ಭಾರತ ಮರ್ಸಿಡಿಸ್, ಪಾಕಿಸ್ತಾನ ಡಂಪ್ ಟ್ರಕ್; ತಮ್ಮದೇ ಹೋಲಿಕೆಗೆ ಟ್ರೋಲ್ ಆದ ಅಸಿಮ್ ಮುನೀರ್

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕಕ್ಕೆ ತೆರಳಿದ್ದಾರೆ. ಕಳೆದ 2 ತಿಂಗಳಲ್ಲಿ ಇದು ಅವರ 2ನೇ ಅಮೆರಿಕ ಭೇಟಿಯಾಗಿದೆ. ಈ ಭೇಟಿಯ ವೇಳೆ ಅವರು ಭಾರತದ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಹಾಗೇ, ಭಾರತವನ್ನು ಮರ್ಸಿಡಿಸ್​ಗೆ ಮತ್ತು ಪಾಕಿಸ್ತಾನವನ್ನು ಡಂಪ್ ಟ್ರಕ್​ಗೆ ಹೋಲಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿರುವ ಅಸಿಮ್ ಮುನೀರ್ ಅವರ ಈ ಹೋಲಿಕೆಗೆ ನೆಟ್ಟಿಗರು ಭಾರೀ ಟ್ರೋಲ್ ಮಾಡಿದ್ದಾರೆ.

ಭಾರತ ಮರ್ಸಿಡಿಸ್, ಪಾಕಿಸ್ತಾನ ಡಂಪ್ ಟ್ರಕ್; ತಮ್ಮದೇ ಹೋಲಿಕೆಗೆ ಟ್ರೋಲ್ ಆದ ಅಸಿಮ್ ಮುನೀರ್
Pak Army Chief Asim Munir

Updated on: Aug 11, 2025 | 6:55 PM

ನವದೆಹಲಿ, ಆಗಸ್ಟ್ 11: ಅಮೆರಿಕದಲ್ಲಿ ಮಾತನಾಡುವ ವೇಳೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಭಾರತವನ್ನು ಐಷಾರಾಮಿ ಮರ್ಸಿಡಿಸ್‌ ಕಾರಿಗೆ ಹೋಲಿಸಿದ್ದಾರೆ. ಅದಕ್ಕೂ ವಿಚಿತ್ರವಾದ ಸಂಗತಿಯೆಂದರೆ ತನ್ನ ಸ್ವಂತ ದೇಶವಾದ ಪಾಕಿಸ್ತಾನವನ್ನು ಜಲ್ಲಿಕಲ್ಲು ತುಂಬಿದ ಡಂಪ್ ಟ್ರಕ್‌ಗೆ ಹೋಲಿಸಿದ್ದಾರೆ. ಈ ಹೋಲಿಕೆಗೆ ಅವರು ಕಾರಣ ನೀಡಿದ್ದರೂ ಈ ಹೋಲಿಕೆಯ ನಂತರ ನೆಟ್ಟಿಗರು ಅಸೀಮ್ ಮುನೀರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. “ನಿಮ್ಮ ಜೀವನದಲ್ಲಿ ನೀವು ಹೇಳಿದ ಸತ್ಯ ಇದೊಂದೇ ಇರಬೇಕು” ಎಂದು ಭಾರತೀಯರ ಸಾಮಾಜಿಕ ಜಾಲತಾಣದ ಬಳಕೆದಾರರು ಲೇವಡಿ ಮಾಡಿದ್ದಾರೆ. ಅಷ್ಟಕ್ಕೂ ಅಸಿಮ್ ಮುನೀರ್ ಈ ಹೇಳಿಕೆ ನೀಡಿದ್ದೇಕೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಪಾಕಿಸ್ತಾನಿ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸಿಮ್ ಮುನೀರ್, ಭಾರತದಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ ಪಾಕಿಸ್ತಾನ ಪರಮಾಣು ದಾಳಿಯ ಮೂಲಕ ಅರ್ಧ ಜಗತ್ತನ್ನು ನಾಶಪಡಿಸುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಇದಾದ ನಂತರ ಅವರು ನೀಡಿದ ಮತ್ತೊಂದು ಹೇಳಿಕೆ ಭಾರೀ ಟ್ರೋಲಾಗುತ್ತಿದೆ. “ಭಾರತವು ಹೊಳೆಯುವ ಮರ್ಸಿಡಿಸ್ ಆದರೆ ನಾವು ಪಾಕಿಸ್ತಾನವರು ಜಲ್ಲಿಕಲ್ಲು ತುಂಬಿದ ಡಂಪ್ ಟ್ರಕ್. ಒಂದುವೇಳೆ ಟ್ರಕ್ ಆ ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಅಸಿಮ್ ಮುನೀರ್ ಅವರ ಹೋಲಿಕೆ ಈಗ ಟ್ರೋಲ್ ಆಗುತ್ತಿದೆ.


