
ನವದೆಹಲಿ, ಮೇ 11: ಭಾರತ ಮತ್ತು ಪಾಕಿಸ್ತಾನದ ಸೇನೆಗಳ ಮಧ್ಯೆ ಮೂರ್ನಾಲ್ಕು ದಿನಗಳ ನಿರಂತರ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧಕ್ಕೆ ಪರಿವರ್ತನೆಗೊಳ್ಳುವ ಮುನ್ನ ಕದನವಿರಾಮ ಘೋಷಣೆಯಾಗಿದೆ. ಭಾರತ ಮತ್ತು ಪಾಕಿಸ್ತಾನ ಹೇಗಾದ್ರೂ ಕಿತ್ತಾಡಿಕೊಳ್ಳಲಿ, ನಮಗೂ ಅವಕ್ಕೂ ಸಂಬಂಧ ಇಲ್ಲ ಎಂದು ಘಂಟಾಘೋಷವಾಗಿ ಹೇಳುತ್ತಿದ್ದ ಅಮೆರಿಕ ನಿನ್ನೆ ದಿಢೀರ್ ಮಧ್ಯಪ್ರವೇಶಿಸಿ ಯುದ್ಧ ವಿರಾಮದ ಗೆರೆ ಹಾಕಿಬಿಟ್ಟಿತು. ಅಷ್ಟಕ್ಕೂ ಅಮೆರಿಕ ಮಧ್ಯಪ್ರವೇಶಿಸಿದ್ದು ಯಾಕೆ? ವರದಿಗಳ ಪ್ರಕಾರ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ಬ್ರಹ್ಮೋಸ್ ಮಿಸೈಲ್ ದಾಳಿ ನಡೆಸಿದ್ದು ಅಮೆರಿಕದಂತಹ ಅಮೆರಿಕವನ್ನೇ ನಡುಕ ಹುಟ್ಟಿಸಿತಂತೆ. ಅದು ಹೇಗೆ?
ಭಾರತದ ಸೇನೆಯು ಈ ಸಂಘರ್ಷದ ವೇಳೆ ಪಾಕಿಸ್ತಾನದ 11 ವಾಯುಸೇನಾ ನೆಲೆಗಳ ಮೇಲೆ ದಾಳಿ ಮಾಡಿ ಹಾನಿ ಎಸಗಿತ್ತು. ಅದರಲ್ಲಿ ಆರು ವಾಯುನೆಲೆಗಳ ಮೇಲೆ ಭಾರತದ ಕ್ಷಿಪಣಿಗಳು ಬಡಿದಿದ್ದು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿತ್ತು. ಇನ್ನೂ ಮುಖ್ಯವಾಗಿ, ನೂರ್ ಖಾನ್ ವಾಯುನೆಲೆಯನ್ನು ಭಾರತ ಗುರಿ ಮಾಡಿದ್ದಂತೂ ವಿಶ್ವದ ದೊಡ್ಡಣ್ಣನನ್ನು ತಿರುಗಿನೋಡುವಂತೆ ಮಾಡಿತ್ತು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡುವ ಐಎಂಎಫ್ ವೋಟಿಂಗ್ನಲ್ಲಿ ಭಾರತ ಮತದಾನ ಮಾಡದ್ದು ಯಾಕೆ? ಇಲ್ಲಿದೆ ಕಾರಣ
ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಪಾಕಿಸ್ತಾನ ಮಿಲಿಟರಿಯ ಅತಿ ಮುಖ್ಯ ಏರ್ಬೇಸ್ ಆಗಿದೆ. ಇಸ್ಲಾಮಾಬಾದ್ನಿಂದ 10 ಕಿಮೀ ದೂರದಲ್ಲಿದೆ. ಪಾಕಿಸ್ತಾನದ ಮಿಲಿಟರಿಯ ಮುಖ್ಯ ಸಾಗಣೆ ಕೇಂದ್ರಗಳಲ್ಲಿ ಒಂದು. ಯುದ್ಧವಿಮಾನಗಳಿಗೆ ರೀಫುಯಲೆಂಗ್ ವ್ಯವಸ್ಥೆ ಹೊಂದಿದೆ. ಸೇನೆಯ ಹೆಡ್ಕ್ವಾರ್ಟರ್ಸ್ ಪಕ್ಕದಲ್ಲೇ ಇದೆ. ಪಾಕಿಸ್ತಾನದ ನ್ಯಾಷನಲ್ ಏರೋಸ್ಪೇಸ್ ಸೆಂಟರ್ ಇರುವ ಬೇನಜೀರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಕೂಡ ಸಮೀಪದಲ್ಲಿದೆ.
