ಪೊಲೀಸರಿಂದ ತಪ್ಪಿಸಿಕೊಳ್ಳಲು 5 ಗಂಟೆ ಕೊಳದೊಳಗೆ ಅಡಗಿದ್ದ ಕಳ್ಳ; ಯಾವ ಸಿನಿಮಾಗೂ ಕಡಿಮೆಯಿಲ್ಲ ಈ ಕತೆ!

ಮಧ್ಯಪ್ರದೇಶದ ಒಬ್ಬ ಅಂತರರಾಜ್ಯ ಕಳ್ಳ ಬಂಧನದಿಂದ ತಪ್ಪಿಸಿಕೊಳ್ಳಲು ನೀವ್ಯಾರೂ ಊಹಿಸದ ರೀತಿಯ ಪ್ರಯತ್ನ ಮಾಡಿದ್ದಾನೆ. ಪೊಲೀಸರಿಂದ ಬಚಾವಾಗಲು ಕೆಸರು ತುಂಬಿದ್ದ ಕೊಳದೊಳಗೆ ಹಾರಿದ್ದ ಆ ಕಳ್ಳನಿಗಾಗಿ ದಡದಲ್ಲಿ ಪೊಲೀಸರು ಗಂಟೆಗಟ್ಟಲೆ ಕಾದರೂ ಆತ ಮೇಲೆ ಬರಲೇಇಲ್ಲ. ಕೆಸರಲ್ಲಿ ಸಿಲುಕಿ ಸತ್ತುಹೋಗಿರಬಹುದೇ? ಎಂಬ ಅನುಮಾನವೂ ಪೊಲೀಸರಿಗೆ ಕಾಡಿತ್ತು. ಆತ 5 ಗಂಟೆ ಆ ಕೊಳದೊಳಗೆ ಬಚ್ಚಿಟ್ಟುಕೊಂಡು ಬದುಕಿದ್ದಾದರೂ ಹೇಗೆ? ಆತನನ್ನು ಪೊಲೀಸರು ಸೆರೆಹಿಡಿದರಾ? ಎಂಬೆಲ್ಲ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು 5 ಗಂಟೆ ಕೊಳದೊಳಗೆ ಅಡಗಿದ್ದ ಕಳ್ಳ; ಯಾವ ಸಿನಿಮಾಗೂ ಕಡಿಮೆಯಿಲ್ಲ ಈ ಕತೆ!
Police With Thief

Updated on: Apr 08, 2026 | 6:10 PM

ಜಬಲ್ಪುರ, ಏಪ್ರಿಲ್ 8: ‘ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಎಂಬುದು ರನ್ನನ ಗದಾಯುದ್ಧ ಕಾವ್ಯದಲ್ಲಿ ಬರುವ ಮುಖ್ಯವಾದ ಸಾಲು. ಮಹಾಭಾರತದ ಕುರುಕ್ಷೇತ್ರ ಯುದ್ಧದ ಅಂತಿಮ ಘಟ್ಟದಲ್ಲಿ ಭೀಮನಿಂದ ತಪ್ಪಿಸಿಕೊಳ್ಳುವ ಸಲುವಾಗಿ ದುರ್ಯೋಧನ ವೈಶಂಪಾಯನ ಸರೋವರದ ಕೆಳಗೆ ಅಡಗಿರುತ್ತಾನೆ. ಆಗ ಭೀಮನ ಸಿಂಹಘರ್ಜನೆಯನ್ನು ಕೇಳಿ ತಂಪಾದ ನೀರಿನೊಳಗಿದ್ದರೂ ಬೆವರುತ್ತಿರುತ್ತಾನೆ ಎಂದು ರನ್ನ ವರ್ಣಿಸಿದ್ದಾರೆ. ಅದೆಲ್ಲ ಮಹಾಭಾರತದ ಕತೆಯಾದರೆ ಮಧ್ಯಪ್ರದೇಶದಲ್ಲೊಬ್ಬ ಕಳ್ಳ ಕೂಡ ದುರ್ಯೋಧನ ಭೀಮನಿಂದ ತಪ್ಪಿಸಿಕೊಳ್ಳಲು ಮಾಡಿದ ಸಾಹಸದ ರೀತಿಯಲ್ಲೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳದೊಳಗೆ ಬರೋಬ್ಬರಿ 5 ಗಂಟೆ ಅಡಗಿ ಕುಳಿತಿದ್ದಾನೆ!

ನೀರು ತುಂಬಿದ್ದ ಕೊಳದೊಳಗೆ ಅಡಗಿದ್ದ ಆತ ಉಸಿರಾಡಲು ಕಷ್ಟವಾದಾಗ ಟೊಳ್ಳಾಗಿರುವ ತಾವರೆ ಹೂವಿನ ಕಾಂಡವನ್ನು ನೀರಿನಿಂದ ಮೇಲಕ್ಕೆ ಹಿಡಿದು, ನೀರಿನೊಳಗಿಂದ ಆ ಕಾಂಡದ ಮೂಲಕ ಗಾಳಿಯನ್ನು ಉಸಿರಾಡುವ ಪ್ಲಾನ್ ಮಾಡಿದ್ದಾನೆ. ಆತ ಅಲ್ಲಿ ಅಡಗಿದ್ದು ಪೊಲೀಸರಿಗೆ ಗೊತ್ತಾಗಿದ್ದು ಹೇಗೆ? ಆತನನ್ನು ಸೆರೆಹಿಡಿದಿದ್ದು ಹೇಗೆ? ಎಂಬ ಕತೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ.