ಇದನ್ನೂ ಓದಿ: ಸಿಂಧೂ ನದಿಗೆ ಭಾರತ ಡ್ಯಾಂ ನಿರ್ಮಿಸಿದರೆ ಬಾಂಬ್ ಹಾಕುತ್ತೇವೆ; ಅಮೆರಿಕದಲ್ಲಿ ಅಸೀಮ್ ಮುನೀರ್ ಬೆದರಿಕೆ

‘ಪಾಕಿಸ್ತಾನದವರಿಗೆ ತಮ್ಮ ವಾಸ್ತವ ತಿಳಿದಿದೆ’, “ಇದೊಂದೇ ಸತ್ಯ ನೋಡಿ” ಎಂದು ನೆಟ್ಟಿಗರು ಪಾಕಿಸ್ತಾನದ ಅಸಿಮ್ ಮುನೀರ್ ಹೇಳಿಕೆಯ ಬಗ್ಗೆ ಟ್ರೋಲ್ ಮಾಡಿದ್ದಾರೆ.


“ಅಮೆರಿಕದಲ್ಲಿ ಹೋಲಿಕೆ ವೇಳೆಯೂ ಅಸಿಮ್ ಮುನೀರ್ ತಮ್ಮ ಸ್ವಂತ ದೇಶವನ್ನು ಕೆಟ್ಟದಾಗಿ ಕಾಣುವಂತೆ ಮಾಡಿದ್ದಾರೆ” ಎಂದು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.


“ಮುನೀರ್ ಅವರ ಹೇಳಿಕೆಯಲ್ಲಿರುವ ಏಕೈಕ ಸತ್ಯವೆಂದರೆ ಭಾರತವು ಮರ್ಸಿಡಿಸ್ ಮತ್ತು ಅವರ ದೇಶವು ಡಂಪ್ ಟ್ರಕ್. ಉಳಿದವು ಭ್ರಮೆ” ಎಂದು ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.


ಕೆಲವು ಇಂಟರ್ನೆಟ್ ಬಳಕೆದಾರರು ಸೃಜನಶೀಲರಾಗಿ, ಪಲ್ಟಿಯಾದ ಟ್ರಕ್ ಪಕ್ಕದಲ್ಲಿ ಹೊಳೆಯುವ ಮರ್ಸಿಡಿಸ್ ಕಾರಿನ AI ರಚಿತ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.


“ನಾನು ಇದನ್ನು ಮೊದಲು ಓದಿದಾಗ ಅದು ತಮಾಷೆ ಎಂದು ನಾನು ಭಾವಿಸಿದೆ. ಆದರೆ ಇದು ನಿಜ. ನಿಜವಾಗಿಯೂ ಅಸಿಮ್ ಮುನೀರ್ ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಲು ಅರ್ಹರು” ಎಂದು ಒಬ್ಬ ಎಕ್ಸ್ ಬಳಕೆದಾರರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