
ತಿರುಮಲ: ಶ್ರೀವಾರಿ ದರ್ಶನಕ್ಕಾಗಿ ತಿರುಮಲಕ್ಕೆ ದೇಶಾದ್ಯಂತದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಸುರಕ್ಷತೆಯನ್ನು ಕಾಯುವ ಹಿತದೃಷ್ಟಿಯಿಂದ ತಿರುಪತಿ ಜಿಲ್ಲಾ ಎಸ್ಪಿಯವರ ಆದೇಶದ ಮೇರೆಗೆ ಪೊಲೀಸರು ಪಾರ್ಕಿಂಗ್ ಪ್ರದೇಶಗಳಲ್ಲಿ ತೀವ್ರ ಭದ್ರತಾ ತಪಾಸಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ತಿರುಮಲದ ಪಾರ್ಕಿಂಗ್ ಸ್ಥಳಗಳಲ್ಲಿ ಕಾರುಗಳ ಗಾಜು ಒಡೆದು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪೊಲೀಸರು ಪಾರ್ಕಿಂಗ್ ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾಗ, ರಂಬಗೀಚಾ ಕಾರು ಪಾರ್ಕಿಂಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಅತ್ಯಂತ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಆತ ಪಶ್ಚಿಮ ಗೋದಾವರಿ ಜಿಲ್ಲೆಯ ರುದ್ರ ಶ್ಯಾಮ್ ಬಾಬು ಎಂದು ತಿಳಿದುಬಂದಿದೆ. ತೀವ್ರ ತನಿಖೆಯ ನಂತರ ಈತ ಕಳೆದ ಕೆಲವು ದಿನಗಳಿಂದ ತಿರುಮಲದಲ್ಲಿ ಎಸಗುತ್ತಿದ್ದ ಸರಣಿ ಕಳ್ಳತನದ ಕೃತ್ಯಗಳು ಸಾಕ್ಷಿ ಸಮೇತ ಹೊರಬಂದಿವೆ.
ಶ್ರೀವಾರಿ ದರ್ಶನಕ್ಕೆ ತೆರಳುವ ಮುನ್ನ ಭಕ್ತರು ತಮ್ಮ ಕಾರುಗಳಲ್ಲಿ ಬ್ಯಾಗ್, ನಗದು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಇತರ ದುಬಾರಿ ವಸ್ತುಗಳನ್ನು ಇಟ್ಟು ಹೋಗುವುದನ್ನೇ ಈತ ಕಣ್ಣಿಟ್ಟು ಕಾಯುತ್ತಿದ್ದ. ಪಾರ್ಕಿಂಗ್ ಪ್ರದೇಶದಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು, ಕಾರುಗಳ ಗಾಜುಗಳನ್ನು ಒಡೆದು ಒಳಗಿದ್ದ ಬೆಲೆಬಾಳುವ ವಸ್ತುಗಳನ್ನು ಅಪಹರಿಸುತ್ತಿದ್ದದ್ದು ತನಿಖೆಯಿಂದ ಸ್ಪಷ್ಟವಾಗಿದೆ.
