ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥನ ಹತ್ಯೆ: 8 ಶಂಕಿತರ ಬಂಧನ; ಪಕ್ಷದ ಕಾರ್ಯಕರ್ತರಿಂದ ಚೆನ್ನೈ ರಸ್ತೆ ತಡೆ
ಆರ್ಮ್‌ಸ್ಟ್ರಾಂಗ್ ಹತ್ಯೆಯನ್ನು ವಿರೋಧಿಸಿ ಬಿಎಸ್‌ಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿರುವ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಹೊರಗೆ ಬಿಎಸ್‌ಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ರಸ್ತೆ ತಡೆ ನಡೆಸಿದ್ದರಿಂದ ಚೆನ್ನೈನ ಪೂನಮಲ್ಲಿ ಹೈ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಚೆನ್ನೈ ಜುಲೈ 06: ಬಹುಜನ ಸಮಾಜ ಪಕ್ಷದ (BSP) ರಾಜ್ಯಾಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ( Armstrong) ಅವರ ಹತ್ಯೆಗೆ ಸಂಬಂಧಿಸಿದಂತೆ ಕನಿಷ್ಠ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಶನಿವಾರ ವರದಿ ಮಾಡಿದೆ. ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಆರು ಮಂದಿಯ ಗ್ಯಾಂಗ್ ಶುಕ್ರವಾರ ಚೆನ್ನೈನಲ್ಲಿ (Chennai) ಅವರ ಮನೆಯ ಸಮೀಪವೇ ಹತ್ಯೆ ಮಾಡಿತ್ತು. ಚೆನ್ನೈ ಕಾರ್ಪೊರೇಷನ್‌ನ ಮಾಜಿ ಕೌನ್ಸಿಲರ್ ಆಗಿದ್ದ ಆರ್ಮ್‌ಸ್ಟ್ರಾಂಗ್ ಅವರ ಮೇಲೆ ಪೆರಂಬೂರ್‌ನಲ್ಲಿರುವ ಅವರ ಮನೆಯ ಸಮೀಪವೇ ದಾಳಿ ನಡೆಸಿ ಪರಾರಿಯಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆರ್ಮ್‌ಸ್ಟ್ರಾಂಗ್ ಮೃತಪಟ್ಟಿದ್ದಾರೆ.
ಆರೋಪಿಗಳನ್ನು ಬಂಧಿಸಲು ಪೊಲೀಸರು 10 ತಂಡಗಳನ್ನು ರಚಿಸಿದ್ದಾರೆ ಎಂದು ಹೆಚ್ಚುವರಿ ಆಯುಕ್ತ (ಉತ್ತರ) ಆಸ್ರಾ ಗಾರ್ಗ್ ಸುದ್ದಿಗಾರರಿಗೆ ತಿಳಿಸಿದರು. “ನಾವು ಇದುವರೆಗೆ ಎಂಟು ಶಂಕಿತರನ್ನು ಬಂಧಿಸಿದ್ದೇವೆ. ಇದು ಆರಂಭಿಕ ತನಿಖೆ, ಪ್ರಾಥಮಿಕ ತನಿಖೆಯಾಗಿದೆ. ಆದ್ದರಿಂದ ಸ್ವಲ್ಪ ಸಮಯದ ನಂತರ, ಹೆಚ್ಚಿನ ಸತ್ಯಗಳು ಮತ್ತು ಸಂದರ್ಭಗಳು ಬೆಳಕಿಗೆ ಬರುವುದರೊಂದಿಗೆ ಸ್ಪಷ್ಟ ಮತ್ತು ಸರಿಯಾದ ಚಿತ್ರಣ ಹೊರಹೊಮ್ಮುತ್ತದೆ” ಎಂದು ಗಾರ್ಗ್ ಹೇಳಿದ್ದಾರೆ.
ಆರ್ಮ್‌ಸ್ಟ್ರಾಂಗ್ ಹತ್ಯೆಯ ಹಿಂದೆ ಕೆಲವು “ಎರಡರಿಂದ ಮೂರು ಅನುಮಾನಾಸ್ಪದ ಉದ್ದೇಶಗಳು” ಇವೆ ಎಂದು ಪೊಲೀಸರು ಶಂಕಿಸಿದ್ದಾರೆ ಆದರೆ ಶಂಕಿತರ ವಿಚಾರಣೆಯ ನಂತರವೇ ನಿಖರವಾದ ಕಾರಣ ಬೆಳಕಿಗೆ ಬರಲಿದೆ ಎಂದು ಗಾರ್ಗ್ ಹೇಳಿದರು.
