AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಮಲಗಿದ್ದಾಗ ಗಂಡ, ಮಗುವಿನ ಕೊಲೆ: ಪತ್ನಿ ಸೇರಿದಂತೆ ಪ್ರಿಯಕರ ಅರೆಸ್ಟ್​​

Chikkabanavara Crime News: ಪ್ರಿಯಕರನೊಂದಿಗೆ ಸೇರಿ ಪತ್ನಿ ಗಂಡ ಮತ್ತು 5 ವರ್ಷದ ಪುಟ್ಟ ಮಗುವನ್ನು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಚಿಕ್ಕಬಾಣಾವರದ ಗುಟ್ಟೆ ಬಸವೇಶ್ವರ ಲೇಔಟ್‌ನಲ್ಲಿ ನಡೆದಿದೆ. ಚಿಕ್ಕಬಾಣಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ರಾತ್ರಿ ಮಲಗಿದ್ದಾಗ ಗಂಡ, ಮಗುವಿನ ಕೊಲೆ: ಪತ್ನಿ ಸೇರಿದಂತೆ ಪ್ರಿಯಕರ ಅರೆಸ್ಟ್​​
ಕೊಲೆImage Credit source: tv9 kannada
ಮಂಜುನಾಥ ಕೆಬಿ
| Edited By: |

Updated on: Aug 18, 2026 | 7:52 PM

Share

ನೆಲಮಂಗಲ, ಆಗಸ್ಟ್​​ 18: ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಏಳೇಳು ಜನ್ಮಕ್ಕೂ ಜೊತೆಯಾಗಿರುತ್ತೇನೆ ಎಂದು ಪ್ರಮಾಣ ಮಾಡಿದ್ದ ಮಡದಿಯೇ ತನ್ನ ಪ್ರಿಯಕರನ ಮೋಹಕ್ಕೆ ಬಿದ್ದು ಗಂಡ ಹಾಗೂ ಹೆತ್ತ ಕರುಳಕುಡಿಯನ್ನೇ ಉಸಿರುಗಟ್ಟಿಸಿ ಕೊಂದಿರುವ (Kills) ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನ (bangaluru) ಚಿಕ್ಕಬಾಣಾವರದ ಗುಟ್ಟೆ ಬಸವೇಶ್ವರ ಲೇಔಟ್‌ನಲ್ಲಿ ನಡೆದಿದೆ. ಮಲಗಿದ್ದಲ್ಲೇ ಪತಿ ಮತ್ತು ಐದು ವರ್ಷದ ಮುಗ್ಧ ಕಂದಮ್ಮನ ಜೀವ ತೆಗೆದ ಪತ್ನಿ, ಸಾವಿಗೆ ಹೃದಯಾಘಾತದ ಕಥೆ ಕಟ್ಟಿ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ನಡೆದಿದ್ದೇನು?

ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಅಭಿನಂದನ್ (32) ಹಾಗೂ ಅವರ 5 ವರ್ಷದ ಪುತ್ರ ಯದುವೀರ್ ಕೊಲೆಯಾದ ದುರ್ದೈವಿಗಳು. ಮೂಲತಃ ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ತಾಲೂಕಿನ ಕಿಲಾರಾ ಗ್ರಾಮದ ಅಭಿನಂದನ್‌ಗೆ 6 ವರ್ಷಗಳ ಹಿಂದೆ ಹರಿಣಿ (24) ಎಂಬಾಕೆಯೊಂದಿಗೆ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಆದರೆ ದಾಂಪತ್ಯ ಆರಂಭವಾದ ಕೆಲವೇ ತಿಂಗಳುಗಳಲ್ಲಿ ಕಲಹ ಶುರುವಾಗಿತ್ತು.

ಇದನ್ನೂ ಓದಿ: ಗೇಲೆ ಮಾಡಿದ್ದಕ್ಕೆ ಕೊಲೆ: ರೀಲ್ಸ್ ನೋಡಿಕೊಂಡು ಗೆಳೆಯನಿಗೆ ಕೀಟಲೆ ಮಾಡಿದವನ ಹೆಣ ಬಿತ್ತು!

