ರೈತರು ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಮೋದಿ ಹೇಳಿದ್ದಾರೆ, ನಾವು ಸಂಸತ್ ಭವನದ ಹೊರಗೆ ಮಾರುತ್ತೇವೆ: ರಾಕೇಶ್ ಟಿಕಾಯತ್

|

Updated on: Mar 24, 2021 | 1:39 PM

Farmers Protest: ದೇಶದ ಯಾವುದೇ ಭಾಗದಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಹಾಗಾಗಿ ನಾವು ವಿಧಾನಸೌಧ, ಜಿಲ್ಲಾಡಳಿತ ಕೇಂದ್ರ ಮತ್ತು ಸಂಸತ್ ಭವನದ ಹೊರಗೆ ಬೆಳೆಗಳನ್ನು ಮಾರಾಟ ಮಾಡಲಿದ್ದೇವೆ ಎಂದಿದ್ದಾರೆ ರಾಕೇಶ್ ಟಿಕಾಯತ್

ರೈತರು ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಮೋದಿ ಹೇಳಿದ್ದಾರೆ, ನಾವು ಸಂಸತ್ ಭವನದ ಹೊರಗೆ ಮಾರುತ್ತೇವೆ: ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್
Follow us on

ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಶೀಘ್ರದಲ್ಲೇ ತಮ್ಮ ಕೃಷಿ ಉತ್ಪನ್ನಗಳನ್ನು ದೆಹಲಿಯ ಆಡಳಿತ ಕೇಂದ್ರಗಳ ಹೊರಗೆ, ವಿಧಾನಸೌಧ ಮತ್ತು ಸಂಸತ್ ಭವನದ ಹೊರಗಡೆ ಮಾರಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಮಂಗಳವಾರ ಜೈಪುರದ ವಿದ್ಯಾಧರ್ ನಗರದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್​ನಲ್ಲಿ ಮಾತಾಡಿದ ಟಿಕಾಯತ್, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಯಾವುದೇ ಭಾಗದಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದ್ದಾರೆ. ಹಾಗಾಗಿ ನಾವು ವಿಧಾನಸೌಧ, ಜಿಲ್ಲಾಡಳಿತ ಕೇಂದ್ರ ಮತ್ತು ಸಂಸತ್ ಭವನದ ಹೊರಗೆ ಬೆಳೆಗಳನ್ನು ಮಾರಾಟ ಮಾಡಲಿದ್ದೇವೆ. ಬೆಳೆಗಳನ್ನು ಮಾರುವುದಕ್ಕೆ ಸಂಸತ್ ಭವನದ ಹೊರಭಾಗ ಸೂಕ್ತವಾದ ಜಾಗ ಎಂದಿದ್ದಾರೆ ಟಿಕಾಯತ್.

ದೇಶದ ಜನರು ಜೈ ರಾಮ್, ಜೈ ಭೀಮ್ ಎಂದು ಘೋಷಣೆ ಕೂಗುವುದರ ಜತೆಗೆ ಅಲ್ಲಾಹು ಅಕ್ಬರ್, ಹರ್ ಹರ್ ಮಹಾದೇವ್ ಎಂಬ ಘೋಷಣೆಯನ್ನೂ ಕೂಗಬೇಕು. ಇಲ್ಲವಾದರೆ ದೇಶ ಮುಳುಗಿ ಹೋಗುತ್ತದೆ. ದೇಶವನ್ನು ರಕ್ಷಿಸಲು ಇರುವ ಏಕೈಕ ದಾರಿ ಇದು. ರೈತರ ಪ್ರತಿಭಟನೆಗೆ ರಾಜಸ್ಥಾನದ ಜನರು ಭಾಗಿಯಾಗಬೇಕು. ಮುಂಬರುವ ದಿನಗಳಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ರ್ಯಾಲಿಗೆ ನಿಮ್ಮ ಬೆಂಬಲ ಬೇಕು. ಎದ್ದೇಳಿ, ಬಿಕೆಯು ಮುಂದಿನ ಪ್ರತಿಭಟನೆ ದಿನಾಂಕ ಘೋಷಣೆ ಮಾಡುವಾಗ ನೀವೂ ದೆಹಲಿಗೆ ಬನ್ನಿ. ದೆಹಲಿಗೆ ಮುತ್ತಿಗೆ ಹಾಕಲಿರುವ ಸಮಯ ಬಂದಿದೆ ಎಂದು ಜೈಪುರದಲ್ಲಿ ಮಾತನಾಡಿದ ಟಿಕಾಯತ್ ಹೇಳಿದ್ದಾರೆ.

