ಭೋಪಾಲ್‌ನಲ್ಲಿ ದುರ್ಗಾ ದೇವಿಯ ಮೂರ್ತಿ ವಿಸರ್ಜನೆ ವೇಳೆ ಜನರ ಮೇಲೆ ಹರಿದ ಕಾರು; ಮೂವರಿಗೆ ಗಾಯ
Madhya Pradesh ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿದ್ದು, ಕಾರಿನ ಚಾಲಕನು ಅತಿ ವೇಗದಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸುತ್ತಿರುವುದು ಕಾಣಿಸುತ್ತದೆ.
ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶನಿವಾರ ತಡರಾತ್ರಿ ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ವೇಗವಾಗಿ ಹಿಮ್ಮುಖ ಚಲಿಸಿದ ಕಾರೊಂದು ಜನರ ಮೇಲೆ ಹರಿದು ಹದಿಹರೆಯ ಬಾಲಕ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿದ್ದು, ಕಾರಿನ ಚಾಲಕನು ಅತಿ ವೇಗದಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸುತ್ತಿರುವುದು ಕಾಣಿಸುತ್ತದೆ. ಆ ವೇಳೆ ಮಾರ್ಗದಿಂದ ದೂರ ಸರಿದು ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. 16 ವರ್ಷದ ಬಾಲಕನನ್ನು ಕಾರು ಎಳೆದೊಯ್ದಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಭೋಪಾಲ್ ರೈಲ್ವೇ ನಿಲ್ದಾಣದ ಹೊರಗಿನ ರಸ್ತೆಯಲ್ಲಿ ಮೆರವಣಿಗೆ ಮುಂದೆ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅವರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.
“ಭಕ್ತರು ಚಿತ್ರೀಕರಿಸಿದ ಸಿಸಿಟಿವಿ ಫೂಟೇಜ್ ಮತ್ತು ಕೆಲವು ವಿಡಿಯೊಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ” ಎಂದು ಡಿಐಜಿ ಭೋಪಾಲ್ ಇರ್ಷಾದ್ ವಾಲಿ ಹೇಳಿದರು. ಶನಿವಾರ ನಡೆದ ಎರಡನೇ ಘಟನೆ ಇದಾಗಿದೆ.
#WATCH Two people were injured after a car rammed into people during Durga idol immersion procession in Bhopal’s Bajaria police station area yesterday. Police said the car driver will be nabbed.#MadhyaPradesh pic.twitter.com/rEOBSbrkGW
— ANI (@ANI) October 17, 2021
ನೆರೆಯ ಛತ್ತೀಸ್‌ಗಡದ ಜಶ್‌ಪುರ ಜಿಲ್ಲೆಯಲ್ಲಿ ದೇವಿಯ ಮೆರವಣಿಗೆ ವೇಳೆ ಕಾರು ಹರಿದು ಓರ್ವ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
“ಜಶಪುರ ಘಟನೆ ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಲಾಯಿತು. ತಪ್ಪಿತಸ್ಥರೆಂದು ಕಂಡುಬಂದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ವಿಚಾರಣೆಗೆ ಆದೇಶಿಸಲಾಗಿದೆ. ಯಾರನ್ನೂ ಬಿಡುವುದಿಲ್ಲ. ಎಲ್ಲರಿಗೂ ನ್ಯಾಯವನ್ನು ನೀಡಲಾಗುತ್ತದೆ. ಅಗಲಿದವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ ” ಎಂದು ಬಘೇಲ್ ಟ್ವೀಟ್ ಮಾಡಿದ್ದಾರೆ.
ಛತ್ತೀಸ್‌ಗಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ನಂತರ ಯೋಧರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