ಹೈದರಾಬಾದ್: ಭಾರತದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾದ ನಂತರ ಕೊರೊನಾ ಲಸಿಕೆಯ ಮಹತ್ವದ ಕುರಿತು ಸಾಕಷ್ಟು ಚರ್ಚೆಗಳಾದವು. ದೇಶದ ಎಲ್ಲಾ ನಾಗರೀಕರಿಗೂ ಕೊರೊನಾ ಲಸಿಕೆ ನೀಡುವುದೊಂದೇ ಸೋಂಕು ನಿಯಂತ್ರಣಕ್ಕಿರುವ ಪರಿಹಾರ ಎಂದು ಹಲವು ತಜ್ಞರು ಹೇಳಿದ್ದಾರೆ. ದುರದೃಷ್ಟವಶಾತ್ ಈ ಸಂದರ್ಭದಲ್ಲೇ ದೇಶದಲ್ಲಿ ಕೊರೊನಾ ಲಸಿಕೆಯ ಅಭಾವ ತಲೆದೋರಿದೆ. ಇಂತಹ ವಿಷಮ ಪರಿಸ್ಥಿತಿಯನ್ನು ಎದುರಿಸಲು ಲಸಿಕೆ ಉತ್ಪಾದನೆ ಹೆಚ್ಚಿಸಬೇಕು, ಇದಕ್ಕಾಗಿ ಎಲ್ಲಾ ಲಸಿಕಾ ಸಂಸ್ಥೆಗಳು ತಾವು ತಯಾರಿಸುತ್ತಿರುವ ಕೊರೊನಾ ಲಸಿಕೆಯ ಬಗ್ಗೆ ಇತರರೊಂದಿಗೆ ಮಾಹಿತಿ ಹಂಚಿಕೊಂಡು ಉತ್ಪಾದನೆ ಹೆಚ್ಚಿಸಲು ಸಹಕರಿಸಬೇಕು ಎಂಬ ಅಭಿಪ್ರಾಯವೂ ಕೇಳಿಬಂತು. ಅಂತೆಯೇ ಭಾರತೀಯ ಮೂಲದ ಲಸಿಕಾ ಉತ್ಪಾದನಾ ಸಂಸ್ಥೆಯಾದ ಭಾರತ್ ಬಯೋಟೆಕ್ಗೂ ಕೊವ್ಯಾಕ್ಸಿನ್ ಲಸಿಕೆ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಸೂಚಿಸಲಾಯಿತು. ಆದರೆ, ನಿಷ್ಕ್ರಿಯ ಕೊರೊನಾ ವೈರಾಣುವಿನಿಂದ ತಯಾರಿಸಲಾಗುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲು ಇಡೀ ದೇಶದಲ್ಲಿ ಬೆರಳೆಣಿಕೆಯಷ್ಟು ಸಂಸ್ಥೆಗಳು ಮಾತ್ರ ಸಶಕ್ತವಾಗಿದ್ದು, ಹೆಚ್ಚಿನವರು ಇದಕ್ಕೆ ಧೈರ್ಯ ಮಾಡುತ್ತಿಲ್ಲ ಎನ್ನಲಾಗಿದೆ.
ಈ ಕುರಿತು ಬಯೋಕಾನ್ ಸಂಸ್ಥೆಯ ಸ್ಥಾಪಕರಾದ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದು, ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಲಸಿಕಾ ತಯಾರಕರಿಗೆ ಆಹ್ವಾನ ನೀಡಲಾಗಿದೆ. ಆದರೆ, ಎಷ್ಟು ಜನ ಆಸಕ್ತಿ ತೋರಿಸಿ ಮುಂದೆ ಬರಲಿದ್ದಾರೆ ಎಂದು ನೋಡಬೇಕಿದೆ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಕೆಲ ಲಸಿಕೆ ತಯಾರಿಕಾ ಸಂಸ್ಥೆಯ ಮುಖ್ಯಸ್ಥರುಗಳೇ ಹೇಳಿಕೆ ನೀಡಿದ್ದು, ಮೂಲತಃ ಯಾರೂ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಕೈ ಹಾಕಲು ಇಷ್ಟಪಡುವುದಿಲ್ಲ. ಸಕ್ರಿಯ ವೈರಾಣುವನ್ನು ನಿಷ್ಕ್ರಿಯಗೊಳಿಸಿ ಲಸಿಕೆ ತಯಾರಿಸಲು ಜಗತ್ತಿನಲ್ಲಿ ಯಾರೂ ಅಷ್ಟು ಸುಲಭವಾಗಿ ಧೈರ್ಯ ಮಾಡುವುದಿಲ್ಲ. ಹೀಗಾಗಿಯೇ ಹೆಚ್ಚಿನವರು ಪ್ರೋಟೀನ್ ಆಧಾರಿತ ಲಸಿಕೆ ತಯಾರಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಸಾಂಕ್ರಾಮಿಕ ನಿಯಂತ್ರಣಕ್ಕೆ ಲಸಿಕೆ ತಯಾರಿಸಲು ನಿಷ್ಕ್ರಿಯ ವೈರಾಣುವನ್ನು ಬಳಸುವುದೇ ಅತ್ಯಂತ ತ್ವರಿತ ಮಾರ್ಗ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಶಾಂತ ಬಯೋಟೆಕ್ ಮುಖ್ಯಸ್ಥ ಕೆ.