ಕೃಷಿ ವಲಯವನ್ನು ಉದ್ಯಮಿಗಳಿಗೆ ಮಾರುವ ಮೂಲಕ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ನಮ್ಮ ದೇಶವನ್ನು ಲೂಟಿ ಮಾಡುವ ಪ್ರಯತ್ನದಲ್ಲಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ನಾವು ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸಬೇಕಿದೆ ಎಂದು ಜಾಟ್ ಮಹಾಸಭೆಯ ಅಧ್ಯಕ್ಷ, ಮಹಾಪಂಚಾಯತ್ ಸಂಚಾಲಕ ರಾಜಾರಾಂ ಮೀಲ್ ಹೇಳಿದ್ದಾರೆ.


ರೈತರ ಪ್ರತಿಭಟನೆಗೆ ಶಕ್ತಿ ತುಂಬಲು ಟಿಕಾಯತ್ ದೇಶದಾದ್ಯಂತ ಪ್ರಯಾಣ ನಡೆಸುತ್ತಿದ್ದಾರೆ. ಸೋಮವಾರ ಬೆಂಗಳೂರಿಗೆ ಬಂದಿದ್ದ ಟಿಕಾಯತ್, ರೈತರನ್ನುದ್ದೇಶಿಸಿ ಮಾತನಾಡಿದ್ದರು. ಮಾರ್ಚ್  21ರಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿದ್ದ ಅವರು ದೇಶದಲ್ಲಿ ಎಂಎಸ್‌ಪಿ ಕಾನೂನು ಜಾರಿಗೆ ಬರಬೇಕು. ಮಾರುಕಟ್ಟೆಗಳಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಇದಕ್ಕಾಗಿ ಬಹಳ ದೊಡ್ಡ ಆಂದೋಲನ ನಡೆಯುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ನಮ್ಮನ್ನ ಆಳಲು ಕಾಯ್ತಿವೆ. ತರಕಾರಿ ಸೇರಿ ಹಲವು ವಸ್ತುಗಳು ಮಾಲ್‌ನಲ್ಲಿ ಖರೀದಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ತಿನ್ನುವ ಆಹಾರ ಖರೀದಿಸಬೇಕಾಗುತ್ತೆ. ದೇಶದಲ್ಲಿರುವ ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕಿದೆ. ಸರ್ಕಾರಿ ಸಂಸ್ಥೆಗಳನ್ನ ಖಾಸಗೀಕರಣ ಮಾಡಲಾಗುತ್ತಿದೆ. ಹಸಿವಿನ ವ್ಯಾಪಾರದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಮೇ ಅಥವಾ ಜೂನ್‌ಗೆ ಹೋರಾಟ ಮುಗಿಯುತ್ತೆ ಎಂದು ಕೇಂದ್ರ ಸರ್ಕಾರ ತಿಳಿದಿದೆ. ಆದರೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲೇಬೇಕು. ಇಲ್ಲದಿದ್ರೆ ಹೋರಾಟ ನಿರಂತರವಾಗಿ ಮುಂದುವರಿಯುತ್ತೆ. ಧರ್ಮ, ಜಾತಿ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:  ಹಸಿವಿನ ವ್ಯಾಪಾರದ ವಿರುದ್ಧ ನಾವು ಹೋರಾಡುತ್ತಿದ್ದೇವೆ, ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ; ಕೇಂದ್ರದ ವಿರುದ್ಧ ರಾಕೇಶ್ ಟಿಕಾಯತ್, ಯುದ್ವೀರ್ ಸಿಂಗ್ ವಾಗ್ದಾಳಿ

ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

Published On - 1:33 pm, Wed, 24 March 21