ಗಾಂಧಿ ಮಾತು ಕೇಳದವರು ಅಯೋಗ್ಯರು, ಮದ್ಯಪಾನ ಮಾಡುವವರು ಮಹಾಪಾಪಿಗಳು: ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರದದಲ್ಲಿ ಮಧ್ಯ ನಿಷೇಧವಾದ ಹೊರತಾಗಿಯೂ ಆಗಾಗ ಕಳ್ಳಭಟ್ಟಿ ಸೇವಿಸಿ ಸಾಯುವ ಘಟನೆ ನಡೆಯುತ್ತಲೇ ಇರುತ್ತದೆ. 2021ರಲ್ಲಿ ಆರು ತಿಂಗಳಲ್ಲಿ 60 ಜನರು ಕಳ್ಳಭಟ್ಟಿ ಸೇವಿಸಿ ಸತ್ತಿದ್ದಾರೆ.
ಬಿಹಾರದಲ್ಲಿ ಮದ್ಯಪಾನ ನಿಷೇಧವಾಗಿದೆ. ಆದರೂ ಕದ್ದುಮುಚ್ಚಿ ಕುಡಿದು, ಕ್ರೈಂ ಮಾಡುವವರೂ ಅಲ್ಲಿದ್ದಾರೆ. ಈ ಮಧ್ಯೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Bihar Chief Minister Nitish Kumar)ಅವರು ಮದ್ಯಪಾನ ಮಾಡುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಾರೆಲ್ಲ ಮದ್ಯ ಸೇವನೆ ಮಾಡುತ್ತಾರೋ ಅವರು ಮಹಾಪಾಪಿಗಳು. ಅಷ್ಟೇ ಅಲ್ಲ, ಬಾಪು (ಮಹಾತ್ಮ ಗಾಂಧಿ)ವಿನ ತತ್ವಗಳಿಗೆ ವಿಧೇಯರಾಗದೆ ಇರುವವರು ಭಾರತೀಯರೇ ಅಲ್ಲ ಎಂದು ಹೇಳಿದ್ದಾರೆ. ಬುಧವಾರ ಬಿಹಾರ ವಿಧಾನಸಭೆಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಯಾರಿಗೆ ಮಹಾತ್ಮ ಗಾಂಧಿಯವರ ತತ್ವ, ಆದರ್ಶದಲ್ಲಿ ನಂಬಿಕೆಯಿಲ್ಲವೋ, ಅವರನ್ನ ನಾವು ಭಾರತೀಯರು ಎಂದು ಪರಿಗಣಿಸಿಕೊಳ್ಳುವುದಿಲ್ಲ. ರಾಷ್ಟ್ರಪಿತನ ಮಾತಿಗೂ ಬೆಲೆ ಕೊಡದೆ ಇರುವವರು ಮಹಾ ಅಯೋಗ್ಯರು. ಮದ್ಯಪಾನ ಮಾಡುವವರು ಮಹಾಪಾಪಿಗಳು ಎಂದು ಹೇಳಿದ್ದಾರೆ.
ಮದ್ಯ ಸೇವನೆಗೆ ದಾಸರಾಗುವುದರಿಂದ ಏನೆಲ್ಲ ಸಮಸ್ಯೆಯಾಗುತ್ತದೆ. ಈ ಸಮಾಜಕ್ಕೆ, ರಾಷ್ಟ್ರಕ್ಕೆ ಅವರು ಹೇಗೆ ಮಾರಕರಾಗುತ್ತಾರೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಅಲ್ಕೋಹಾಲ್ ತ್ಯಜಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ನೀವು ನೋಡಿ, ನಮ್ಮ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ ಮೇಲೆ ತರಕಾರಿಗಳು ಹೇಗೆ ಮಾರಾಟವಾಗುತ್ತಿವೆ. ಸರಿಯಾಗಿ ಊಟವನ್ನೂ ಮಾಡುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಬಿಹಾರದದಲ್ಲಿ ಮಧ್ಯ ನಿಷೇಧವಾದ ಹೊರತಾಗಿಯೂ ಆಗಾಗ ಕಳ್ಳಭಟ್ಟಿ ಸೇವಿಸಿ ಸಾಯುವ ಘಟನೆ ನಡೆಯುತ್ತಲೇ ಇರುತ್ತದೆ. 2021ರಲ್ಲಿ ಆರು ತಿಂಗಳಲ್ಲಿ 60 ಜನರು ಕಳ್ಳಭಟ್ಟಿ ಸೇವಿಸಿ ಸತ್ತಿದ್ದಾರೆ. ಈ ಬಗ್ಗೆ ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದವು. ರಾಜ್ಯ ಸರ್ಕಾರ ಮದ್ಯ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ವಿಫಲವಾದ ಕಾರಣ ಹೂಚ್ (ಮದ್ಯ) ದುರಂತಗಳು ಆಗುತ್ತಿರುತ್ತವೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನಿತೀಶ್ ಕುಮಾರ್ ಇಷ್ಟೆಲ್ಲ ಮಾತನಾಡಿದ್ದಾರೆ. ಮದ್ಯ ಸೇವನೆ ಎಲ್ಲ ರೀತಿಯಿಂದಲೂ ಕೆಟ್ಟದ್ದು ಎಂದೂ ಗೊತ್ತಿದ್ದೂ, ಅದನ್ನು ಸೇವಿಸುತ್ತಾರಲ್ಲ ಅವರು ಮೂಢರು. ಉಂಟಾಗುವ ಎಲ್ಲ ಸಮಸ್ಯೆಗಳಿಗೂ ಅವರೇ ಹೊಣೆಯಾಗಿರುತ್ತಾರೆ. ಅದಕ್ಕೆ ನಮ್ಮ ರಾಜ್ಯ ಸರ್ಕಾರ ಜವಾಬ್ದಾರವಲ್ಲ ಎಂದೂ ಹೇಳಿದ್ದಾರೆ.
ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಮಸೂದೆ 2022 ನಿನ್ನೆ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಇದರಡಿಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿರುವ ಮದ್ಯ ನಿಷೇಧ ಕಾಯ್ದೆಯನ್ನು ಮೊದಲ ಬಾರಿಗೆ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಗೊಳಿಸಲಾಗಿದೆ. ಅಂದಹಾಗೇ 2016ರ ಬಿಹಾರ ನಿಷೇಧ ಮತ್ತು ಅಬಕಾರಿ ಕಾಯ್ದೆಯಡಿ, ಮದ್ಯ ತಯಾರಿಕೆ, ವ್ಯಾಪಾರ, ಸಂಗ್ರಹ, ವರ್ಗಾವಣೆ, ಮಾರಾಟ ಮತ್ತು ಸೇವನೆ ರಾಜ್ಯದಲ್ಲಿ ನಿಷೇಧಗೊಂಡಿದೆ.
ಇದನ್ನೂ ಓದಿ: ‘ಡೇಂಜರಸ್’ ಹುಡುಗಿಯರನ್ನು ಬೆಂಗಳೂರಿಗೆ ಕರೆತಂದು ಪರಿಚಯ ಮಾಡಿಸಿದ ರಾಮ್ ಗೋಪಾಲ್ ವರ್ಮಾ