Tamil Nadu Elections 2021: ರಾಜಕೀಯದಲ್ಲಿ ಹೊರಗಿನವರು ಎಂಬುದಿಲ್ಲ: ಬಿಜೆಪಿ ಅಭ್ಯರ್ಥಿಯ ಹೇಳಿಕೆಗೆ ಕಮಲ್ ಹಾಸನ್ ಪ್ರತಿಕ್ರಿಯೆ
Kamal Haasan: ಅತಿಥಿಗಳ ಆರೈಕೆ ಎಂಬ ಪದ ಬಳಕೆ ಬಗ್ಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ರಾಜಕಾರಣದಲ್ಲಿ ಈ ರೀತಿಯ ತರ್ಕ ಸರಿಯಲ್ಲ. ಯಾರೊಬ್ಬರೂ ಹೊರಗಿನವರಲ್ಲ. ಭಾರತೀಯರಾದವರು ಭಾರತೀಯರು ಮಾತ್ರ. ಗಾಂಧೀಜಿ ಅವರು ಗುಜರಾತಿ ಮಾತ್ರವಲ್ಲ ಅವರು ನಮ್ಮ ಅಪ್ಪ ಎಂದಿದ್ದಾರೆ.
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕೊಯಂಬತ್ತೂರ್ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ನಾಯಕಿ ವನತಿ ಶ್ರೀನಿವಾಸನ್ ಅವರ ಹೇಳಿಕೆಗೆ ರಾಜಕೀಯದಲ್ಲಿ ಹೊರಗಿನವರು ಎಂಬುದಿಲ್ಲ ಎಂದು ಮಕ್ಕಳ್ ನೀಧಿ ಮಯ್ಯಂ (MNM) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ. ಕೊಯಂಬತ್ತೂರ್ನಲ್ಲಿ ಶನಿವಾರ ಪಕ್ಷದ ಚುನಾವಣಾ ಪ್ರಚಾರದ ವೇಳೆ ಕಮಲ್ ಹಾಸನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಕಾರಣ, ಕಮಲ್ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಒಂದು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಏತನ್ಮಧ್ಯೆ, ಕೊಯಂಬತ್ತೂರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ವನತಿ ಅವರು ಹಣ್ಣು ಹಂಪಲುಗಳನ್ನು ಕಮಲ್ ಅವರಿಗೆ ಕಳುಹಿಸಿ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
ಕಮಲ್ ಹಾಸನ್ ಅವರ ಕಾಲಿಗೆ ಏಟಾಗಿದೆ ಎಂಬ ವಿಷಯ ನನಗೆ ಬೆಳಗ್ಗೆ ತಿಳಿಯಿತು. ಅವರಿಗೆ ಉತ್ತಮ ಆರೋಗ್ಯ ಹಾರೈಸುತ್ತೇನೆ. ಶೀಘ್ರ ಗುಣಮುಖರಾಗುವಂತೆ ಅವರಿಗೆ ಈ ಬಾಸ್ಕೆಟ್ನಲ್ಲಿ ಹಣ್ಣುಗಳನ್ನು ಕಳುಹಿಸುತ್ತಿದ್ದೇನೆ. ಅತಿಥಿಗಳ ಆರೈಕೆ ಮಾಡುವುದು ನಮ್ಮ ಸಂಪ್ರದಾಯ. ಅವರು ನಮ್ಮ ಅತಿಥಿ ಆಗಿರುವುದರಿಂದ ಅವರಿಗೆ ಉತ್ತಮ ಆರೋಗ್ಯವನ್ನು ನಾನು ಆಶಿಸುತ್ತೇನೆ ಎಂದು ವನತಿ ಶ್ರೀನಿವಾಸನ್ ಪತ್ರ ಬರೆದಿದ್ದರು.
ಇದರಲ್ಲಿ ಅತಿಥಿಗಳ ಆರೈಕೆ ಎಂಬ ಪದ ಬಳಕೆ ಬಗ್ಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ರಾಜಕಾರಣದಲ್ಲಿ ಈ ರೀತಿಯ ತರ್ಕ ಸರಿಯಲ್ಲ. ಯಾರೊಬ್ಬರೂ ಹೊರಗಿನವರಲ್ಲ. ಭಾರತೀಯರಾದವರು ಭಾರತೀಯರು ಮಾತ್ರ. ಗಾಂಧೀಜಿ ಅವರು ಗುಜರಾತಿ ಮಾತ್ರವಲ್ಲ ಅವರು ನಮ್ಮ ಅಪ್ಪ ಎಂದಿದ್ದಾರೆ.
You can’t make such logic in politics, there’s no outsider, an Indian is an Indian. Gandhi Ji isn’t a Gujarati, he’s my father: Kamal Haasan, MNM on BJP’s Coimbatore South candidate Vanathi Srinivasan’s ‘guest of Coimbatore’ remark
Haasan is contesting from the same constituency pic.twitter.com/p3Vbszel2x
— ANI (@ANI) March 22, 2021
ಶನಿವಾರ ಕೊಯಂಬತ್ತೂರಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಕಮಲ್ ಅವರ ಕಾಲು ತುಳಿದಿದ್ದರು. ಕಮಲ್ ಚುನಾವಣೆ ಪ್ರಚಾರ ಮಾಡುವಾಗ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಈ ಹೊತ್ತಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಮಲ್ ಕಾಲಿಗೆ ತುಳಿದಿದ್ದು, ಬಲ ಕಾಲಿಗೆ ಏಟಾಗಿತ್ತು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಮಲ್ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಕಮಲ್ ಹಾಸನ್ ಫೆಬ್ರುವರಿ 2018ರಲ್ಲಿ ಎಂಎನ್ಎಂ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ ತಾವು ಸ್ವತಃ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಿರಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಕಮಲ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಶೇ 3.75ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತ್ತು.
ಎಐಎಡಿಎಂಕೆಯ ಅಮ್ಮಾನ್ ಕೆ.ಅರ್ಜುನನ್ ಈ ಮೊದಲು ಕೊಯಂಬತ್ತೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಈ ಸಲ ಎಐಎಡಿಎಂಕೆ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ಅರ್ಜುನನ್ ಕೊಯಂಬತ್ತೂರ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕೊಯಂಬತ್ತೂರ್ ದಕ್ಷಿಣ ಕ್ಷೇತ್ರದಲ್ಲಿ ಕಮಲ್ ಹಾಸನ್ ಎದುರು ಬಿಜೆಪಿಯ ವನತಿ ಶ್ರೀನಿವಾಸನ್ ಮತ್ತು ಕಾಂಗ್ರೆಸ್ನ ಮಯೂರ ಎಸ್.ಜಯಕುಮಾರ್ ಸ್ಪರ್ಧಿಸಲಿದ್ದಾರೆ. ಬಿಜೆಪಿ ಹುರಿಯಾಳಾಗಿರುವ ವನತಿ, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಹೌದು.
234 ವಿಧಾನಸಭೆ ಸೀಟುಗಳಿರುವ ತಮಿಳುನಾಡಿನಲ್ಲಿ ಏಪ್ರಿಲ್ 6ಕ್ಕೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Tamil Nadu Elections 2021: ಮತದಾರರ ಓಲೈಕೆಗಾಗಿ ಟಿವಿ, ವಾಷಿಂಗ್ ಮೆಷೀನ್ ಏನೇ ಕೇಳಿದರೂ ಕೊಡುತ್ತಿವೆ ರಾಜಕೀಯ ಪಕ್ಷಗಳು