ಐದು ರಾಷ್ಟ್ರಗಳ 12ನೇ ಬ್ರಿಕ್ಸ್ (BRICS) ವರ್ಚ್ಯುಯಲ್ ಶೃಂಗಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಯೋತ್ಪಾದನೆ ವಿಶ್ವ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು. ಭಯೋತ್ಪಾದನೆಯನ್ನು ಪ್ರತಿಪಾದಿಸುವ, ಭಯೋತ್ಪಾದನೆಗೆ ಸಹಾಯ ಮತ್ತು ಪ್ರೋತ್ಸಾಹ ನೀಡುವ ರಾಷ್ಟ್ರಗಳು ತಮ್ಮ ತಪ್ಪನ್ನು ಅರಿತು, ಪರಾಮರ್ಶೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಪಾಕಿಸ್ತಾನಕ್ಕೆ ಅಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಭಯೋತ್ಪಾದನೆಯ ಸಮಸ್ಯೆಯನ್ನು ಸಂಘಟಿತವಾಗಿ ಹಿಮ್ಮೆಟ್ಟಿಸುವ ಅವಶ್ಯಕತೆಯಿದೆ ಎಂದ ಪ್ರಧಾನಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂತಾದವುಗಳನ್ನು ಸುಧಾರಣೆಗೊಳಿಸಬೇಕಿರುವ ಅಗತ್ಯವಿದೆ ಎಂದರು. ಭಯೋತ್ಪಾದನೆ ವಿರುದ್ಧದ ನೀತಿಗೆ ಸ್ಪಷ್ಟ ರೂಪ ನೀಡದ ಹೊರತು ಈ ಪೀಡೆಯನ್ನು ಬೇರುಸಹಿತ ಕಿತ್ತುಹಾಕಲಾಗದು ಎಂದು ಮೋದಿ ಹೇಳಿದರು.
ಕೊರೊನಾ ಮಾಹಾಮಾರಿಯ ನಿಯಂತ್ರಣ ಕುರಿತು ಮಾತನಾಡಿದ ಮೋದಿಯವರು, ಭಾರತದಲ್ಲಿ ಲಸಿಕೆ ತಯಾರಿಕೆ ಮತ್ತು ವಿತರಣೆಯ ಕೆಲಸವು ಮಾನವೀಯ ನೆಲೆಗಟ್ಟಿನಲ್ಲಿ ನಡೆಯಲಿದೆ ಎಂದರು. ಆತ್ಮನಿರ್ಭರ ಭಾರತದ ಬಗ್ಗೆಯೂ ಮಾತನಾಡಿದ ಪ್ರಧಾನ ಮಂತ್ರಿಗಳು ಭಾರತ ಕೈಗೆತ್ತಿಕೊಂಡಿರುವ ಸುಧಾರಣೆ ಕ್ರಮಗಳ ಬಗ್ಗೆ ವಿವರಿಸಿದರು. ಆತ್ಮನಿರ್ಭರ ಭಾರತವು ವಿಶ್ವದ ಆರ್ಥಿಕತೆಯ ಪುನಶ್ಚೇತನಕ್ಕೆ ಇಂಜಿನ್ ಆಗುವ ಸಾಮರ್ಥ್ಯವಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ವಿಶ್ವದ 150 ದೇಶಗಳಿಗೆ ಭಾರತ ಔಷಧಿ ರವಾನಿಸಿದೆ ಎನ್ನುವುದನ್ನು ಪ್ರಧಾನ ಮಂತ್ರಿ ಮೋದಿ ಬ್ರಿಕ್ಸ್ ರಾಷ್ಟ್ರಗಳಿಗೆ ನೆನಪು ಮಾಡಿಕೊಟ್ಟರು.