ಇದನ್ನೂ ಓದಿ: ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಕೊಲೆ ಮಾಡಿದ್ದು ಹೇಗೆ ಗೊತ್ತಾ?

ಈ ಘಟನೆ ನಡೆದಿದ್ದು ಏಪ್ರಿಲ್ 6ರ ಮುಂಜಾನೆ. ಜಬಲ್ಪುರ್ ವಿಭಾಗದ ಸಿಹೋರಾ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ 4.50ರ ಸುಮಾರಿಗೆ ಕರ್ತವ್ಯದಲ್ಲಿದ್ದ RPF ಸಿಬ್ಬಂದಿ ರೈಲು ಸಂಖ್ಯೆ 11753 ರೈಲು ನಿಲ್ದಾಣದಿಂದ ಇಳಿಯುತ್ತಿರುವ ಅನುಮಾನಾಸ್ಪದ ವ್ಯಕ್ತಿಯನ್ನು ಗಮನಿಸಿದರು. ಅವರು ನೋಡುತ್ತಿದ್ದಾಗಲೇ ಆ ವ್ಯಕ್ತಿ ಮಹಿಳೆಯೊಬ್ಬರ ಪರ್ಸ್ ಕದಿಯಲು ಪ್ರಯತ್ನಿಸಿದ್ದ. ಬಳಿಕ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದನು. ಆತನನ್ನು ಹಿಂಬಾಲಿಸಿಕೊಂಡು ಅಧಿಕಾರಿಗಳು ಬರುತ್ತಿದ್ದಂತೆ, ಆ ಆರೋಪಿ ಸ್ಥಳೀಯ ಮಾರುಕಟ್ಟೆಯ ಬಳಿಯ ಹತ್ತಿರದ ಪಾಚಿಯಿಂದ ಆವೃತವಾದ ಕೊಳಕ್ಕೆ ಹಾರಿದನು. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವನು 5 ಗಂಟೆ ಆ ಕೆಸರು ತುಂಬಿದ ಕೊಳದ ನೀರಿನ ಅಡಿಯಲ್ಲಿ ಅಡಗಿಕೊಂಡಿದ್ದನು. ತಾನೆಲ್ಲಿದ್ದೇನೆಂದು ಯಾರೂ ಪತ್ತೆಹಚ್ಚಬಾರದು ಎಂದು ನೀರೊಳಗಿಂದ ಉಸಿರಾಡಲು ಟೊಳ್ಳಾದ ಕಮಲದ ಕಾಂಡವನ್ನು ಬಳಸಿದನು.

ಅವನನ್ನು ತಪ್ಪಿಸಿಕೊಳ್ಳಲು ಬಿಡಬಾರದು ಎಂದು ನಿರ್ಧರಿಸಿದ ಆರ್‌ಪಿಎಫ್ ಸಿಬ್ಬಂದಿ ಅಷ್ಟೂ ಹೊತ್ತು ದಡದಲ್ಲೇ ಕಾದಿದ್ದರು. ಕೊನೆಗೆ ಸ್ಥಳೀಯ ಪೊಲೀಸರೊಂದಿಗೆ ಅವರು ಆ ಕೊಳವನ್ನು ಸ್ವಚ್ಛಗೊಳಿಸಲು ಡೈವರ್‌ಗಳನ್ನು ನಿಯೋಜಿಸಿದರು. ದೀರ್ಘಕಾಲದ ಶೋಧ ಕಾರ್ಯಾಚರಣೆಯ ನಂತರ 5 ಗಂಟೆಗಳ ಕಾಲ ನೀರೊಳಗೆ ಅಡಗಿದ್ದ ಆ ಆರೋಪಿಯನ್ನು ಕೊನೆಗೂ ಪತ್ತೆಹಚ್ಚಿ, ನೀರಿನ ಒಳಗಿಂದ ಹೊರಗೆ ಎಳೆದುಕೊಂಡು ಹೋಗಲಾಯಿತು.

ಇದನ್ನೂ ಓದಿ: 14 ತಿಂಗಳು ಕೋಮಾದಲ್ಲಿದ್ದ ಅಮೆರಿಕದ ಭಾರತೀಯ ವಿದ್ಯಾರ್ಥಿನಿಯ ದುರಂತ ಅಂತ್ಯ

ಆಗಲೂ, ಅವನು ಕೊನೆಯ ಬಾರಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ, ಪೊಲೀಸರ ತಂಡ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಗಲಾಟೆಯ ಸಮಯದಲ್ಲಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳೂ ಆದವು. ಪೊಲೀಸರನ್ನು ಇಷ್ಟೆಲ್ಲ ಸತಾಯಿಸಿದ ಆರೋಪಿ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಹರ್ವಿಂದರ್ ಸಿಂಗ್. 32 ವರ್ಷದ ಹರ್ವಿಂದರ್ ಸಿಂಗ್ ಓರ್ವ ಅಂತರರಾಜ್ಯ ಅಪರಾಧಿ. ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿದ್ದ ಹಲವು ಆರೋಪಗಳು ಇವನ ಮೇಲಿದೆ. ಆತ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳ್ಳತನ ನಡೆಸಿದ್ದ. ಕೊನೆಗೂ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us