
ಭಾಗಲ್ಪುರ, ಅಕ್ಟೋಬರ್ 13: ಚಲಿಸುತ್ತಿದ್ದ ರೈಲಿನಲ್ಲಿ ಕಿಟಕಿಯಿಂದ ಕೈಹಾಕಿ ಪ್ರಯಾಣಿಕರ ಮೊಬೈಲ್ ಕದಿಯಲು ಹೋಗಿ ಕಳ್ಳ ಜನರ ಕೈಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ಬಿಹಾರದ ಭಾಗಲ್ಪುರದ ಜಿಲ್ಲೆಯ ಶಿವನಾರಾಯಣಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಕಿಟಕಿಯ ಬಳಿ ಕುಳಿತಿದ್ದ ಪ್ರಯಾಣಿಕನಿಂದ ಫೋನ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದಾಗ, ಎಚ್ಚೆತ್ತ ಪ್ರಯಾಣಿಕರು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಆತ ಚಲಿಸುವ ರೈಲಿನ ಹೊರಗಡೆಯೇ ನೇತಾಡುತ್ತಾ ಸಾಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೈಲು ನಿಧಾನವಾಗಿ ನಿಲ್ದಾಣ ಬಿಟ್ಟು ಚಲಿಸಲು ಪ್ರಾರಂಭಿಸಿದಾಗ, ಕಿಟಕಿ ಹೊರಗಡೆಯಿಂದ ಯುವಕನೊಬ್ಬ ಪ್ರಯಾಣಿಕನ ಕೈಯಲ್ಲಿದ್ದ ಸ್ಮಾರ್ಟ್‌ಫೋನ್ ಕದಿಯಲು ಕೈಹಾಕಿದ್ದಾನೆ. ಆದರೆ ಪ್ರಯಾಣಿಕ ಹಾಗೂ ಪಕ್ಕದಲ್ಲಿದ್ದವರು ತಕ್ಷಣವೇ ಪ್ರತಿಕ್ರಿಯಿಸಿ ಆತನ ಮಣಿಕಟ್ಟನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ರೈಲು ವೇಗ ಪಡೆದುಕೊಳ್ಳುತ್ತಿದ್ದಂತೆ ಆತನಿಗೆ ಕೆಳಗೆ ಇಳಿಯಲು ಅಥವಾ ಕೈ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಿಟಕಿಯ ಸರಳುಗಳಿಗೆ ತೂಗಾಡುತ್ತಾ, ಪ್ಲಾಟ್‌ಫಾರ್ಮ್‌ನಲ್ಲಿ ಓಡಲಾಗದೆ, ತನ್ನನ್ನು ಬಿಟ್ಟುಬಿಡುವಂತೆ ಪ್ರಯಾಣಿಕರಲ್ಲಿ ಜೋರಾಗಿ ಅಂಗಲಾಚಿದ್ದಾನೆ.
ವಿಡಿಯೋ
A suspected thief was caught by passengers on a moving train at Shivanarayanpur Railway Station in Bihar’s Bhagalpur district.
They held him through the train window as it moved before he fell onto the platform. https://t.co/ZpiotUFGxs
— Gems Of Railway (@GemsOfRailway) October 13, 2026
ಪ್ಲಾಟ್‌ಫಾರ್ಮ್ ತುದಿಯಲ್ಲಿ ಪಲ್ಟಿ: ರೈಲು ಪ್ಲಾಟ್‌ಫಾರ್ಮ್‌ನ ಅಂಚಿಗೆ ತಲುಪುತ್ತಿದ್ದಂತೆ ಆತನ ಹಿಡಿತ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್‌ಪಿಎಫ್ ಹಾಗೂ ಜಿಆರ್‌ಪಿ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರ ಮತ್ತು ಬಂಗಾಳ ಗಡಿಭಾಗದ ನಿಲ್ದಾಣಗಳಲ್ಲಿ ರೈಲು ನಿಧಾನವಾಗುವ ಸ್ಥಳಗಳಲ್ಲಿ ಹಳಿಗಳ ಪಕ್ಕ ನಿಂತು ಕಿಟಕಿ ಪಕ್ಕ ಕುಳಿತಿರುವ ಪ್ರಯಾಣಿಕರ ಮೊಬೈಲ್ ಮತ್ತು ಬ್ಯಾಗ್‌ಗಳನ್ನು ಕಸಿಯುವ ಸಂಘಟಿತ ಗ್ಯಾಂಗ್‌ಗಳು ಸಕ್ರಿಯವಾಗಿವೆ.
ಮತ್ತಷ್ಟು ಓದಿ: Video: ಎರಡೂವರೆ ವರ್ಷಗಳ ಬಳಿಕ ಅಮೆರಿಕದಿಂದ ಮಗಳ ಆಗಮನ, ಕಣ್ಣೀರಿಟ್ಟ ಹೆತ್ತವರು
ಈ ಹಿಂದೆಯೂ ಬೇಗುಸರಾಯ್ ಮತ್ತು ಸುಲ್ತಾನ್‌ಗಂಜ್ ಮಾರ್ಗಗಳಲ್ಲಿ ಇದೇ ರೀತಿ ಮೊಬೈಲ್ ಕಳ್ಳರನ್ನು ಪ್ರಯಾಣಿಕರು ಕಿಟಕಿಯಲ್ಲೇ 10–15 ಕಿ.ಮೀ ದೂರದವರೆಗೆ ನೇತಾಡಿಸಿಕೊಂಡು ಮುಂದಿನ ನಿಲ್ದಾಣಕ್ಕೆ ತಂದು ಪೊಲೀಸರಿಗೆ ಒಪ್ಪಿಸಿದ ಘಟನೆಗಳು ನಡೆದು ವೈರಲ್ ಆಗಿದ್ದವು. ರೈಲು ನಿಲ್ದಾಣಗಳನ್ನು ಪ್ರವೇಶಿಸುವಾಗ ಅಥವಾ ಹೊರಡುವಾಗ ಕಿಟಕಿಯ ಬದಿಯಲ್ಲಿ ಕುಳಿತು ಮೊಬೈಲ್ ಬಳಸದಂತೆ ಹಾಗೂ ಜಾಗರೂಕರಾಗಿರುವಂತೆ ರೈಲ್ವೆ ರಕ್ಷಣಾ ಪಡೆ ಪ್ರಯಾಣಿಕರಿಗೆ ಮನವಿ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