ಸುವೇಂದು ಅಧಿಕಾರಿ-ತುಷಾರ್ ಮೆಹ್ತಾ ಭೇಟಿಗೆ ಟಿಎಂಸಿ ಆಕ್ಷೇಪ: ಸಾಲಿಸಿಟರ್ ಜನರಲ್ ಹುದ್ದೆಯಿಂದ ಮೆಹ್ತಾ ವಜಾಕ್ಕೆ ಒತ್ತಾಯಿಸಿ ನರೇಂದ್ರ ಮೋದಿಗೆ ಪತ್ರ
ನಾರದ ಪ್ರಕರಣ ಮತ್ತು ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿರುವ ಸುವೇಂದು ಅಧಿಕಾರಿ ಅವರನ್ನು ತುಷಾರ್ ಮೆಹ್ತಾ ಭೇಟಿಯಾಗಿದ್ದರು ಎನ್ನುವುದು ಈ ಒತ್ತಾಯಕ್ಕೆ ಪ್ರಮುಖ ಕಾರಣ. ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಈ ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿವೆ.
ಕೊಲ್ಕತ್ತಾ: ತುಷಾರ್ ಮೆಹ್ತಾ ಅವರನ್ನು ಸಾಲಿಸಿಟರ್ ಜನರಲ್ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇದ್ರ ಮೋದಿ ಅವರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಪತ್ರ ಬರೆದಿದ್ದಾರೆ. ನಾರದ ಪ್ರಕರಣ ಮತ್ತು ಶಾರದಾ ಚಿಟ್ ಫಂಡ್ ಹಗರಣದಲ್ಲಿ ಆರೋಪಿಯಾಗಿರುವ ಸುವೇಂದು ಅಧಿಕಾರಿ ಅವರನ್ನು ತುಷಾರ್ ಮೆಹ್ತಾ ಭೇಟಿಯಾಗಿದ್ದರು ಎನ್ನುವುದು ಈ ಒತ್ತಾಯಕ್ಕೆ ಪ್ರಮುಖ ಕಾರಣ. ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಈ ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿವೆ.
ಈ ಕುರಿತು ಡೆರೆಕ್ ಒ ಬ್ರೇನ್, ಸುಖೇಂದು ಶೇಖರ್ ರಾಯ್ ಮತ್ತು ಮಹುವಾ ಮೊಯಿತ್ರಾ ಬರೆದ ಪತ್ರದ ಒಕ್ಕಣೆ ಹೀಗಿದೆ..
‘ಅಟಾರ್ನಿ ಜನರಲ್ ನಂತರ ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಎನಿಸಿರುವ ಸಾಲಿಸಿಟರ್ ಜನರಲ್ ಭಾರತ ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳಿಗೆ ಹಲವು ಮುಖ್ಯ ವಿಚಾರಗಳಲ್ಲಿ ಕಾನೂನು ಸಲಹೆಗಳನ್ನು ನೀಡುತ್ತಾರೆ. ನಾರದಾ ಮತ್ತು ಶಾರದಾ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ಇವರು ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಿರುತ್ತಾರೆ. ಹೀಗಿರುವಾಗ ಆರೋಪಿಯೊಂದಿಗೆ ಸಾಲಿಸಿಟರ್ ಜನರನ್ ಭೇಟಿಯು ಅಕ್ಷಮ್ಯ ಅಪರಾಧ ಎನಿಸುತ್ತದೆ. ಆರೋಪಿಯ ವಿಚಾರಣೆ ನಡೆಸುವ ತನಿಖಾ ಸಂಸ್ಥೆಗಳಿಗೆ ಸಲಹೆ ಕೊಡುವ ಹುದ್ದೆಯಲ್ಲಿರುವವರು ಅರೋಪಿಯನ್ನು ಭೇಟಿಯಾಗುವುದು ತಪ್ಪು. ಇದು ಅವರ ಶಾಸನಬದ್ಧ ಕರ್ತವ್ಯಗಳಿಗೆ ವಿರೋಧಾಭಾಸವಾಗುವ ನಡವಳಿಕೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸುವೇಂದು ಅಧಿಕಾರಿ ಮತ್ತು ತುಷಾರ್ ಮೆಹ್ತಾ ಅವರ ಭೇಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಜನರು ಪ್ರಶ್ನಿಸಿದ್ದರು. ಈ ಕುರಿತು ದಿನಪತ್ರಿಕೆಗಳಲ್ಲಿ ಸುದ್ದಿ ಸಹ ಪ್ರಕಟವಾಗಿತ್ತು. ಈ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಉಲ್ಲೇಖಗಳನ್ನು ಟಿಎಂಟಿ ನಾಯಕರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ವರದಿಗಳನ್ನು ಆಧರಿಸಿ ಹೇಳುವುದಾದರೆ ಇಂಥದ್ದೊಂದು ಭೇಟಿ ನಡೆದಿದೆ ಎಂದು ನಂಬಲು ಸಾಕಷ್ಟು ಆಧಾರಗಳಿವೆ. ಸುವೇಂದು ಅಧಿಕಾರಿಯನ್ನು ರಕ್ಷಿಸುವ ಉದ್ದೇಶದಿಂದ ತನಿಖಾ ಸಂಸ್ಥೆಗಳ ಮೆಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆಯುತ್ತಿವೆ. ಸಾಲಿಸಿಟರ್ ಜನರಲ್ರಂಥ ಉನ್ನತ ಸ್ಥಾನವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ತಪ್ಪು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಭೇಟಿಯು ತಪ್ಪು ಮಾತ್ರವಲ್ಲ ಸಾಲಿಸಿಟರ್ ಜನರಲ್ ಸ್ಥಾನದಲ್ಲಿರುವವರ ಪ್ರಾಮಾಣಿಕತೆಯ ಬಗ್ಗೆಯೂ ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ. ಸಾಲಿಸಿಟರ್ ಜನರಲ್ ಸ್ಥಾನದಲ್ಲಿರುವವರ ಬದ್ಧತೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವ ಸಾಧ್ಯತೆಯಿರುವುದರಿಂದ ತುಷಾರ್ ಮೆಹ್ತಾ ಅವರನ್ನು ಸಾಲಿಸಿಟರ್ ಜನರಲ್ ಸ್ಥಾನದಿಂದ ತಕ್ಷಣ ವಜಾ ಮಾಡಬೇಕು ಎಂದು ತಮ್ಮನ್ನು ಕೋರುತ್ತೇವೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸಿದ್ದಾರೆ.
(TMC Leaders Write To Prime Minister Narendra Modi Seeking Removal Of Tushar Mehta From Post Of Solicitor General)
ಇದನ್ನೂ ಓದಿ: ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿಕೆ; ಈ ಬಗ್ಗೆ ವಿಚಾರಣೆ ನಡೆಸಲು ಅವಸರವೇನಿಲ್ಲ ಎಂದ ಕೇಂದ್ರ
ಇದನ್ನೂ ಓದಿ: ಹೈಕೋರ್ಟ್ಗಳು ಪೂರ್ವಾಲೋಚನೆಯಿಲ್ಲದೆ ಗಂಭೀರ ಸ್ವರೂಪದ ಕಾಮೆಂಟ್ ಮಾಡುವುದು ಸರಿಯಲ್ಲ: ಸುಪ್ರೀಮ್ ಕೋರ್ಟ್