ಐ ವರಪ್ರಸಾದ್ ರೆಡ್ಡಿ, ಪ್ರಪ್ರಥಮವಾಗಿ ಈ ಲಸಿಕೆಗಳಿಗೆ ಯಾವುದೇ ಸೂತ್ರ ಎನ್ನುವುದು ಇರುವುದಿಲ್ಲ. ಇದೊಂದು ಪ್ರಕ್ರಿಯೆ ಆಗಿದ್ದು, ಈ ತಂತ್ರಜ್ಞಾನವನ್ನು ಅರ್ಥ ಮಾಡಿಕೊಂಡವರು ಲಸಿಕೆ ತಯಾರಿಸಬಹುದು. ಆದರೆ, ಇದನ್ನೀಗ ಬೇರೆಯವರಿಗೆ ಮಾಡಲು ಒಪ್ಪಿಸಿದರೂ ಸರಿಯಾಗಿ ಅರ್ಥೈಸಿಕೊಂಡು ಲಸಿಕೆ ಉತ್ಪಾದಿಸುವುದಕ್ಕೆ ಏನಿಲ್ಲವೆಂದರೂ 6ರಿಂದ 8 ತಿಂಗಳು ಸಮಯ ಹಿಡಿಯುತ್ತದೆ. ಸಕ್ರಿಯ ವೈರಾಣುವನ್ನು ನಿಯಂತ್ರಿಸುವುದು ತಮಾಷೆಯ ಸಂಗತಿಯಲ್ಲ. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೇ ಕನಿಷ್ಟ ಆರು ತಿಂಗಳಾದರೂ ಬೇಕು ಎಂದು ತಿಳಿಸಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆ ತಯಾರಿಕೆಗೆ ಬಿಎಸ್ಎಲ್ 3 ಸೌಲಭ್ಯ ಬೇಕಾಗಿದ್ದು, ತಾಂತ್ರಿಕವಾಗಿಯೂ ಹೆಚ್ಚು ಕೆಲಸ ಇರುವುದರಿಂದ ಅಧಿಕ ಸಮಯ ಹಾಗೂ ಜಾಗ ಬೇಕಾಗುತ್ತದೆ. ಜತೆಗೆ, ನುರಿತ ಸಿಬ್ಬಂದಿ ವರ್ಗದ ಅವಶ್ಯಕತೆಯೂ ಇದೆ. ಹೀಗಾಗಿ ಸಕ್ರಿಯ ವೈರಾಣು ಮತ್ತೆ ಬೆಳೆಯದಂತೆ ಅದನ್ನು ನಿಷ್ಕ್ರಿಯಗೊಳಿಸಿ ಬಳಸುವುದು ಸೂಕ್ಷ್ಮ ಕೆಲಸವಾಗಿದೆ. ಇದನ್ನು ಯಾರೂ ಮಾಡಲಾಗುವುದೇ ಇಲ್ಲ ಎಂದು ಹೇಳಲಾಗದು. ಆದರೆ, ಸುಖಾಸುಮ್ಮನೆ ಸುಲಭದಲ್ಲಿ ಮಾಡಲಾಗುವುದಿಲ್ಲ ಎನ್ನುವುದಂತೂ ಸತ್ಯ ಎಂದು ಸಿಸಿಎಂಬಿ ಮಾಜಿ ನಿರ್ದೇಶಕ ಹಾಗೂ ಸಿಎಸ್ಐಆರ್ ವಿಜ್ಞಾನಿ ಡಾ.ಮೋಹನ್ ರಾವ್ ವಿವರಿಸಿದ್ದಾರೆ.
ಕೊವ್ಯಾಕ್ಸಿನ್ ತಯಾರಿಕೆಯಲ್ಲಿ ಇಷ್ಟೆಲ್ಲಾ ಸಂಕೀರ್ಣತೆ ಇರುವುದರಿಂದ ಇದಕ್ಕಿಂತಲೂ ಆಸ್ಟ್ರಾಜೆನೆಕಾ ಆಕ್ಸ್ಫರ್ಡ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಯನ್ನಾಗಲೀ ಅಥವಾ ಮಾಡೆರ್ನಾ, ಫೈಜರ್ ಸಂಸ್ಥೆಗಳ ಎಂಆರ್ಎನ್ಎ ಆಧಾರಿತ ಲಸಿಕೆಗಳನ್ನಾಗಲೀ ಉತ್ಪಾದಿಸುವುದು ಸುಲಭ. ಅದಕ್ಕೆ ಬಿಎಸ್ಎಲ್ 3 ಸೌಲಭ್ಯವಾಗಲೀ ಹೆಚ್ಚು ಜಾಗವಾಗಲೀ ಬೇಕಾಗುವುದಿಲ್ಲ ಎಂದು ಹಲವು ತಜ್ಞರು ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊವ್ಯಾಕ್ಸಿನ್ ಲಸಿಕೆ ತಯಾರಿಸುವುದಕ್ಕಿಂತಲೂ ಬೇರೆ ಲಸಿಕೆ ತಯಾರಿಕೆಯೇ ಸರಳ ಎನ್ನುವುದು ಬಹುತೇಕ ಲಸಿಕಾ ತಯಾರಿಕಾ ಸಂಸ್ಥೆಗಳ ಅಭಿಪ್ರಾಯವಾಗಿದೆ.
ಇದನ್ನೂ ಓದಿ:
Covid Vaccine: ವರ್ಷಾಂತ್ಯದೊಳಗೆ ಭಾರತದಲ್ಲಿ ಸಿಗಲಿರುವ 8 ಕೊರೊನಾ ಲಸಿಕೆಗಳು ಯಾವುವು?
ಭಾರತ್ ಬಯೋಟೆಕ್ ಮಾತ್ರವಲ್ಲದೆ ಇನ್ನೂ 4 ಕಡೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