Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಡ್ಡು ವಿವಾದ ಬೆನ್ನಲ್ಲೇ ನಂದಿನಿ ತುಪ್ಪ ಹೊತ್ತು ತಿರುಪತಿಗೆ ಹೋಗುವ ಟ್ಯಾಂಕರ್​ಗಳಿಗೆ ಜಿಪಿಎಸ್ ಅಳವಡಿಕೆ

ಪ್ರಸಿದ್ಧ ತಿರುಪತಿ ತಿರುಮಲ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣದ ತುಪ್ಪ ಬಳಕೆ ಮಾಡಿರುವುದು ಈಗಾಗಲೇ ಎಫ್​ಎಸ್​ಎಲ್​ ವರದಿಯಲ್ಲಿ ದೃಢವಾಗಿದ್ದು, ಈ ಬಗ್ಗೆ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇನ್ನೊಂದೆಡೆ ಲಡ್ಡು ಖರೀದಿ ಬಗ್ಗೆ ಭಕ್ತರಲ್ಲಿ ಗೊಂದಲ ಉಂಟಾಗಿದೆ. ಇದರ ಮಧ್ಯ ಕರ್ನಾಟಕದ ಕೆಎಂಎಫ್​​ನ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕೆಎಂಎಫ್​ಗೆ ತನ್ನ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಮುಂಜಾಗ್ರತವಾಗಿ ತಿರುಪತಿಗೆ ರವಾನಿಸುವ ತುಪ್ಪದ ಟ್ಯಾಂಕರ್‌ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಲು ಪ್ಲ್ಯಾನ್ ಮಾಡಿದೆ.

ಲಡ್ಡು ವಿವಾದ ಬೆನ್ನಲ್ಲೇ ನಂದಿನಿ ತುಪ್ಪ ಹೊತ್ತು ತಿರುಪತಿಗೆ ಹೋಗುವ ಟ್ಯಾಂಕರ್​ಗಳಿಗೆ ಜಿಪಿಎಸ್ ಅಳವಡಿಕೆ
ನಂದಿನಿ ತುಪ್ಪ
Follow us
ರಮೇಶ್ ಬಿ. ಜವಳಗೇರಾ
|

Updated on:Sep 22, 2024 | 5:50 PM

ಬೆಂಗಳೂರು, (ಸೆಪ್ಟೆಂಬರ್ 22): ತಿರುಪತಿ ಲಡ್ಡು ಪಾವಿತ್ರ್ಯತೆಗೆ ಧಕ್ಕೆ ವಿವಾದದ ಬೆನ್ನಲ್ಲೇ ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಹೌದು.. ತಿರುಪತಿ ಲಡ್ಡು ವಿವಾದ ಮಧ್ಯಯೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್​​ಗೆ ಟಿಟಿಡಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್‌ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತಿರುಮಲಕ್ಕೆ ಕಳುಹಿಸುವ ತುಪ್ಪದ ಟ್ಯಾಂಕರ್‌ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಲು ಮುಂದಾಗಿದೆ.

ಈ ಹಿಂದೆ ವಾರಕ್ಕೆ ಮೂರು ಟ್ಯಾಂಕರ್‌ಗಳನ್ನ ಆಮದು ಮಾಡಿಕೊಳ್ಳಲಾಗುತ್ತಿತ್ತು. ಒಟ್ಟಾರೆ 3 ತಿಂಗಳಿಗೆ 350 ಟನ್‌ ತುಪ್ಪ ನೀಡುವಂತೆ ಕೆಎಂಎಫ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಿಂದೆ ಟಿಟಿಡಿ ಮಾಡಿಕೊಂಡ ಒಪ್ಪಂದ ಇನ್ನೂ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ ಪ್ರತಿನಿತ್ಯ ಒಂದೊಂದು ಟ್ಯಾಂಕರ್‌ ತುಪ್ಪ ತರಿಸಿಕೊಳ್ಳಲು 6 ತಿಂಗಳ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

