ಅಫ್ಘಾನಿಸ್ತಾನಕ್ಕಾಗಿ ಹೋರಾಡುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯಲ್ಲ; ಭಾರತದ ಕವಿಯ ವಿವಾದಾತ್ಮಕ ಹೇಳಿಕೆ

| Updated By: ಸುಷ್ಮಾ ಚಕ್ರೆ

Updated on: Aug 20, 2021 | 2:02 PM

Munawwar Rana on Taliban: ಅಫ್ಘಾನಿಸ್ತಾನ ಮತ್ತು ತಾಲಿಬಾನ್ ಬಿಕ್ಕಟ್ಟನ್ನು ಭಾರತದ ದೃಷ್ಟಿಕೋನದಿಂದ ನೋಡುವುದೇ ತಪ್ಪು. ಅಲ್ಲಿನ ನಿಜವಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಬ್ರಿಟಿಷರ ವಶದಲ್ಲಿದ್ದ ಭಾರತದ ಪರಿಸ್ಥಿತಿ ಆಗ ಹೇಗಿತ್ತು ಎಂಬ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಮುನ್ನಾವರ್ ರಾಣಾ ಹೇಳಿದ್ದಾರೆ.

ಅಫ್ಘಾನಿಸ್ತಾನಕ್ಕಾಗಿ ಹೋರಾಡುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯಲ್ಲ; ಭಾರತದ ಕವಿಯ ವಿವಾದಾತ್ಮಕ ಹೇಳಿಕೆ
ಮುನ್ನಾವರ್ ರಾಣಾ
Follow us on

ನವದೆಹಲಿ: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ರಕ್ತಪಾತ ನಡೆಸುತ್ತಿರುವ ತಾಲಿಬಾನ್ ಉಗ್ರರು ಇಡೀ ದೇಶವನ್ನೇ ನರಕವಾಗಿಸಿದ್ದಾರೆ. ಅಲ್ಲಿನ ಮಹಿಳೆಯರು, ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಅಫ್ಘಾನ್​ನಿಂದ ಪಾರಾಗಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಅವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಬಂದೂಕು ಹಿಡಿದು, ಜನರ ಹತ್ಯೆ ಮಾಡಿ, ಅಫ್ಘಾನ್​ ಸೇನಾ ಅಧಿಕಾರಿಗಳನ್ನು ಕೊಂದು ಹಿಂಸಾತ್ಮಕವಾಗಿ ವರ್ತಿಸುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯೇ ಅಲ್ಲ, ಅವರು ಹೋರಾಡುತ್ತಿರುವುದು ತಮ್ಮ ದೇಶಕ್ಕಾಗಿಯೇ ಹೊರತು ವೈಯಕ್ತಿಕ ಕಾರಣಕ್ಕಲ್ಲ ಎಂದು ಹೇಳುವ ಮೂಲಕ ಭಾರತದ ಖ್ಯಾತ ಉರ್ದು ಕವಿ ಮುನ್ನಾವರ್ ರಾಣಾ ವಿವಾದಕ್ಕೀಡಾಗಿದ್ದಾರೆ.

ತಾಲಿಬಾನ್ ಪರವಾಗಿ ಹೇಳಿಕೆ ನೀಡುವ ಮೂಲಕ ಈಗಾಗಲೇ ನಾನಾ ದೇಶಗಳ ಹಲವರು ವಿವಾದಕ್ಕೆ ಈಡಾಗಿದ್ದಾರೆ. ಇದೀಗ ಭಾರತದಲ್ಲೂ ಉರ್ದು ಕವಿ ಮುನ್ನಾವರ್ ರಾಣಾ ತಾಲಿಬಾನ್ ಅನ್ನು ಉಗ್ರ ಸಂಘಟೆಯೆಂದು ಹೇಳುವುದು ತಪ್ಪು. ಅಫ್ಘಾನ್ ದೇಶಕ್ಕಾಗಿ ಹೋರಾಟ ಮಾಡುತ್ತಿರುವ ಅವರನ್ನು ಉಗ್ರರೆಂದು ಗುರುತಿಸುವುದು ಸರಿಯಲ್ಲ ಎಂದಿದ್ದಾರೆ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಕರ್ ರೆಹಮಾನ್ ಬಾರ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಕ್ತಾರ ಮೌಲಾನಾ ಸಜ್ಜದ್ ನೊಮನಿ ಹಾಗೂ ಪೀಸ್ ಪಾರ್ಟಿಯ ಶಬದ್ ಚೌಹಾಣ್ ಕೂಡ ತಾಲಿಬಾನ್ ಸಂಘಟನೆಯ ಪರವಾಗಿ ಹೇಳಿಕೆ ನೀಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರ ಬೆನ್ನಲ್ಲೇ ಉರ್ದು ಸಾಹಿತ್ಯಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕವಿ ಮುನ್ನಾವರ್ ರಾಣಾ ಕೂಡ ತಾಲಿಬಾನ್ ಉಗ್ರ ಸಂಘಟನೆಯಲ್ಲ ಎನ್ನುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

