Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಕೋರ್ಟ್​​ಗಳು ಪೂರ್ವಾಲೋಚನೆಯಿಲ್ಲದೆ ಗಂಭೀರ ಸ್ವರೂಪದ ಕಾಮೆಂಟ್​ ಮಾಡುವುದು ಸರಿಯಲ್ಲ: ಸುಪ್ರೀಮ್ ಕೋರ್ಟ್

ನಾಲ್ಕು ತಾಸುಗಳ ಕಾಲ ನಡೆದ ವಿಚಾರಣೆ ಮುಗಿಯುವ ಹಂತಕ್ಕೆ ಬಂದಾಗ ಸಾಲಿಸಿಟರ್​ ಜನರಲ್ ತುಷಾರ್ ಮೆಹ್ತಾ ಅವರು, ಕೊವಿಡ್-19 ಸಂಬಂಧಿಸಿದ ವಿಚಾರಣೆಗಳನ್ನು ನಡೆಸುವಾಗ ಕೆಲವು ಹೈಕೋರ್ಟ್​ಗಳು ಮಾಡಿದ ತೀವ್ರ ಸ್ವರೂಪದ ಕಾಮೆಂಟ್​ಗಳ ಬಗ್ಗೆ ಪೀಠದ ಗಮನ ಸೆಳೆದರು.

ಹೈಕೋರ್ಟ್​​ಗಳು ಪೂರ್ವಾಲೋಚನೆಯಿಲ್ಲದೆ ಗಂಭೀರ ಸ್ವರೂಪದ ಕಾಮೆಂಟ್​ ಮಾಡುವುದು ಸರಿಯಲ್ಲ: ಸುಪ್ರೀಮ್ ಕೋರ್ಟ್
ಸುಪ್ರೀಂ​ ಕೋರ್ಟ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: Apr 30, 2021 | 9:06 PM

ನವದೆಹಲಿ:  ವಿಚಾರಣೆಗಳು ಜಾರಿಯಲ್ಲಿರುವ ಸಂದರ್ಭಗಳಲ್ಲಿ ಹೈಕೋರ್ಟ್​ಗಳು ಪೂರ್ವಾಲೋಚನೆಯಿಲ್ಲದೆ ಗಂಭೀರ ಸ್ವರೂಪದ ಟೀಕೆಗಳನ್ನು ಮಾಡಿದರೆ ಅವು ಸಂಬಂಧಪಟ್ಟ ವ್ಯಕ್ತಿಗಳಿಗೆ ಹಾನಿಯನ್ನುಂಟು ಮಾಡುತ್ತವಲ್ಲದೆ ಅವರ ಬಗ್ಗೆ ಜನರಲ್ಲಿ ತಪ್ಪು ಆಭಿಪ್ರಾಯ ಮೂಡಿಸುತ್ತವೆ ಎಂದು ಶುಕ್ರವಾರದಂದು ಕೊವಿಡ್​-19ಗೆ ಸಂಬಂಧಿಸಿದ ವಿಷಯಗಳ ಸುವೋ ಮೋಟೊ ಪ್ರಕರಣವನ್ನು ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ಸುಪ್ರೀಮ್ ಕೋರ್ಟ್​ ಪೀಠ ಅಭಿಪ್ರಾಯಪಟ್ಟಿತು.

ನಾಲ್ಕು ತಾಸುಗಳ ಕಾಲ ನಡೆದ ವಿಚಾರಣೆ ಮುಗಿಯುವ ಹಂತಕ್ಕೆ ಬಂದಾಗ ಸಾಲಿಸಿಟರ್​ ಜನರಲ್ ತುಷಾರ್ ಮೆಹ್ತಾ ಅವರು, ಕೊವಿಡ್-19 ಸಂಬಂಧಿಸಿದ ವಿಚಾರಣೆಗಳನ್ನು ನಡೆಸುವಾಗ ಕೆಲವು ಹೈಕೋರ್ಟ್​ಗಳು ಮಾಡಿದ ತೀವ್ರ ಸ್ವರೂಪದ ಕಾಮೆಂಟ್​ಗಳ ಬಗ್ಗೆ ಪೀಠದ ಗಮನ ಸೆಳೆದರು.