ಆರೋಪಿಯು ರಂಬಗೀಚಾ ಪಾರ್ಕಿಂಗ್‌ನಲ್ಲಿ ಕಾರಿನ ಕಿಟಕಿ ಒಡೆದು ನಗದು ಕದ್ದಿದ್ದಲ್ಲದೆ, ಆಗಸ್ಟ್ 2 ರಂದು ನಾರಾಯಣಗಿರಿಯ ATGH ಬಳಿ ಕಾರಿನ ಕನ್ನಡಿ ಒಡೆದು ಲ್ಯಾಪ್‌ಟಾಪ್ ಬ್ಯಾಗ್ ದೋಚಿದ್ದ. ಅಷ್ಟೇ ಅಲ್ಲದೆ, ಆಗಸ್ಟ್ 3 ರಂದು VQC-1 ರ ಬಳಿಯ ಪವರ್ ಸಬ್‌ಸ್ಟೇಷನ್ ಹತ್ತಿರ ನಿಲ್ಲಿಸಿದ್ದ ಫಾರ್ಚೂನರ್ (TG-30-6666) ಕಾರಿನ ಕಿಟಕಿ ಒಡೆದು 3 ಐಫೋನ್‌ಗಳು, 1 ಐವಾಚ್ ಮತ್ತು 45,000 ರೂ. ನಗದನ್ನು ಕಳವು ಮಾಡಿದ್ದ. ಸದ್ಯ ಬಂಧಿತನಿಂದ 2 ಐಫೋನ್‌ಗಳು, 1 ಐವಾಚ್, ಗಾಜು ಒಡೆಯಲು ಬಳಸುತ್ತಿದ್ದ 2 ಉಪಕರಣಗಳು, ಡೆಲ್ ಬ್ಯಾಗ್ ಮತ್ತು ಅಪರಾಧಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು
ಈ ಘಟನೆಯ ಹಿನ್ನೆಲೆಯಲ್ಲಿ ತಿರುಪತಿ ಜಿಲ್ಲಾ ಎಸ್ಪಿಯವರು ತಿರುಮಲಕ್ಕೆ ಬರುವ ಭಕ್ತರಿಗೆ ಕೆಲವು ಪ್ರಮುಖ ಸುರಕ್ಷತಾ ಸೂಚನೆಗಳನ್ನು ನೀಡಿದ್ದಾರೆ. ಭಕ್ತರು ತಮ್ಮ ವಾಹನಗಳಲ್ಲಿ ನಗದು, ಚಿನ್ನಾಭರಣ, ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಮುಖ್ಯ ದಾಖಲೆಗಳನ್ನು ಬಿಟ್ಟು ಹೋಗಬಾರದು. ಅತ್ಯಗತ್ಯ ಸಂದರ್ಭಗಳಲ್ಲಿ ಇಡಲೇಬೇಕಾಗಿ ಬಂದರೆ, ಅವು ಹೊರಗಿನಿಂದ ಯಾರ ಕಣ್ಣಿಗೂ ಬೀಳದಂತೆ ಸುರಕ್ಷಿತ ಸ್ಥಳದಲ್ಲಿಡಬೇಕು. ಅಲ್ಲದೆ, ಬ್ಯಾಗ್‌ಗಳು ಅಥವಾ ವ್ಯಾಲೆಟ್‌ಗಳು ಕಾರಿನ ಸೀಟ್ ಮೇಲೆ ಎದ್ದು ಕಾಣುವಂತೆ ಇಡಬಾರದು ಎಂದು ಮನವಿ ಮಾಡಿದ್ದಾರೆ.
ವಾಹನಗಳನ್ನು ಲಾಕ್ ಮಾಡುವಾಗ ಎಲ್ಲಾ ಬಾಗಿಲುಗಳು ಮತ್ತು ಕಿಟಕಿಗಳು ಸರಿಯಾಗಿ ಲಾಕ್ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ರಸ್ತೆ ಬದಿ ಅಥವಾ ನಿರ್ಜನ ಪ್ರದೇಶಗಳಲ್ಲಿ ವಾಹನ ನಿಲ್ಲಿಸದೆ, ಭದ್ರತಾ ಸಿಬ್ಬಂದಿ ಹಾಗೂ CCTV ಕಣ್ಗಾವಲು ಇರುವ ಅಧಿಕೃತ ಪಾರ್ಕಿಂಗ್ ಪ್ರದೇಶಗಳನ್ನೇ ಬಳಸಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಅಥವಾ ಡಯಲ್ – 112 ಗೆ ಮಾಹಿತಿ ನೀಡುವಂತೆ ತಿಳಿಸಿರುವ ಪೊಲೀಸರು, ಭಕ್ತರ ಭದ್ರತೆಗೆ ಸಂಪೂರ್ಣ ಆದ್ಯತೆ ನೀಡಲಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