ಪೋಷಕರಿಗೆ ದೂರು ನೀಡಿದ್ದಕ್ಕೆ ಶಿಕ್ಷಕಿಯನ್ನು 27 ಬಾರಿ ಇರಿದು ಕೊಂದ 10ನೇ ತರಗತಿ ವಿದ್ಯಾರ್ಥಿಗಳು

ನಲ್ಗೊಂಡದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪೋಷಕರಿಗೆ ದೂರು ನೀಡಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಾಂಶುಪಾಲರನ್ನು 27 ಬಾರಿ ಇರಿದು ಕೊಂದಿದ್ದಾರೆ. ದುಬಾರಿ ಜೀವನಶೈಲಿ ಪ್ರಶ್ನಿಸಿದ ಕಾರಣಕ್ಕಾಗಿ ಈ ಹತ್ಯೆ ನಡೆದಿದೆ. ವಿದ್ಯಾರ್ಥಿಗಳು ಹಣಕ್ಕಾಗಿ ಯುಟ್ಯೂಬ್ ಮಾರ್ಗಗಳನ್ನು ಹುಡುಕಿದ್ದರು. ಈ ಘಟನೆ ಅಪ್ರಾಪ್ತರ ಕ್ರೈಂ ಹೆಚ್ಚುತ್ತಿರುವ ಬಗ್ಗೆ ಆತಂಕ ಮೂಡಿಸಿದೆ.

ಪೋಷಕರಿಗೆ ದೂರು ನೀಡಿದ್ದಕ್ಕೆ ಶಿಕ್ಷಕಿಯನ್ನು 27 ಬಾರಿ ಇರಿದು ಕೊಂದ 10ನೇ ತರಗತಿ ವಿದ್ಯಾರ್ಥಿಗಳು
ಶಿಕ್ಷಕಿ

Updated on: Aug 20, 2026 | 12:07 PM

ನಲ್ಗೊಂಡ,ಆಗಸ್ಟ್​ 20: ಕೇವಲ ಪೋಷಕರಿಗೆ ದೂರು ಕೊಟ್ಟಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕಿಯನ್ನು ಹತ್ಯೆ(Murder) ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿಯ ಖಾಸಗಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ರ್ಥಿಗಳು ಶಾಲೆಯ ಮುಖ್ಯೋಪಾಧ್ಯಾಯರನ್ನೇ ಹತ್ಯೆ ಮಾಡಿದ್ದಾರೆ.

ದುಬಾರಿ ಜೀವನಶೈಲಿ ಮತ್ತು ದುಂದುವೆಚ್ಚವನ್ನು ಪ್ರಶ್ನಿಸಿ ಪೋಷಕರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಕ್ಕೆ, ಅದೇ ಶಾಲೆಯ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಶಿಕ್ಷಕಿಯ ಮನೆಗೆ ನುಗ್ಗಿ ಬರೋಬ್ಬರಿ 27 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಮನೆಯಲ್ಲಿದ್ದ ನಗದು ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ ಇಬ್ಬರೂ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ದುಬಾರಿ ಶೋಕಿ ಮತ್ತು ಯೂಟ್ಯೂಬ್ ಮಾರ್ಗ: ಒಂದೇ ಹಾಸ್ಟೆಲ್ ಕೊಠಡಿಯಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಐಫೋನ್, ಬೈಕ್ ಮತ್ತು ಐಷಾರಾಮಿ ಜೀವನದ ಆಸೆಗೆ ಬಿದ್ದಿದ್ದರು. ಸುಲಭವಾಗಿ ಹಣ ಸಂಪಾದಿಸಲು ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮಾರ್ಗಗಳನ್ನು ಹುಡುಕುತ್ತಿದ್ದರು.

ಹಾಸ್ಟೆಲ್ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಹಣ ಮತ್ತು ಮೊಬೈಲ್ ಸಿಕ್ಕಿಬಿದ್ದಾಗ ರೂಪಾ ರೆಡ್ಡಿ ಅವರು ಇಬ್ಬರನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಪೋಷಕರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ್ದೇ ಕೊಲೆ ಸಂಚಿಗೆ ಕಾರಣವಾಯಿತು.