‘ಮಾನ್ಯರೆ, ತಾವು ಅವಿಭಜಿತ ಹಿಂದೂ ಕುಟುಂಬದ ಕರ್ತನ ಸಾಮರ್ಥದ್ಯಲ್ಲ್ಲಿರುವುದರಿಂದ ನಾನು ಈ ಮನವಿಯನ್ನು ಮಾಡುತ್ತಿದ್ದೇನೆ. ಕೆಲವು ಮನವಿಗಳಲ್ಲಿ ಮತ್ತು ರಿಟ್​ ಅರ್ಜಿಗಳಲ್ಲಿ ಗಂಭೀರ ಸ್ವರೂಪದ ಕಾಮೆಂಟ್​ಗಳನ್ನು ಮಾಡಲಾಗಿದ್ದು, ಅವು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಅಂಥ ಕಾಮೆಂಟ್​ಗಳನ್ನು ಹೈಕೋರ್ಟ್​ಗಳಲ್ಲಿ ಮಾಡಲಾಗಿದೆ. ಅವುಗಳ ಅವಶ್ಯಕತೆಯಿರಲಿಲ್ಲ,’ ಎಂದು ತುಷಾರ್​ ಮೆಹ್ತಾ ಹೇಳಿದರು.

‘ಯಾವುದೇ ಒಂದು ಆದೇಶವನ್ನು ಅಪ್​ಲೋಡ್​ ಮಾಡುವ ಮೊದಲು, ನಾವು ಅದನ್ನು ಬಹಳ ಜಾಗ್ರತೆಯಿಂದ ನೋಡುತ್ತೇವೆ,’ ಎಂದು ನ್ಯಾಯಮೂರ್ತಿ ಚಂದ್ರಚೂಡ್​ ಅವರು ಹೇಳುತ್ತಿರುವಾಗಲೇ ಮೆಹ್ತಾ ಅವರು ಮಧ್ಯೆ ಪ್ರವೇಶಿಸಿದರು.

‘ಇಲ್ಲ ಪ್ರಭುಗಳೇ, ನಾನು ತಮ್ಮ ಬಗ್ಗೆ ಸರ್ವಥಾ ಮಾತಾಡುತ್ತಿಲ್ಲ, ತಾವು ಅವಿಭಜಿತ ಹಿಂದೂ ಕುಟುಂಬದ ಕರ್ತನ ಪಾತ್ರ ನಿಭಾಯಿಸುತ್ತಿರುವದರಿಂದ ಕೆಲವು ಹೈಕೋರ್ಟ್​ಗಳಲ್ಲಿ ಹೀಗೆ ಆಗುತ್ತದೆ ಅನ್ನುದನ್ನಷ್ಟೇ ತಮ್ಮ ಗಮನಕ್ಕೆ ತರುವುದು ನನ್ನ ಇಚ್ಛೆಯಾಗಿದೆ. ಕೋರ್ಟುಗಳ ಕಾಳಜಿ ಎಲ್ಲರಿಗೂ ಅರ್ಥವಾಗುತ್ತದೆ, ಆದರೆ ಕೊವಿಡ್​ ಸೃಷ್ಟಿಸಿರುವ ಈಗಿನ ಭೀಕರ ವಾತಾವರಣದಲ್ಲಿ ನಾವು ಬಹಳ ಜಾಗರೂಕತೆಯಿಂದ ಮಾತಾಡಬೇಕಾಗುತ್ತದೆ. ವಕೀಲರಾಗಿರುವ ನಾನು ಸಹ ಬಹಳ ಜಾಗರೂಕತೆಯಿಂದ ಮಾತಾಡಬೇಕಿದೆ,’ ಎಂದು ಮೆಹ್ತಾ ಹೇಳಿದರು.

ಬಿಹಾರ ಸರ್ಕಾರದ ಪರವಾಗಿ ಕೋರ್ಟಿನಲ್ಲಿ ಹಾಜರಿದ್ದ ಹಿರಿಯ ವಕೀಲ ರಂಜಿತ್ ಕುಮಾರ್ ಅವರು ಸಾಲಿಸಿಟರ್ ಜನರಲ್ ಅವರ ಮನವಿಗೆ ಬೆಂಬಲ ಸೂಚಿಸಿದರು.