ಜಿಪಿಎಸ್​ ಬಗ್ಗೆ ಕೆಎಂಎಫ್​​ ಎಂಡಿ ಸ್ಪಷ್ಟನೆ

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಟಿವಿ9ಗೆ ಕೆಎಂಎಫ್​​ ಎಂಡಿ ಜಗದೀಶ್​ ಪ್ರತಿಕ್ರಿಯಿಸಿದ್ದು, ಟಿಟಿಡಿಗೆ ತೆರಳುವ ನಂದಿನಿ ತುಪ್ಪದ ವಾಹನಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ವಾಹನಗಳಿಗೆ ಜಿಪಿಎಸ್​ GPS ಟ್ರ್ಯಾಕ್, ಎಲೆಕ್ಟ್ರಿಕ್​ ಡೋರ್ ಅಳವಡಿಲಾಗಿದೆ. ಲ್ಯಾಬ್​ ಟೆಸ್ಟ್​ ಮಾಡಿದ ಬಳಿಕ ನಂದಿನ ತುಪ್ಪ ಪೂರೈಸಲಾಗುತ್ತೆ. ಈ ಹಿಂದೆ ಇದ್ದ ಸರ್ಕಾರದಲ್ಲಿ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿರಲಿಲ್ಲ. ಇದೀಗ ಟಿಟಿಡಿ ಬೇಡಿಕೆ ಮೇರೆಗೆ ನಂದಿನಿ ತುಪ್ಪ ಪೂರೈಕೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮುಜರಾಯಿ ದೇಗುಲಗಳಿಗೆ ನಂದಿನಿ ತುಪ್ಪ ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಬೇರೆ ರಾಜ್ಯಗಳಿಂದಲೂ ನಂದಿನ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ ಹೀಗಾಗಿ ಪ್ರತಿದಿನ 15 ಲಕ್ಷ ಲೀಟರ್ ಹಾಲಿನಿಂದ ನಂದಿನಿ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೆ ತಿರುಪತಿಗೆ ಯಾಕೆ ತುಪ್ಪ ಪೂರೈಸುತ್ತಿಲ್ಲ ಎಂದು ಕೇಳುತ್ತಿದ್ದರು. ಇಂದು ತಿಮ್ಮಪ್ಪನ ಕೃಪೆಯಿಂದ ಹೆಚ್ಚು ತುಪ್ಪ ಪೂರೈಕೆ ಮಾಡುತ್ತಿದ್ದೇವೆ. ಇದು ಕೆಎಂಎಫ್​​ನ ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 ಜಿಪಿಎಸ್ ವಿಶೇಷತೆ?

  •  ಟಿಟಿಡಿಗೆ ಕೆಎಂಎಫ್‌ನಿಂದ ಸರಕು ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ.
  •  ತುಪ್ಪ ಇರುವ ಟ್ಯಾಂಕರ್‌ಗೆ ಜಿಪಿಎಸ್ ಸ್ಕ್ಯಾನರ್ ಲಾಕ್ ಅಳವಡಿಕೆ.
  •  ಇಲ್ಲಿ ಟ್ಯಾಂಕರ್ ಒಮ್ಮೆ ಲಾಕ್ ಆದ್ರೆ ಟಿಟಿಡಿಯಲ್ಲಿಯೇ ಓಪನ್ ಮಾಡಲು ಅವಕಾಶ.
  •  ಟಿಟಿಡಿಯಲ್ಲಿ ಓಪನ್ ಮಾಡಬೇಕು ಅಂದ್ರೆ ಪಾಸ್ ವರ್ಡ್ ಕಡ್ಡಾಯ.
  •  ಟ್ಯಾಂಕರ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಕೆಎಂಎಫ್ ಅಧಿಕಾರಿಗಳಿಗೆ ಒಟಿಪಿ ರವಾನೆ.
  •  ಒಟಿಪಿ ನಂಬರ್ ಹೇಳಿದ್ರೆ ಮಾತ್ರ ಓಪನ್ ಆಗಲಿರುವ ತುಪ್ಪದ ಟ್ಯಾಂಕರ್.

ಇಷ್ಟೊಂದು ಎಚ್ಚರಿಕೆ ಯಾಕೆ?

ಇನ್ನು ತಿರುಪತಿಗೆ ತುಪ್ಪ ಸರಬರಾಜು ಮಾಡುವ ಟ್ಯಾಂಕರ್​​ಗಳಿಗೆ ಏಕೆ ಜಿಪಿಎಸ್​ ಟ್ರ್ಯಾಕರ್ ಅಳವಡಿಕೆ ಮಾಡಲಾಗುತ್ತಿದೆ ಎನ್ನುವುದುನ್ನು ನೋಡುವುದಾದರೆ, ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಕ್ಸ್ ಮಾಡಲಾಗಿದೆ ಎನ್ನುವ ಅಂಶ ವರದಿಯಿಂದ ತಿಳಿದುಬಂದಿದೆ, ಆದ್ರೆ, ಈ ಹಿಂದಿನ ಜಗನ್​ ಸರ್ಕಾರ ಆರೋಪವನ್ನು ಅಲ್ಲಗೆಳೆದಿದೆ. ಇದೀಗ ಇಂತಹ ಆರೋಪಗಳು ಮುಂದೆ ಕೆಎಂಎಫ್​ ತುಪ್ಪದ ಮೇಲೆ ಬರಹುದು ಎನ್ನುವ ಕಾರಣಕ್ಕೆ ಮುಂಜಾಗ್ರತೆಗಾಗಿ ಈ ಕ್ರಮ ಅನುಸರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮಾರ್ಗ ಮಧ್ಯ ತುಪ್ಪದ ಟ್ಯಾಂಕರ್ ನಿಲ್ಲಿಸಿ ರಾಜಕೀಯ ಲಾಭಕ್ಕಾಗಿ ಏನಾದರೂ ಕಲಬೆರಿಕೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಕೆಎಂಎಫ್​ ಈ ಮುಂಜಾಗ್ರತೆ ವಹಿಸಿದೆ.

Published On - 5:37 pm, Sun, 22 September 24