ವಿಜಯವಾಡ, ಸೆಪ್ಟೆಂಬರ್ 22: ತಿರುಪತಿ ಶ್ರೀ ವೆಂಕಟೇಶ್ವರನ ಪ್ರಸಾದವಾಗಿ ನೀಡಲಾಗುವ ಲಡ್ಡುವಿನಲ್ಲಿ ಕಲಬೆರಕೆಯ ತುಪ್ಪವನ್ನು ಬಳಸಲಾಗಿದೆ ಎನ್ನುವ ಆರೋಪದಲ್ಲಿ ಚಂದ್ರಬಾಬು ನಾಯ್ಡು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ ಆಪಾದಿಸಿದ್ದಾರೆ. ಈ ವಿಚಾರವಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ವಿವರಿಸಿದ್ದಾರೆ. ಹಾಲಿ ಸರ್ಕಾರದ ವೈಫಲ್ಯಗಳನ್ನು ಬಚ್ಚಿಡಲು ಮುಖ್ಯಮಂತ್ರಿಗಳು ಆಡುತ್ತಿರುವ ನಾಟಕ ಇದು. ದೇವರ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ವಿಶ್ವಾದ್ಯಂತ ಇರುವ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ಧಾರೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸಿಎಂ ನಾಯ್ಡು ವಿರುದ್ಧ ಜಗನ್ ಟೀಕಾಪ್ರಹಾರ ಮಾಡಿರುವುದು ತಿಳಿದುಬಂದಿದೆ.
ದನಗಳು ಮತ್ತು ಹಂದಿಗಳ ಕೊಬ್ಬಿನ ಕಲಬೆರಕೆಯ ತುಪ್ಪದಿಂದ ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ತಯಾರಿಸಲಾಗಿದೆ ಎನ್ನುವುದು ಈಗಿರುವ ಆರೋಪ. ಲಡ್ಡು ತಯಾರಿಸಲು ಸಬರಾಜಾಗುವ ತುಪ್ಪದ ಸ್ಯಾಂಪಲ್ನ ಪರೀಕ್ಷೆಯಲ್ಲಿ ದನ ಮತ್ತು ಹಂದಿಯ ಮಾಂಸದ ಕೊಬ್ಬಿನ ಅಂಶಗಳನ್ನು ಬಳಸಿರುವುದು ದೃಢಪಟ್ಟಿದೆ. ಗುಜರಾತ್ನ ಲ್ಯಾಬ್ವೊಂದರಲ್ಲಿ ಇದರ ಪರೀಕ್ಷೆ ಮಾಡಲಾಗಿತ್ತು.
ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದ ಬಳಸದಿರಲು ನಿರ್ಧರಿಸಿದ ಕರ್ನಾಟಕದ ಅರ್ಚಕರು!
ಜಗನ್ಮೋಹನ್ ರೆಡ್ಡಿ ಸಿಎಂ ಆಗಿದ್ದ ಅವಧಿಯಲ್ಲಿ ತಿರುಪತಿ ಲಡ್ಡುವಿನ ಗುಣಮಟ್ಟ ಸರಿ ಇಲ್ಲ ಎಂದು ಟಿಡಿಪಿ ಚುನಾವಣೆಗೆ ಮುನ್ನವೇ ಸಾಕಷ್ಟು ಕಾಲದಿಂದ ಆರೋಪಿಸುತ್ತಾ ಬಂದಿತ್ತು. ನಾಯ್ಡು ಸಿಎಂ ಆದ ಬಳಿಕ ಟಿಟಿಡಿಯ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಬೇರೊಂದು ಮಂಡಳಿ ರಚಿಸಿ, ಲಡ್ಡುವಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದರು. ಈ ವೇಳೆ, ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪವು ಅಶುದ್ಧವೆಂಬುದು ಸಾಬೀತಾಗಿದೆ.
ಈಗ ಗುಜರಾತ್ನ ಎನ್ಡಿಡಿಬಿ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾದ ತುಪ್ಪದ ಸ್ಯಾಂಪಲ್ ಅನ್ನು ಟಿಟಿಡಿಯೂ (ತಿರುಮಲ ತಿರುಪತಿ ದೇವಸ್ಥಾನಮ್ಸ್) ಪರೀಕ್ಷೆ ನಡೆಸಿತ್ತು. ಗುಣಮಟ್ಟ ಸರಿ ಇಲ್ಲದ್ದರಿಂದ ಸ್ಯಾಂಪಲ್ ತಿರಸ್ಕರಿಸಿತ್ತು. ಈ ತುಪ್ಪವನ್ನು ಪ್ರಸಾದ ತಯಾರಿಕೆಗೆ ಬಳಸಿಯೇ ಇರಲಿಲ್ಲ ಎಂದು ಮಾಜಿ ಸಿಎಂ ವೈ.ಎಎಸ್. ಜಗನ್ ಮೋಹನ್ ರೆಡ್ಡಿ ವಾದಿಸಿದ್ದಾರೆ.
ದೇವಸ್ಥಾನದಲ್ಲಿ ಬಳಸಲಾಗುವ ತುಪ್ಪದ ಖರೀದಿ ಮತ್ತು ಗುಣಮಟ್ಟ ಪರೀಕ್ಷೆಗೆ ಸುವ್ಯವಸ್ಥೆ ಇದೆ. ಹಿಂದಿನಿಂದ ನಡೆಸಿಕೊಂಡು ಬರಲಾದ ವಿಧಾನಗಳನ್ನು ತಮ್ಮ ಆಡಳಿತದಲ್ಲೂ ಮುಂದುವರಿಸಲಾಗಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಒಂದು ಸ್ಯಾಂಪಲ್ನಲ್ಲಿ ದೋಷ ಕಂಡು ಬಂದರೆ ಇಡೀ ಟ್ಯಾಂಕರ್ ಅನ್ನು ತಿರಸ್ಕರಿಸಲಾಗುತ್ತಿತ್ತು ಎಂದು ಜಗನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆಂಧ್ರದ ಹಲವು ದೇವಸ್ಥಾನಗಳಲ್ಲಿ ಪ್ರಸಾದದ ಗುಣಮಟ್ಟ ಪರೀಕ್ಷೆಗೆ ಸೂಚನೆ
ರೆಡ್ಡಿ ಇಲ್ಲಿ ಇನ್ನೊಂದು ಪ್ರಮುಖ ಸಂಗತಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಹಸುಗಳ ಆಹಾರ ಪದ್ಧತಿ ಇತ್ಯಾದಿ ಅಂಶಗಳು ಗುಣಮಟ್ಟ ಪರೀಕ್ಷೆಯಲ್ಲಿ ಏರುಪೇರು ಉಂಟಾಗುವಂತೆ ಮಾಡಿರುವ ಸಾಧ್ಯತೆಯೂ ಇದೆ. ಹೀಗಾಗಿ, ಆ ವಿಚಾರ ಇಟ್ಟುಕೊಂಡು ಟಿಡಿಯಂಥ ಸಂಸ್ಥೆಯ ಪ್ರಾಮಾಣಿಕತೆ ಹಾಗೂ ಕೋಟ್ಯಂತರ ಭಕ್ತರ ನಂಬಿಕೆಗೆ ಅಪಚಾರ ಎಸಗುವುದು ಸರಿಯಲ್ಲ ಎಂದು ಜಗನ್ ಸಿಡಿಗುಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