ನೂರ್ ಖಾನ್ ಮಾತ್ರವಲ್ಲ, ಚಕ್ಲಾಲ, ಮುರಿದ್, ರಫಿಕಿ, ರಹೀಂ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಮತ್ತಿತರ ವಾಯುನೆಲೆಗಳ ಮೇಲೆ ಭಾರತ ನಿಖರವಾಗಿ ಕ್ಷಿಪಣಿ ದಾಳಿ ಮಾಡಿದ್ದು ಪಾಕಿಸ್ತಾನವನ್ನು ಕಂಗೆಡೆಸಿತ್ತು. ನೂರ್ ಖಾನ್ ನೆಲೆಯಲ್ಲಿ ಎರಡು ಸ್ಫೋಟಗಳಾದವು. ಹೀಗೇ ಮುಂದುವರಿದಿದ್ದಲ್ಲಿ ಪಾಕಿಸ್ತಾನದ ನ್ಯೂಕ್ಲಿಯಾರ್ ಕಮಾಂಡ್ ಅಥಾರಿಟಿ ಮಣ್ಣುಪಾಲಾಗುವ ಸಾಧ್ಯತೆ ಇತ್ತು.
ಹೀಗಾಗಿ, ನೂರ್ ಖಾನ್ ನೆಲೆ ಮೇಲೆ ಯಾವಾಗ ಕ್ಷಿಪಣಿ ದಾಳಿ ಆಯಿತೋ ಪಾಕಿಸ್ತಾನ ಪತರುಗುಟ್ಟಿತ್ತು. ಕೆಲ ವರದಿಗಳ ಪ್ರಕಾರ, ಪಾಕಿಸ್ತಾನದ ನ್ಯಾಷನಲ್ ಕಮ್ಯಾಂಡ್ ಅಥಾರಿಟಿ ಜೊತೆ ಪ್ರಧಾನಿ ಶೆಹಬಾಜ್ ಷರೀಫ್ ಸಭೆ ನಡೆಸಿದ್ದರಂತೆ. ಇದು ಅಂತಿಂಥ ಸಭೆಯಲ್ಲ… ಪರಮಾಣ ಅಸ್ತ್ರಗಳನ್ನು ಬಳಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುವ ಒಂದು ಪ್ರಾಧಿಕಾರ ಅದು.
ಇದನ್ನೂ ಓದಿ: ಯುದ್ಧ ಭಾರತದ ಆಯ್ಕೆಯಲ್ಲ: ಶಾಂತಿ ಕಾಪಾಡಿ ಎಂದ ಚೀನಾ ವಿದೇಶಾಂಗ ಸಚಿವಗೆ ಅಜಿತ್ ದೋವಲ್ ಹೇಳಿದ್ದೇನು?
ಇದರ ಜೊತೆಗೆ, ಪಾಕಿಸ್ತಾನ ಅಮೆರಿಕದ ನೆರವು ಯಾಚಿಸಿದೆ. ಅಮೆರಿಕಕ್ಕೆ ಈಗ ಪರಿಸ್ಥಿತಿ ಗಂಭೀರ ಹಂತಕ್ಕೆ ಹೋಗುವ ಮುನ್ಸೂಚನೆ ಗೊತ್ತಾಗಿರಬೇಕು. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ವ್ಯಾನ್ಸ್ ಮಾತಿಗೆ ಮೋದಿ ಹೆಚ್ಚು ಸೊಪ್ಪು ಹಾಕಿದಂತೆ ಅನಿಸುವುದಿಲ್ಲ.
ನಂತರ ಅಮೆರಿಕದ ಮಾರ್ಕ್ ರುಬಿಯೋ ಅವರು ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಆ ಮಾತುಕತೆ ಎಷ್ಟು ಫಲಪ್ರದವಾಯಿತು ಎಂಬುದು ಗೊತ್ತಿಲ್ಲ. ಅಂತಿಮವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಖುದ್ದಾಗಿ ಮಧ್ಯಪ್ರವೇಶಿದರು ಎಂದು ವರದಿಗಳು ಹೇಳುತ್ತಿವೆ. ಪಾಕಿಸ್ತಾನವೇನಾದರೂ ಹತಾಶೆಯಲ್ಲಿ ಅಣ್ವಸ್ತ್ರ ಪ್ರಯೋಗಿಸಿಬಿಟ್ಟರೆ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತವಾಗಿತ್ತು. ಅಮೆರಿಕ ಮಧ್ಯ ಪ್ರವೇಶಿಸುವುದು ಅನಿವಾರ್ಯವಾಗಿತ್ತಾ ಎಂದನಿಸದೇ ಇರದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sun, 11 May 25