ನನ್ನ ಪರ್ಸ್ನಿಂದ ಹಾಲಿನ ದುಡ್ಡು ಕೊಡಿ; ನೋಟ್ ಬರೆದಿಟ್ಟು ಶಿಕ್ಷಕಿ ಸಾವು
30 ವರ್ಷದ ಪ್ರಿಯಾ ಭಾರತಿ ಸೋಮವಾರ ಸೆಹಾನ್ ಗ್ರಾಮದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅನಾರೋಗ್ಯದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮತ್ತು ತನ್ನ ಸಾವಿಗೆ ಯಾರೂ ಹೊಣೆಗಾರರಲ್ಲ ಎಂದು ಬರೆದಿರುವ ಸೂಸೈಡ್ ನೋಟ್ ಕೂಡ ಪತ್ತೆಯಾಗಿದೆ. ಆ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ನವದೆಹಲಿ, ಜನವರಿ 27: ಬಿಹಾರದ ಹಾಜಿಪುರದಲ್ಲಿ ಬಿಪಿಎಸ್‌ಸಿ ಶಿಕ್ಷಕಿಯೊಬ್ಬರ ಮೃತದೇಹ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆ ಪ್ರದೇಶದಲ್ಲಿ ವ್ಯಾಪಕ ಭೀತಿ ಮೂಡಿಸಿದೆ. ಆ ಶಿಕ್ಷಕಿಯ ರೂಂನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಖಾಜೆಚಂದ್ ಛಪ್ರಾ ಮಿಡಲ್ ಸ್ಕೂಲ್‌ನ ಶಿಕ್ಷಕಿ ಪ್ರಿಯಾ ಭಾರತಿ ಎಂದು ಗುರುತಿಸಲಾಗಿದೆ. ಆಟೋ ಚಾಲಕ ಆ ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ ಆ ಶಿಕ್ಷಕಿ ತನ್ನ ರೂಂನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಅವನು ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.
ಪ್ರಿಯಾ ಭಾರತಿ ಸೆಹಾನ್ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರತಿದಿನ ಆಟೋದಲ್ಲಿ ಶಾಲೆಗೆ ಹೋಗುತ್ತಿದ್ದರು. ಸೋಮವಾರ ಬೆಳಿಗ್ಗೆ ಆಟೋ ಚಾಲಕ ಎಂದಿನಂತೆ ಅವರನ್ನು ಶಾಲೆಗೆ ಕರೆದೊಯ್ಯಲು ಬಂದನು. ಆದರೆ ಬಹಳ ಸಮಯ ಕಾದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಅವನು ಮನೆಯ ಬಳಿ ಹೋಗಿ ಕಿಟಕಿಯಿಂದ ಒಳಗೆ ನೋಡಿದ್ದಾನೆ. ಆಗ ಪ್ರಿಯಾ ನೇಣು ಬಿಗಿದುಕೊಂಡಿರುವುದನ್ನು ನೋಡಿ ಗಾಬರಿಯಾಗಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದನು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಇದನ್ನೂ ಓದಿ: ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ ಬಯಲು! ರೇಪ್ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡ ಆರೋಪಿ
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ರೂಂನಲ್ಲಿ ಒಂದು ಸೂಸೈಡ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ “ಅಮ್ಮ ಮತ್ತು ಅಪ್ಪ, ಕ್ಷಮಿಸಿ. ನನಗೆ ಯಾರೊಂದಿಗೂ ಯಾವುದೇ ಜಗಳವಿಲ್ಲ. ನಾನು ನನ್ನ ಸ್ವಂತ ಇಚ್ಛೆಯಿಂದ ಈ ಲೋಕವನ್ನು ತೊರೆಯುತ್ತಿದ್ದೇನೆ. ನನ್ನ ಶವವನ್ನು ರಸೂಲ್‌ಪುರಕ್ಕೆ ಕೊಂಡೊಯ್ಯಬಾರದು. ನನ್ನ ಅಂತ್ಯಕ್ರಿಯೆಗಳನ್ನು ಹಾಜಿಪುರದಲ್ಲಿ ನಡೆಸಬೇಕು. ಯಾವುದೇ ಕಾರಣಕ್ಕೂ ನನ್ನ ಗಂಡ ನನ್ನ ಅಂತ್ಯಕ್ರಿಯೆ ಮಾಡಬಾರದು. ನನ್ನ 3 ತಿಂಗಳ ಹೆಣ್ಣು ಮಗುವೇ ಅಂತ್ಯಕ್ರಿಯೆ ಮಾಡಬೇಕು. ನನ್ನ ಮೊಬೈಲ್ ಫೋನ್ ನನ್ನ ಗಂಡನಿಗೆ ಹಸ್ತಾಂತರಿಸಬೇಕು. ನನ್ನ ಮೊಬೈಲ್ನಲ್ಲಿ ಸಂದೇಶಗಳು, ಆಡಿಯೋ ಮತ್ತು ವಿಡಿಯೋ ಸಂದೇಶಗಳಿವೆ. ಅದರ ಪಾಸ್‌ವರ್ಡ್‌ಗಳು ನನ್ನ ಗಂಡನಿಗೆ ತಿಳಿದಿವೆ. ನಾನು ನೋಯಿಸಿದ ಪ್ರತಿಯೊಬ್ಬರಲ್ಲೂ ನಾನು ಕ್ಷಮೆ ಯಾಚಿಸುತ್ತೇನೆ. ಮರಣೋತ್ತರ ಪರೀಕ್ಷೆ ನಡೆಸದಂತೆ ನಾನು ಪೊಲೀಸ್ ಆಡಳಿತವನ್ನು ವಿನಂತಿಸುತ್ತೇನೆ. ನನ್ನ ಪತಿ ಅಥವಾ ಕುಟುಂಬದ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು. ಅಮ್ಮ, ಅಪ್ಪ ನಿಮ್ಮ ಮಗಳು ಸೋತಿದ್ದಾಳೆ. ಕ್ಷಮಿಸಿ ಅಮ್ಮ.” ಎಂದು ಬರೆಯಲಾಗಿದೆ.
ಇದನ್ನೂ ಓದಿ: ಇಬ್ಬರೂ ಸಾಯೋಣ ಎಂದು ಯುವತಿಯನ್ನು ನಂಬಿಸಿ ಕೊಂದ ಹಂತಕ!
ನನ್ನ ಸಾವಿಗೆ ಯಾರೂ ಕಾರಣರಲ್ಲ. 5.5 ಲೀಟರ್ ಹಾಲಿಗೆ ನಾನು ಹಣ ನೀಡಬೇಕಾಗಿದೆ. ಆ ಹಣ ನನ್ನ ಪರ್ಸ್ನಲ್ಲಿದೆ. ಅದನ್ನು ಅವರಿಗೆ ಕೊಟ್ಟುಬಿಡಿ ಎಂದು ಆ ಮಹಿಳೆ ಸೂಸೈಡ್ ನೋಟ್ನಲ್ಲಿ ಬರೆದಿದ್ದಾರೆ.
ಪ್ರಿಯಾ ಭಾರತಿ ಎರಡು ವರ್ಷಗಳ ಹಿಂದೆ ಜಂದಹಾ ಪೊಲೀಸ್ ಠಾಣೆ ಪ್ರದೇಶದ ರಸೂಲ್‌ಪುರ ಗ್ರಾಮದ ನಿವಾಸಿ ದೀಪಕ್ ರಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪೊಲೀಸರು ಪತಿಯನ್ನು ವಿಚಾರಣೆ ನಡೆಸುತ್ತಿದ್ದು, ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