‘ತಾಲಿಬಾನ್ ಸರಿಯಾದ ಕೆಲಸವನ್ನೇ ಮಾಡುತ್ತಿದೆ. ನಿಮ್ಮ ದೇಶವನ್ನು ಕಾಪಾಡಿಕೊಳ್ಳಲು ನೀವು ಯಾವ ಮಾರ್ಗವನ್ನು ಹಿಡಿದರೂ ಅದನ್ನು ತಪ್ಪೆಂದು ಹೇಳಲಾಗದು. ತಾಲಿಬಾನ್ ತಮ್ಮ ರಾಷ್ಟ್ರವಾದ ಅಫ್ಘಾನಿಸ್ತಾನವನ್ನು ಸ್ವತಂತ್ರಗೊಳಿಸಿದರೆ ಅದರಲ್ಲಿ ತಪ್ಪೇನಿದೆ? ಅಫ್ಘಾನಿಸ್ತಾನ ಮತ್ತು ತಾಲಿಬಾನ್ ನಡುವೆ ನಡೆಯುತ್ತಿರುವ ಬಿಕ್ಕಟ್ಟನ್ನು ಭಾರತದ ದೃಷ್ಟಿಕೋನದಿಂದ ನೋಡುವುದೇ ತಪ್ಪು. ಆಗ ನಮಗೆ ತಾಲಿಬಾನ್ ಮಾಡುತ್ತಿರುವುದು ತಪ್ಪೆಂದು ಕಾಣುತ್ತದೆ. ನೀವು ಅಲ್ಲಿನ ನಿಜವಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಬ್ರಿಟಿಷರ ವಶದಲ್ಲಿದ್ದ ಭಾರತದ ಪರಿಸ್ಥಿತಿ ಆಗ ಹೇಗಿತ್ತು ಎಂಬ ನಿಟ್ಟಿನಲ್ಲಿ ಯೋಚಿಸಬೇಕು. ಬ್ರಿಟಿಷರಿಂದ ಭಾರತವನ್ನು ರಕ್ಷಿಸಿಕೊಳ್ಳಲು ನಾವು ಏನು ಮಾಡಿದೆವೋ ಅದೇ ರೀತಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಮಾಡುತ್ತಿದೆ’ ಎಂದು ಸಂದರ್ಶನದಲ್ಲಿ ಮುನ್ನಾವರ್ ರಾಣಾ ಹೇಳಿದ್ದಾರೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ತಾಲಿಬಾನ್ ಅನ್ನು ಉಗ್ರ ಸಂಘಟನೆ ಎಂದು ಕರೆಯುವುದು ತಪ್ಪು. ಅದನ್ನು ಪ್ರಚೋದಿತ ಗುಂಪು ಎಂದು ಕರೆಯಬಹುದು. ತಮ್ಮ ದೇಶವಾದ ಅಫ್ಘಾನಿಸ್ತಾನಕ್ಕಾಗಿ ಹೋರಾಟ ಮಾಡುತ್ತಿರುವ ತಾಲಿಬಾನಿಗರು ಹೇಗೆ ಉಗ್ರರಾಗುತ್ತಾರೆ? ಉಗ್ರರು ಎಂಬುದಕ್ಕೆ ಯಾವುದೇ ನಿಖರವಾದ ವಿವರಣೆಯಿಲ್ಲ. ಹೀಗಿದ್ದ ಮೇಲೆ ನಾವು ಇವರು ಉಗ್ರರು, ಇವರು ಉಗ್ರರಲ್ಲ ಎಂದು ಹೇಗೆ ಗುರುತಿಸಲು ಸಾಧ್ಯ? ಎಂದು ಮುನ್ನಾವರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ 4 ಕಮಾಂಡರ್​ಗಳನ್ನು ಜನರೆದುರೇ ನೇಣಿಗೇರಿಸಿದ ತಾಲಿಬಾನ್; ಇದೇನಾ ಶಾಂತಿ ಸ್ಥಾಪನೆ?

ತಾಲಿಬಾನ್ ಆಡಳಿತದಲ್ಲಿ ಮಕ್ಕಳು ನಲುಗುವುದು ಬೇಡ: ಬ್ರಿಟಿಷ್ ಸೈನಿಕರತ್ತ ಮಕ್ಕಳನ್ನು ಎಸೆದ ಮಹಿಳೆಯರು

(Taliban is Not Terrorist Organisation Fighting for Afghanistan Country Indian Poet Munawwar Rana Controversy)

Published On - 1:46 pm, Fri, 20 August 21