅದರಂತೆ ಇದು ಸಂಬಳ ಪಡೆಯುವ ವರ್ಗಕ್ಕೆ ಶಾಕ್ ನೀಡಿದೆ.
ಇನ್ನು 2019ರಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ವೇಜ್ ಕೋಡ್ ನಿಯಮದಂತೆ ಉದ್ಯೋಗಿಯ ಸಂಬಳದಲ್ಲಿ ಭವಿಷ್ಯ ನಿಧಿಗೆ ಸೇರುವ ಪಾಲು ಹೆಚ್ಚಲಿದೆ. ಹೀಗಾಗಿ ಸಹಜವಾಗಿ ಕೈಗೆ ಕಡಿಮೆ ಹಣ ಸೇರಲಿದೆ. ಈ ಹೊಸ ನಿಯಮ ಏಪ್ರಿಲ್ 1ರಿಂದಲೇ ಜಾರಿಯಾಗಲಿದೆ.
ಇನ್ನೂ ಸರಳವಾಗಿ ಹೇಳಬೇಕು ಎಂದರೆ ಉದ್ಯೋಗಿಯೊಬ್ಬನ ತಿಂಗಳ ವೇತನ 1 ಲಕ್ಷ ರೂ. ಆದರೆ ಆತ ತಿಂಗಳಿಗೆ 20,000ರೂ.ಪಿಎಫ್ಗೆ ಪಾವತಿಸಬೇಕಾಗುತ್ತಿತ್ತು ಎಂದಿಟ್ಟುಕೊಳ್ಳೋಣ. ಆದರೆ ಬರುವ ಎಪ್ರಿಲ್ 1ರಿಂದ ಹೊಸ ವೇಜ್ ಕೋಡ್ ನಿಯಮದ ಅನ್ವಯ ಆತ ತಿಂಗಳಿಗೆ ಪಿಎಫ್ಗೆ 25,000 ರೂ. ಪಾವತಿ ಮಾಡಬೇಕಾಗುತ್ತದೆ. ಆಗ ಸಹಜವಾಗಿಯೇ ಅವನ ಟೇಕ್ ಹೋಂ ಸ್ಯಾಲರಿ 5000 ರೂ.ದಷ್ಟು ಕಡಿಮೆಯಾಗುತ್ತದೆ. ಹೀಗೆ ಪಿಎಫ್ಗೆ ತಿಂಗಳಿಗೆ ಪಾವತಿಸುವ ಹಣ ಜಾಸ್ತಿಯಾದಂತೆ, ವಾರ್ಷಿಕ ಪಾವತಿಯೂ ಹೆಚ್ಚುತ್ತದೆ. ಈಗ ಇದೇ ವ್ಯಕ್ತಿ ವರ್ಷಕ್ಕೆ ಭವಿಷ್ಯ ನಿಧಿಗೆ 3 ಲಕ್ಷ ರೂ.ಪಾವತಿ ಮಾಡಬೇಕಾಗುತ್ತದೆ. ಬಜೆಟ್ನಲ್ಲಿ ಉಲ್ಲೇಖವಾದಂತೆ 2.50 ಲಕ್ಷಕ್ಕೂ ಹೆಚ್ಚು ಪಿಎಫ್ ಪಾವತಿ ಮಾಡುವ ಕಾರಣ ತೆರಿಗೆ ಕಟ್ಟಲೇಬೇಕು.
ಮುಂದಿನ ವರ್ಷದಿಂದ Take Home Salaryಗೆ ಬೀಳಲಿದೆ ಕತ್ತರಿ! ಹೊಸ ನಿಯಮ ಜಾರಿಗೆ ಕೇಂದ್ರದ ಚಿಂತನೆ
Published On - 6:52 pm, Tue, 2 February 21