ಬಿಎಸ್‌ಪಿ ಕಾರ್ಯಕರ್ತರಿಂದ ಪ್ರತಿಭಟನೆ
ಏತನ್ಮಧ್ಯೆ, ಆರ್ಮ್‌ಸ್ಟ್ರಾಂಗ್ ಹತ್ಯೆಯನ್ನು ವಿರೋಧಿಸಿ ಬಿಎಸ್‌ಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿರುವ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಹೊರಗೆ ಬಿಎಸ್‌ಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ರಸ್ತೆ ತಡೆ ನಡೆಸಿದ್ದರಿಂದ ಚೆನ್ನೈನ ಪೂನಮಲ್ಲಿ ಹೈ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ವರದಿಯಾಗಿದೆ.
ಪ್ರತಿಭಟನಾಕಾರರು ತಮಿಳುನಾಡು ಸರ್ಕಾರದ ಮೇಲೆ ನಂಬಿಕೆ ಹೊಂದಿಲ್ಲ ಎಂದು ಹೇಳಿದ್ದು ಈ ವಿಷಯದ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಒತ್ತಾಯಿಸಿದ್ದಾರೆ. ಅದೇ ವೇಳೆ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ರಾಜೀನಾಮೆಯನ್ನೂ ಕೋರಿದ್ದಾರೆ.
ಏತನ್ಮಧ್ಯೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪಕ್ಷದ ತಮಿಳುನಾಡು ಅಧ್ಯಕ್ಷರ ಭೀಕರ ಹತ್ಯೆಯನ್ನು ಖಂಡಿಸಿದ್ದು, “ತಪ್ಪಿತಸ್ಥರನ್ನು ಶಿಕ್ಷಿಸುವಂತೆ” ರಾಜ್ಯ ಸರ್ಕಾರವನ್ನು ಕೇಳಿದ್ದಾರೆ.
“ತಮಿಳುನಾಡು ರಾಜ್ಯ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷ ಕೆ. ಆರ್ಮ್‌ಸ್ಟ್ರಾಂಗ್ ಅವರ ಚೆನ್ನೈನ ಮನೆಯ ಹೊರಗೆ ಅವರ ಭೀಕರ ಹತ್ಯೆ ಖಂಡನೀಯ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ರಾಜ್ಯದಲ್ಲಿ ಪ್ರಬಲ ದಲಿತ ಧ್ವನಿ ಎಂದು ಹೆಸರಾಗಿದ್ದರು. ರಾಜ್ಯ ಸರ್ಕಾರ ತಪ್ಪಿತಸ್ಥರನ್ನು ಶಿಕ್ಷಿಸಬೇಕು” ಎಂದು ಮಾಯಾವತಿ ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Armstrong Death: ಬಿಎಸ್‌ಪಿ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಬರ್ಬರ ಹತ್ಯೆ
ಯಾರು ಈ ಕೆ ಆರ್ಮ್‌ಸ್ಟ್ರಾಂಗ್?
ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರ್ಣಗೊಳಿಸಿದ ಕೆ ಆರ್ಮ್‌ಸ್ಟ್ರಾಂಗ್ ಚೆನ್ನೈ ನ್ಯಾಯಾಲಯಗಳಲ್ಲಿ ವಕೀಲರಗಾಗಿದ್ದರು. 2006 ರಲ್ಲಿ ಅವರು ಕಾರ್ಪೊರೇಷನ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದರು ಮತ್ತು ನಂತರದ ವರ್ಷದಲ್ಲಿ ಬಿಎಸ್‌ಪಿಯ ತಮಿಳುನಾಡು ಘಟಕದ ಅಧ್ಯಕ್ಷರಾದರು. 2011 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಕೊಳತ್ತೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು.
ತಮ್ಮ ವೃತ್ತಿಜೀವನದುದ್ದಕ್ಕೂ ಅವರು ದಲಿತರು ಮತ್ತು ಹಿಂದುಳಿದವರ ಹಕ್ಕುಗಳಿಗಾಗಿ ಸತತವಾಗಿ ಹೋರಾಟ ನಡೆಸುತ್ತಿದ್ದರು. ಚೆನ್ನೈನಲ್ಲಿ ಬಿಎಸ್‌ಪಿ ರಾಜಕೀಯ ಅಸ್ತಿತ್ವವನ್ನು ಹೊಂದಿಲ್ಲದಿದ್ದರೂ, ಆಮ್‌ಸ್ಟ್ರಾಂಗ್ ಎಂಬ ವಕೀಲರು ದಲಿತರ ಧ್ವನಿಯಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