ಅವಧಿಗೂ ಮೊದಲೇ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರ ಶಿಫಾರಸು

| Updated By: ಸುಷ್ಮಾ ಚಕ್ರೆ

Updated on: Oct 14, 2022 | 11:26 AM

ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿದೆ.

ಅವಧಿಗೂ ಮೊದಲೇ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರ ಶಿಫಾರಸು
ಸುಪ್ರೀಂ ಕೋರ್ಟ್​ನಲ್ಲಿ ರಾಜೀವ್ ಗಾಂಧಿ ಹಂತಕಿ ನಳಿನಿ
Follow us on

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಾದ ನಳಿನಿ ಶ್ರೀಹರನ್ (Nalini Sriharan) ಮತ್ತು ಆರ್‌ಪಿ ರವಿಚಂದ್ರನ್ (RP Ravichandran) ಅವರನ್ನು ಅವಧಿಗೂ ಮೊದಲೇ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದೆ. ನಾವು ಈಗಾಗಲೇ 30 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದೇವೆ. ರಾಜೀವ್ ಗಾಂಧಿಯ ಕೊಲೆಯ 7 ಅಪರಾಧಿಗಳ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ತಮಿಳುನಾಡು ಸರ್ಕಾರ 4 ವರ್ಷಗಳ ಹಿಂದೆಯೇ ಒಪ್ಪಿಕೊಂಡಿತ್ತು ಎಂದು ಅಪರಾಧಿಗಳಾದ ಎಸ್​ ನಳಿನಿ ಮತ್ತು ಆರ್​ಪಿ ರವಿಚಂದ್ರನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿದೆ. ತಮ್ಮ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದಂತೆ ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

2018ರ ಸೆಪ್ಟೆಂಬರ್ 9ರಂದು ನಡೆದ ಸಂಪುಟ ಸಭೆಯಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ಪರಿಗಣಿಸಲಾಗಿತ್ತು. ಸಂವಿಧಾನದ ಆರ್ಟಿಕಲ್ 161ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಅನ್ವಯಿಸಿ ಅವರ ಜೀವಾವಧಿ ಶಿಕ್ಷೆಯನ್ನು ಹಿಂತೆಗೆದುಕೊಳ್ಳಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Rajiv Gandhi Birth Anniversary 2022: ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ನಿಮಗೆಷ್ಟು ಗೊತ್ತು?

“ಜೀವಾವಧಿ ಶಿಕ್ಷೆಗೆ ಒಳಗಾದ 7 ಅರ್ಜಿದಾರರಿಗೆ ಸಂಬಂಧಿಸಿದಂತೆ ಹೇಳಲಾದ ಶಿಫಾರಸನ್ನು ಸೆಪ್ಟೆಂಬರ್ 11ರಂದು ಪ್ರತ್ಯೇಕವಾಗಿ ತಮಿಳುನಾಡು ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಲಾಗಿದೆ ಮತ್ತು ಅದು ಅವರ ಕಚೇರಿಯಲ್ಲಿ ಬಾಕಿ ಉಳಿದಿದೆ” ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಸಂವಿಧಾನದ 161ನೇ ಪರಿಚ್ಛೇದದಡಿಯಲ್ಲಿ ನಳಿನಿ ಮತ್ತು ರವಿಚಂದ್ರನ್‌ ಸಲ್ಲಿಸಿರುವ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳಲು ರಾಜ್ಯ ಸರಕಾರ ಸಕ್ಷಮ ಪ್ರಾಧಿಕಾರವಾಗಿದ್ದು, 2018ರ ಸೆಪ್ಟೆಂಬರ್‌ 9ರ ರಾಜ್ಯ ಸಚಿವ ಸಂಪುಟದ ತೀರ್ಮಾನವೇ ಅಂತಿಮವಾಗಿದ್ದು, ಸಂಪುಟದ ನೆರವು ಮತ್ತು ಸಲಹೆಯಂತೆ ತಮಿಳುನಾಡು ರಾಜ್ಯಪಾಲರು ಅದನ್ನು ಚಲಾಯಿಸಬಹುದಾಗಿದೆ.

ಅರ್ಜಿದಾರರ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸುವ ರಾಜ್ಯ ಸರ್ಕಾರದ ಶಿಫಾರಸನ್ನು ಸೆಪ್ಟೆಂಬರ್ 11, 2018ರಂದು ಅನುಮೋದನೆಗಾಗಿ ತಮಿಳುನಾಡು ರಾಜ್ಯಪಾಲರಿಗೆ ಕಳುಹಿಸಲಾಯಿತು. ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಅವರ ಕಚೇರಿಯಲ್ಲಿ ಅದನ್ನು ಬಾಕಿ ಇರಿಸಲಾಗಿತ್ತು. ಅಂತಿಮವಾಗಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಶಿಫಾರಸು ಮಾಡಲಾಯಿತು. ಜನವರಿ 27, 2021ರಂದು ರಾಜ್ಯಪಾಲರು ಆ ಶಿಫಾರಸನ್ನು ರಾಷ್ಟ್ರಪತಿಗಳಿಗೆ ರವಾನಿಸಿದ್ದಾರೆ. ಅದರೆ, ಕಳೆದ 21 ತಿಂಗಳಿನಿಂದ ಈ ಬಗ್ಗೆ ಇನ್ನೂ ನಿರ್ಧಾರ ಹೊರಬಿದ್ದಿಲ್ಲ.

ಇದನ್ನೂ ಓದಿ: ಪೇರರಿವಾಲನ್​​ನಂತೆ ಬಿಡುಗಡೆ ಮಾಡಿ; ರಾಜೀವ್ ಗಾಂಧಿ ಹಂತಕ ರವಿಚಂದ್ರನ್​​ನಿಂದ ಸುಪ್ರೀಂಗೆ ಮೊರೆ 

ಇದೀಗ 30 ವರ್ಷಗಳಿಂದ ಜೈಲಿನಲ್ಲಿರುವ ರವಿಚಂದ್ರನ್ ಅವರು ಔಪಚಾರಿಕ ಬಿಡುಗಡೆಗಾಗಿ ತಮ್ಮ ಪ್ರಕರಣವು ಮುಕ್ತಾಯಗೊಳ್ಳುವವರೆಗೆ ಮಧ್ಯಂತರ ಜಾಮೀನು ಕೋರಿದ್ದಾರೆ. ಸೆಪ್ಟೆಂಬರ್ 2018 ರಲ್ಲಿ ತಮಿಳುನಾಡು ಸರ್ಕಾರವು ಮಾಡಿದ ಶಿಫಾರಸಿನ ಆಧಾರದ ಮೇಲೆ ಜೈಲಿನಿಂದ ಅವಧಿಪೂರ್ವ ಬಿಡುಗಡೆಗಾಗಿ ಪೆರಾರಿವಾಲನ್ ಅವರ ಮನವಿಯನ್ನು ನಿರ್ಧರಿಸಿ, ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ಆದರೆ ಇತರ 6 ಅಪರಾಧಿಗಳು ಜೈಲಿನಲ್ಲಿದ್ದಾರೆ.

1991ರ ಮೇ 21ರ ರಾತ್ರಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಧನು ಎಂಬ ಮಹಿಳಾ ಆತ್ಮಾಹುತಿ ಬಾಂಬರ್‌ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Fri, 14 October 22