‘ಕೆಲವು ಹೈಕೋರ್ಟ್​ಗಳು ಕರ್ತವ್ಯದ ಮೇಲಿರುವ ಎಲ್ಲ ಅಧಿಕಾರಿಗಳನ್ನು ಜರಿಯುವ ಹಂತಕ್ಕೆ ಹೋಗಿವೆ. ಇದು ಬಹಳ ವಿಷಾದಕರ ಮತ್ತು ಅಧಿಕಾರಿಗಳ ಮನಸ್ಥೈರ್ಯವನ್ನು ಕುಗ್ಗಿಸುವಂಥದ್ದು. ಅವರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಮತ್ತು ಕೆಲಸ ಮಾಡುವ ಸಾಮರ್ಥ್ಯವೇ ಅವರಲ್ಲಿಲ್ಲ ಎಂದು ಹೇಳುವ ಮಟ್ಟಿಗೆ ಹೈಕೋರ್ಟ್​ಗಳು ಹೋಗಿವೆ,’ ಎಂದು ಕುಮಾರ್ ಹೇಳಿದರು.

‘ನೀವು ಹೇಳಿದ್ದು ನನಗರ್ಥವಾಯಿತು ಮತ್ತು ಯಾವ ವಿಷಯಕ್ಕೆ ಸಂಬಂಧಿಸಿದಂತೆ ನೀವು ಮಾತಾಡುತ್ತಿರುವಿರಿ ಎನ್ನುವುದು ಸಹ ಗೊತ್ತಾಯಿತು. ನಾವೆಲ್ಲ ಬಾರ್​ ಕೌನ್ಸಿಲ್ ಸದಸ್ಯರಾಗಿರುವುದರಿಂದ ನಮಗೆ ಗೊತ್ತಿರುವ ವಿಚಾರವೇನೆಂದರೆ ನ್ಯಾಯಾಧೀಶರು ಕೋರ್ಟುಗಳಲ್ಲಿ ಏನನ್ನಾದರೂ ಹೇಳುವುದು ವಕೀಲರಿಂದ ಲಭ್ಯವಾಗುವ ಮಾಹಿತಿಯನ್ನೇ ಪುನರುಚ್ಛರಿಸಿದಂತೆ ಮತ್ತು ಅವರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದಕ್ಕಾಗಿರುತ್ತದೆ. ಇದು ಮುಕ್ತ ಮಾತುಕತೆಗೆ ವೇದಿಕೆಯಾಗುತ್ತದೆ. ಇದು ಯಾವುದೇ ಒಂದು ವಿಷಯವನ್ನು ಅಂತ್ಯಗೊಳಿಸುವುದಿಲ್ಲ, ಇದು ವಕೀಲನ ಪ್ರಸ್ತಾವನೆ ಮತ್ತು ಅದರ ಮತ್ತೊಂದು ಭಾಗವನ್ನು ಪರೀಕ್ಷಿಸುವುದಕ್ಕಾಗಿದೆ, ಎಂದು ಹೇಳಿದ ನ್ಯಾಯಮೂರ್ತಿ ಚಂದ್ರಚೂಡ್​ ಅವರು, ‘ನಾವು ಯಾವುದೇ ವಕೀಲನ ವಿರೋಧಿಗಳಲ್ಲ. ಮೆಹ್ರಾ (ರಾಹುಲ್ ಮೆಹ್ರಾ-ಜಿಎನ್​ಸಿಟಿಡಿ ಪರ ವಕೀಲ) ಅವರು ವಾದಿಸುವಾಗಲೂ ಅವರು ಎಲ್ಲಿ ಪ್ರಮಾದವೆಸಗುತ್ತಿದ್ದಾರೆ ಎನ್ನುವುದನ್ನು ಅವರ ಗಮನಕ್ಕೆ ತರುತ್ತೇವೆ. ಅಂತಿಮವಾಗಿ ನಾವು ಅವರು ತಪ್ಪು ಎಂದು ಯಾವತ್ತೂ ಹೇಳುವುದಿಲ್ಲ. ಇದೇ ಮಾತು ಸಾಲಿಸಿಟರ್ ಜನರಲ್ ಅವರು ವಾದಿಸುವಾಗಲೂ ಅನ್ವಯಿಸುತ್ತದೆ,’ ಎಂದರು.

