
ಚೆನ್ನೈ, ಮೇ 10: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಿ. ಜೋಸೇಫ್ ವಿಜಯ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಹಿಂದಿನ ಸರ್ಕಾರದ ವಿರುದ್ಧ ಸಾಲದ ಆರೋಪ ಮಾಡಿದ್ದರು. ರಾಜ್ಯವು 10 ಲಕ್ಷ ಕೋಟಿಗೂ ಹೆಚ್ಚು ಸಾಲದಲ್ಲಿದ್ದು, ಖಜಾನೆ ಸಂಪೂರ್ಣ ಬರಿದಾಗಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಾಗಿ ತಿಳಿಸಿದ್ದರು. ಆದರೆ ಈ ವಿಚಾರವೀಗ ಮಾಜಿ ಸಿಎಂ, ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿ ಕಿಡಿ ಕಾರಿರುವ ಅವರು, ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸಬೇಡಿ ಎಂದಿದ್ದಾರೆ.
மாண்புமிகு தமிழ்நாடு முதலமைச்சராகப் பொறுப்பேற்றுள்ள தமிழக வெற்றிக் கழகத் தலைவர் திரு. @ActorVijay அவர்களுக்கு எனது மனப்பூர்வமான வாழ்த்துகளைத் தெரிவித்துக் கொள்கிறேன்.
பதவியேற்றதும் தாங்கள் கையெழுத்திட்டுள்ள அறிவிப்புகளையும் வரவேற்கிறேன்.
எடுத்த எடுப்பிலேயே அரசிடம் பணம் இல்லை…
— M.K.Stalin – தமிழ்நாட்டை தலைகுனிய விடமாட்டேன் (@mkstalin) May 10, 2026
ತಮಿಳುನಾಡಿನ ನೂತನ ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ನೀವು ಸಹಿ ಹಾಕಿರುವ ಘೋಷಣೆಗಳನ್ನೂ ಸ್ವಾಗತಿಸುತ್ತೇನೆ. ಆದರೆ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಆರಂಭದಲ್ಲೇ ಹೇಳಬೇಡಿ. ಹಣ ಇದೆ. ಜನರಿಗೆ ಅದನ್ನು ತಲುಪಿಸುವ ಮನಸ್ಸು ಮತ್ತು ಆಡಳಿತ ನಡೆಸುವ ಸಾಮರ್ಥ್ಯ ಬೇಕಷ್ಟೇ. ಕೋವಿಡ್, ಪ್ರವಾಹ ಸೇರಿದಂತೆ ಅನೇಕ ಸಂಕಷ್ಟಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ನಾವು ಐದು ವರ್ಷಗಳ ಕಾಲ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನೀವು ನಿಮ್ಮ ಮೊದಲ ಭಾಷಣದಲ್ಲೇ “ಹಿಂದಿನ ಸರ್ಕಾರ ₹10 ಲಕ್ಷ ಕೋಟಿ ಸಾಲ ಬಿಟ್ಟು ಖಜಾನೆ ಖಾಲಿ ಮಾಡಿದೆ” ಎಂದು ಆರೋಪಿಸಿದ್ದೀರಿ. ಆದರೆ ತಮಿಳುನಾಡಿನ ಸಾಲದ ಮಟ್ಟ ಅನುಮತಿಸಲಾದ ಮಿತಿಯೊಳಗೇ ಇದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್
ಫೆಬ್ರವರಿ ಬಜೆಟ್‌ನಲ್ಲೇ ರಾಜ್ಯದ ಆರ್ಥಿಕ ಸ್ಥಿತಿಯನ್ನು ನಾವು ಸ್ಪಷ್ಟವಾಗಿ ವಿವರಿಸಿದ್ದೇವೆ. ಅದು ನಿಮಗೆ ತಿಳಿದಿರಲಿಲ್ಲವೇ? ಅದಾದ ಬಳಿಕವೇ ನೀವು ಜನರಿಗೆ ಹಲವು ಭರವಸೆಗಳನ್ನು ನೀಡಿದ್ದೀರಲ್ಲಾ? ಹೀಗಾಗಿ ಈಗ ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸಬೇಡಿ. ಪ್ರಾಯೋಗಿಕವಾಗಿ ಸಾಧ್ಯವಿರುವ ಭರವಸೆಗಳನ್ನಷ್ಟೇ ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ನೀವು ಈಗಷ್ಟೇ ಆಡಳಿತಕ್ಕೆ ಕಾಲಿಟ್ಟಿದ್ದೀರಿ. ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಬೇಕು ಎಂಬ ಆಡಳಿತದ ಸೂಕ್ಷ್ಮತೆಗಳನ್ನು ನಮ್ಮಂತೆಯೇ ನೀವು ಕೂಡ ಬೇಗನೆ ಅರಿತುಕೊಳ್ಳುವಿರಿ ಎಂಬ ನಂಬಿಕೆ ಇದೆ. ನಿಮ್ಮ ಮೇಲೆ ವಿಶ್ವಾಸವಿಟ್ಟು ಮತಹಾಕಿದ ಜನರಂತೆ ನಾನೂ ಅದನ್ನೇ ನಿರೀಕ್ಷಿಸುತ್ತೇನೆ.ನಿಮ್ಮ ಆಡಳಿತದಲ್ಲಿ ತಮಿಳುನಾಡಿನ ಅಭಿವೃದ್ಧಿಯ ಪಯಣ ಮುಂದುವರಿಯಲಿ ಎಂಬ ಶುಭಾಶಯಗಳು ಎಂದು ಸ್ಟಾಲಿನ್ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.