ಈ ನಡುವೆ 2024ರಲ್ಲಿ ಹರಿಣಿಗೆ ಸ್ನ್ಯಾಪ್‌ಚಾಟ್ ಮೂಲಕ ಪರಿಚಯವಾದ ವಿನಯ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಆರು ತಿಂಗಳ ಹಿಂದೆ ಪ್ರಿಯಕರನ ಜೊತೆ ಓಡಿಹೋಗಿದ್ದ ಹರಿಣಿಯನ್ನು ತಾಯಿಯೇ ಹುಡುಕಿ, ಅಳಿಯನಿಗೆ ಸುಳ್ಳು ಹೇಳಿ ಮತ್ತೆ ಮನೆಗೆ ಸೇರಿಸಿದ್ದರು. ಆದರೂ ಇವರಿಬ್ಬರ ಅಕ್ರಮ ಸಂಬಂಧ ಮುಂದುವರಿದಿತ್ತು. ಇತ್ತ ಗಂಡನ ಜೊತೆ ನಿತ್ಯ ಜಗಳ ಕೂಡ ಆಡುತ್ತಿದ್ದಳು.

ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ಗಂಡನ ಕೊಲೆ

ಕಳೆದ ಭಾನುವಾರ ರಾತ್ರಿ ಊಟ ಮುಗಿಸಿ ಅಭಿನಂದನ್ ಮಗನೊಂದಿಗೆ ಮಲಗಿದ ಬಳಿಕ, ಹರಿಣಿ ತನ್ನ  ಸಂಚನ್ನು ಜಾರಿಗೆ ತಂದಿದ್ದಾಳೆ. ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ, ಪ್ರಿಯಕರ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮಧ್ಯರಾತ್ರಿ 12 ಗಂಟೆಗೆ ಅಭಿನಂದನ್ ನಿದ್ದೆಯಲ್ಲಿದ್ದಾಗ ಆತನ ಮೇಲೆ ಎರಗಿದ ವಿನಯ್ ಉಸಿರುಗಟ್ಟಿಸಲು ಯತ್ನಿಸಿದರೆ, ಹರಿಣಿ ಗಂಡನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ವೇಳೆ ಎಚ್ಚರಗೊಂಡು ಚೀರಾಡಿದ ಗಂಡನ ತಲೆಗೆ ಹೊಡೆದು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಅಪ್ಪನ ಚೀರಾಟ ಕೇಳಿ ಎದ್ದು ಬೆಚ್ಚಿಬಿದ್ದ 5 ವರ್ಷದ ಪುಟ್ಟ ಮಗು ಯದುವೀರ್‌ನನ್ನು ಹೆತ್ತ ತಾಯಿಯೇ ಕರುಣೆಯಿಲ್ಲದೆ ಉಸಿರುಗಟ್ಟಿಸಿ ಕೊಂದಿದ್ದಾಳೆ.

ಪೊಲೀಸ್​ ತನಿಖೆಯಲ್ಲಿ ಡಬಲ್ ಕೊಲೆ ರಹಸ್ಯ ಬಯಲು

ಕೊಲೆ ಮಾಡಿದ ಬಳಿಕ ರಕ್ತದ ಕಲೆಗಳನ್ನು ತೊಳೆದು, ಬಟ್ಟೆ ಬದಲಾಯಿಸಿ, ಮರುದಿನ ಬೆಳಗ್ಗೆ ಏನೂ ಅರಿಯದವಳಂತೆ ಅಳಿಯನಿಗೆ ಹೃದಯಾಘಾತವಾಗಿ ಮಗುವಿನ ಮೇಲೆ ಬಿದ್ದು ಇಬ್ಬರೂ ಸತ್ತಿದ್ದಾರೆ ಎಂದು ಹರಿಣಿ ಮತ್ತು ಆಕೆಯ ತಾಯಿ ಕಥೆ ಕಟ್ಟಿದ್ದರು. ಆದರೆ ಮನೆಯಲ್ಲಿದ್ದ ರಕ್ತದ ಕಲೆಗಳು, ಆಫ್ ಆಗಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ ಅನುಮಾನಗೊಂಡ ಚಿಕ್ಕಬಾಣಾವರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಡಬಲ್ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಹರಿಣಿ ಹಾಗೂ ಆಕೆಯ ಪ್ರಿಯಕರ ವಿನಯ್‌ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us