‘ನಾವು ಒಂದು ಹೊಸ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂಬ ಅಂಶವನ್ನು ನ್ಯಾಯಾಧೀಶರುಗಳಾಗಿ ನಾವು ಅರ್ಥಮಾಡಿಕೊಳ್ಳಬೇಕು. ನಾವಾಡುವ ಪ್ರತಿ ಮಾತು ಸೋಷಿಯಲ್ ಮೀಡಿಯಾ ಇಲ್ಲವೇ ಟ್ವಿಟ್ಟರ್​ನ ಭಾಗವಾಗಿಬಿಡುತ್ತದೆ. ನಾವು ಹೇಳುವುದಿಷ್ಟೇ, ನ್ಯಾಯಾಧೀಶರಾಗಿ ನಾವು ಒಂದು ಹಂತದ ಗೌರವಪೂರ್ಣ ನಿಯಂತ್ರಣವನ್ನು ನಿರೀಕ್ಷಿಸುತ್ತೇವೆ,’ ಎಂದು ನ್ಯಾಯಮೂರ್ತಿ ಚಂದ್ರಚೂಡ್​ ಹೇಳಿದರು.

‘ಅದರಲ್ಲೂ ನಿರ್ದಿಷ್ಟವಾಗಿ ಸೂಕ್ಷ್ಮವಾದ ವಿಚಾರಗಳಲ್ಲಿ ನಾವು ಸ್ವಲ್ಪಮಟ್ಟಿನ ಜಾಗ್ರತೆ ಮತ್ತು ನಿಯಂತ್ರಣವನ್ನು ಪ್ರಯೋಗಿಸುತ್ತೇವೆ. ನಾವು ಮಾಡುವ ಕಾಮೆಂಟ್​ಗಳ ಬಗ್ಗೆ ಹೆದರಿಕೆ ಅಂತಲ್ಲ. ಅದನ್ನು ಮಾಡಲು ನಾವು ಸ್ವತಂತ್ರರಾಗಿದ್ದೇವೆ. ನಮ್ಮನ್ನು ನಾವು ಯಾಕೆ ನಿಯಂತ್ರಿಸಿಕೊಳ್ಳೊತ್ತೇವೆ ಅಂದರೆ ಪೂರ್ವಾಲೋಚನೆಯಿಲ್ಲದೆ ಮಾಡುವ ಕಾಮೆಂಟ್​​ಗಳು ಖಾಸಗಿ ವ್ಯಕ್ತಿಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ,’ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ಹೈಕೋರ್ಟೊಂದರ ಒಂದು ತೀರ್ಪನ್ನು ನಾವು ಖಂಡಿಸುವಾಗಲೂ ನಮ್ಮ ಹೃದಯದಲ್ಲಿರುವುದನ್ನು ಹೇಳದೆ ನಮ್ಮ ಮೇಲೆ ಹಿಡಿತ ಸಾಧಿಸಿಕೊಳ್ಳುತ್ತೇವೆ. ಇಂಥ ಸಂಗತಿಗಳನ್ನು ನಿರ್ವಹಿಸಲು ಹೈಕೋರ್ಟ್​ಗಳಿಗೆ ನೀಡಲಾಗಿರುವ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ನಾವು ಹೇಳುವುದೇನೆಂದರೆ ಅವು ಗಂಭೀರ ಸ್ವರೂಪದ ಟೀಕೆಗಳನ್ನು ಮಾಡದ ಹಾಗೆ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಮತ್ತು ಅವಶ್ಯಕವೆನಿಸದ ಕಾಮೆಂಟ್​ ಮಾಡಬಾರದು,’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಇದನ್ನೂ ಓದಿ: ರಾಜ್ಯಪಾಲ ಹುದ್ದೆಗೋಸ್ಕರ ಹೈಕೋರ್ಟ್ ಮಾಜಿ ನ್ಯಾಯಾಧೀಶರು ಓರ್ವ ಮಧ್ಯವರ್ತಿಗೆ ಲಂಚ ನೀಡುವುದು ಖೇದಕರ; ಹೈಕೋರ್ಟ್