ಮತ್ತಷ್ಟು ಓದಿ: ತಂದೆ-ಮಗನ ಲಾಕಪ್ ಡೆತ್ ಪ್ರಕರಣ; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಒಂದು ವಾರ ಮುಂಚಿತವಾಗಿಯೇ ಪ್ರಾಂಶುಪಾಲೆಯ ಮನೆಯ ಸುತ್ತ ಕಣ್ಗಾವಲಿರಿಸಿದ್ದ ಬಾಲಕರು, ಚಾಕು, ಮುಖವಾಡ ಮತ್ತು ಕೈಗವಸುಗಳನ್ನು ಖರೀದಿಸಿ ಹಿಂಬಾಗಿಲಿನಿಂದ ಮನೆಗೆ ನುಗ್ಗಿದ್ದರು. ರೂಪಾ ರೆಡ್ಡಿ ಅವರ ಫೋನ್ ಸ್ವಿಚ್ ಆಫ್ ಆಗುವ ಮುನ್ನ ಅವರು ತಮ್ಮ ಚಿಕ್ಕಮ್ಮನೊಂದಿಗೆ ಮಾತನಾಡುತ್ತಿದ್ದರು.
ಆಗ ಅವರು ಆಡಿದ ಕೊನೆಯ ಮಾತು ಬಾಬು ಎಂದಾಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬಾಬು ಎಂದು ಕರೆಯುತ್ತಿದ್ದ ಕಾರಣ, ಪೊಲೀಸರು ತಮ್ಮ ತನಿಖೆಯನ್ನು ಶಾಲಾ ವಿದ್ಯಾರ್ಥಿಗಳ ಮೇಲೆಯೇ ಕೇಂದ್ರೀಕರಿಸಿದರು.

ಡೊನಿಯಾಲ ಎಕ್ಸ್-ರೋಡ್ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಬಾಲಕರನ್ನು ತಡೆದು ತಪಾಸಣೆ ನಡೆಸಿದಾಗ, ಅವರ ಬಳಿಯಿದ್ದ ನೋಟುಗಳ ಮೇಲೆ ರಕ್ತದ ಕಲೆಗಳು ಪತ್ತೆಯಾದವು. ಪೊಲೀಸರು ಆರೋಪಿಗಳಿಂದ 1.54 ಲಕ್ಷ ರೂ. ನಗದು, ರಕ್ತಸಿಕ್ತ ಚಾಕು, ಕೈಗವಸುಗಳು ಹಾಗೂ ಕದ್ದ ಹಣದಲ್ಲಿ 60 ಸಾವಿರ ರೂ. ನೀಡಿ ಖರೀದಿಸಿದ್ದ ಹೊಸ ಐಫೋನ್ (iPhone) ಅನ್ನು ವಶಪಡಿಸಿಕೊಂಡಿದ್ದಾರೆ.

ನಲ್ಗೊಂಡ ಎಸ್‌ಪಿ ಶರತ್ ಚಂದ್ರ ಪವಾರ್ ನೇತೃತ್ವದಲ್ಲಿ 5 ವಿಶೇಷ ತನಿಖಾ ತಂಡಗಳು 30 ಕಿ.ಮೀ ವ್ಯಾಪ್ತಿಯ 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ 80ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ ನಂತರ ಈ ಜಾಲ ಬಯಲಾಯಿತು.

ಹೆಚ್ಚುತ್ತಿರುವ ಅಪ್ರಾಪ್ತರ ಕ್ರೈಂ: ಹದಿಹರೆಯದ ಶಾಲಾ ಮಕ್ಕಳಲ್ಲಿ ಮೊಬೈಲ್ ಮತ್ತು ದುಬಾರಿ ವಸ್ತುಗಳಿಗಾಗಿ ಹಿಂಸಾತ್ಮಕ ದಾರಿ ತುಳಿಯುವ ಪ್ರವೃತ್ತಿ ಹೆಚ್ಚುತ್ತಿರುವುದು ಪೋಷಕರು ಹಾಗೂ ಶಿಕ್ಷಣ ತಜ್ಞರಲ್ಲಿ ತೀವ್ರ ಕಳವಳ ಮೂಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us